ಕರಾವಳಿ ಟಾಪ್ ನ್ಯೂಸ್
ಧರ್ಮಸ್ಥಳ ಪ್ರಕರಣ: ಯೂಟ್ಯೂಬರ್ ಗಳಿಗೆ ನೊಟೀಸ್!
* ಬಂಟ್ವಾಳ: ಪಾದಾಚಾರಿಗೆ ಡಿಕ್ಕಿ ಹೊಡೆದ ಆಟೋ
* ಉಡುಪಿ: ಅಕ್ರಮ ಮರಳು ಸಾಗಾಟ; ಪ್ರಕರಣ ದಾಖಲು
* ಕುಂದಾಪುರ: ರಸ್ತೆ ಅಪಘಾತ; ಬೈಕ್ ಸವಾರ ಸಾವು
* ಕಾರ್ಕಳ: ಮಗಳನ್ನೇ ಕೊಂದ ಹೆತ್ತ ತಾಯಿ!
* ಸುಳ್ಯ: ಜನ ಗಣತಿಗೆ ಹೋದ ಶಿಕ್ಷಕಿ ಮೇಲೆ ನಾಯಿ ದಾಳಿ!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬಂಟ್ವಾಳ: ಆಟೋ ಚಾಲಕ ಢಿಕ್ಕಿ ಹೊಡೆದ ಪರಿಣಾಮವಾಗಿ, ಪಾದಾಚಾರಿ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಕಲ್ಲಡ್ಕ ಸಮೀಪದ ಕೆ.ಸಿ.ರಸ್ತೆ ಬಳಿ ನಡೆದಿದೆ. ಅವರು ಕೆ ಸಿ ರಸ್ತೆ ಬಳಿಯ, ಪೆಟ್ರೋಲ್ ಬಂಕ್ ಮುಂಭಾಗ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಆಟೋ ಢಿಕ್ಕಿ ಹೊಡೆದಿದೆ. ಅದರ ರಭಸಕ್ಕೆ ಪಾದಾಚಾರಿ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡರು. ತಕ್ಷಣ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎನ್ನಲಾಗಿದೆ. ಆಟೋದಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಮೃತ ವ್ಯಕ್ತಿಯನ್ನು ಸಜೀಪಮೂಡ ಗ್ರಾಮದ ನಿವಾಸಿ ಲೋಕೇಶ್ ಮೂಲ್ಯ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣ: ಯೂಟ್ಯೂಬರ್ ಗಳಿಗೆ ನೊಟೀಸ್
ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆಯನ್ನು ತೀವ್ರಗೊಳಿಸಿದ್ದು, ಈ ಹಿನ್ನೆಲೆಯಲ್ಲಿ ಶುಕ್ರವಾರದಂದು ಸಮೀರ್, ಮುನಾಫ್, ಅಭಿಷೇಕ್ ಸೇರಿದಂತೆ ಇತರ ಯುಟ್ಯೂಬರ್ ಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಅನ್ನು ಕಳುಹಿಸಿದೆ.
• ಉಡುಪಿ: ಅಕ್ರಮ ಮರಳು ಸಾಗಾಟ; ಪ್ರಕರಣ ದಾಖಲು
ಉಡುಪಿ: ಉಪ್ಪೂರು ಅಪ್ಪಣ್ಣ ಕುದ್ರುವಿನ ನದಿ ತೀರದ ಸರ್ಕಾರಿ ಜಾಗದಲ್ಲಿ ಹಾಕಿದ್ದ, ಮರಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ, ಅಪರಾಧವನ್ನು ಬಯಲಿಗೆಳೆದಿದ್ದಾರೆ. ಲಾರಿಯನ್ನು ಪರಿಶೀಲಿಸಿದಾಗ 1.5 ಯುನಿಟ್ ನಷ್ಟು ಮರಳಿತ್ತು ಎಂದು ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕನನ್ನು ವಿಚಾರಿಸಿದಾಗ, ಲಾರಿ ಮಾಲೀಕರಾದ ಅರುಣ್ ಅವರ ಸೂಚನೆಯ ಮೇರೆಗೆ ಮರಳನ್ನು ಸಾಗಿಸಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ಲಾರಿ ಮಾಲೀಕನ ವಿರುದ್ಧ ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಕುಂದಾಪುರ: ರಸ್ತೆ ಅಪಘಾತ; ಬೈಕ್ ಸವಾರ ಸಾವು
ಕುಂದಾಪುರ: ವಿಜಯ ದಶಮಿಯ ಶಾರದಾ ಮೆರವಣಿಗೆ ನೋಡಿ, ಹಿಂತಿರುಗುತ್ತಿದ್ದ ಸಮಯದಲ್ಲಿ ಆಯಾ ತಪ್ಪಿ ಬಿದ್ದು, ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು, ಬೈಕ್ ಸವಾರ ಸಾವನ್ನಪ್ಪಿದ ಘಟನೆ ಗುರುವಾರ ನಡುರಾತ್ರಿ ಸಿದ್ದಾಪುರ ಸಮೀಪದ ಕೋಣಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಕೋಣಿಯ ನಿವಾಸಿ ಕೃಷ್ಣ ಪೂಜಾರಿ ಎಂದು ಹೇಳಲಾಗಿದ್ದು, ಕೋಣಿಯ ಗ್ರಾಮ ಪಂಚಾಯಿತಿ ಸಮಿಪ ಹಣ್ಣು ಮತ್ತು ತರಕಾರಿ ಅಂಗಡಿಯನ್ನು ಇಟ್ಟುಕೊಂಡಿದ್ದರು. ವಿದ್ಯುತ್ ಕಂಬ ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಕುಂದಾಪುರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಪರೀಕ್ಷಿಸಿದ ವೈದ್ಯರು ಕೃಷ್ಣ ಪೂಜಾರಿ ಆಗಲೇ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದರು. ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಕಾರ್ಕಳ: ಮಗಳನ್ನೇ ಕೊಂದ ಹೆತ್ತ ತಾಯಿ
ಕಾರ್ಕಳ : ಶಿಫನಾಜ್ ಎನ್ನುವ ಯುವತಿಯು ತನ್ನ ತಾಯಿಯಿಂದಲೇ ಸಾವನ್ನಪ್ಪಿದ ಘಟನೆ, ಕಾರ್ಕಳದ ಹಿರ್ಗಾನ ಗ್ರಾಮದಲ್ಲಿ ನಡೆದಿದೆ. ಶಿಫನಾಜ್ ತನ್ನ ಸ್ನೇಹಿತನನ್ನು ಭೇಟಿಯಾಗಲು ಉಡುಪಿಗೆ ಹೋಗುವುದಾಗಿ ತಿಳಿಸಿದ್ದಾಳೆ. ಇದಕ್ಕೆ ತಾಯಿ ಗುಲ್ಜಾರ್ ಬಾನು ವಿರೋಧ ವ್ಯಕ್ತಪಡಿಸಿದ್ದು, ತಾಯಿ ಮಗಳ ನಡುವೆ ಕಲಹವೇರ್ಪಟ್ಟಿದೆ. ಪರಿಣಾಮವಾಗಿ ಗುಲ್ಜಾರ್ ಬಾನು ಶಿಫನಾಜ್ ಕುತ್ತಿಗೆಯನ್ನು ಬಿಗಿದು ಉಸಿರುಗಟ್ಟಿಸಿ ಹತ್ಯೆಗೈದಿದ್ದಾರೆ. ಶಿಫನಾಜ್ ಅವರ ತಂದೆ ಶೇಖ್ ಮುಸ್ತಾಫ್ ಅವರು ದೂರು ನೀಡಿದ್ದು, ಪ್ರಾರಂಭದಲ್ಲಿ ಇದು ಆತ್ಮಹತ್ಯೆ ಎಂದು ಹೇಳಲಾಗಿತ್ತು. ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಶಿಫನಾಜ್ ಆತ್ಮಹತ್ಯೆ ಮಾಡಿಕೊಳ್ಳದೆ, ಆಕೆಯನ್ನು ಉಸಿರುಗಟ್ಟಿಸಿ ಹತ್ಯೆಗೈದಿರುವ ಸಂಗತಿ ಬಹಿರಂಗಗೊಂಡಿದೆ. ವಿಚಾರಣೆ ನಡೆಸಿದಾಗ ಗುಲ್ಜಾರ್ ಬಾನು ಕೊಲೆಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಗುಲ್ಜಾರ್ ಬಾನುವನ್ನು ಪೊಲೀಸರು ಬಂಧಿಸಿ, ಪ್ರಕರಣವನ್ನು ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
* ಸುಳ್ಯ: ಜನ ಗಣತಿಗೆ ಹೋದ ಶಿಕ್ಷಕಿ ಮೇಲೆ ನಾಯಿ ದಾಳಿ
ಸುಳ್ಯ: ಕೊಡಿಯಾಲದ ಮೂವಪ್ಪೆ ಶಾಲೆಯ ಶಿಕ್ಷಕಿಯೊಬ್ಬರು, ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಗೆ ಹೋದ ಸಂದರ್ಭದಲ್ಲಿ, ನಾಯಿಯೊಂದು ಮೈಮೇಲೆ ಹಾರಿ ದಾಳಿ ನಡೆಸಿದ ಘಟನೆ ನಿಡ್ಮಾರು ಗ್ರಾಮದಲ್ಲಿ ನಡೆದಿದೆ. ದಾಳಿ ನಡೆಸಿದ ಪರಿಣಾಮವಾಗಿ ಶಿಕ್ಷಕಿಯ ಬಟ್ಟೆ ಹರಿದಿದೆ. ನಾಯಿ ಕಚ್ಚುವ ಹೊತ್ತಿಗೆ ಸರಿಯಾಗಿ ಬಂದ ಮಾಲೀಕರು ಅದನ್ನು ಹಿಡಿದುಕೊಂಡಿರುವುದರಿಂದ ಶಿಕ್ಷಕಿ ಬಚಾವಾಗಿದ್ದಾರೆ. ಆದರೆ, ಭಯಭೀತರಾದ ಶಿಕ್ಷಕಿ ಗಣತಿಯನ್ನು ಮಾಡದೇ, ಮನೆಗೆ ಹಿಂತಿರುಗಿದ್ದಾರೆ. ನಾಯಿ ಸಾಕಿರುವ ಮನೆಗಳಲ್ಲಿ ಈ ರೀತಿಯ ಸಮಸ್ಯೆಗಳು ಎದುರಾಗುರುವುದರಿಂದ, ಗಣತಿ ಮುಗಿಯುವವರೆಗೆ ನಾಯಿಗಳನ್ನು ಕಟ್ಟಿ ಹಾಕಬೇಕೆಂದು ಗಣತಿದಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.







