ಕರಾವಳಿ ಟಾಪ್ ನ್ಯೂಸ್
* ಕುಂದಾಪುರ: ಬೈಕ್ ಸವಾರನ ಮೇಲೆ ಎರಗಿದ ಚಿರತೆ!
* ಬೆಳ್ತಂಗಡಿ: ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಆತ್ಮಹತ್ಯೆ
* ಬಂಟ್ವಾಳ: ಮಹಿಳೆಯ ಚಿನ್ನದ ಸರ ಕಳುವು
* ಕಡಬ: ಕಾರಿಗೆ ಹಾನಿಗೊಳಿಸಿದ ಆರೋಪಿ ಸೆರೆ
* ಪುತ್ತೂರು: ಬೈಕ್ ಮತ್ತು ಕಾರಿನ ನಡುವೆ ಅಪಘಾತ
* ಮಂಗಳೂರು: ಮದ್ಯಪಾನ ಮಾಡಿ ಕಾರು ಚಲಾಯಿಸಿದವ ಅರೆಸ್ಟ್!
* ಭಟ್ಕಳ: ಸ್ಕೂಟರ್ ಗೆ ಢಿಕ್ಕಿ ಹೊಡೆದ ಸರ್ಕಾರಿ ಬಸ್
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕುಂದಾಪುರ: ಕಟ್ಕೆರೆ ನಿವಾಸಿ ಮತ್ತು ಉದ್ಯಮಿಯಾಗಿರುವ ಪ್ರವೀಣ್ ಕುಮಾರ್ ಶೆಟ್ಟಿ ಅವರು, ಕುಂದಾಪುರದ ಕಚೇರಿಯಿಂದ ಮನೆಗೆ ಬೈಕ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ, ಚಿರತೆಯೊಂದು ಎರಗಿದ ಘಟನೆ ಕಟ್ಕೆರೆ ಮುಖ್ಯ ರಸ್ತೆಯ ಸಮೀಪದ ಕೈಗಾರಿಕಾ ವಲಯದಲ್ಲಿ ನಡೆದಿದೆ. ಪರಿಣಾಮವಾಗಿ ಬೈಕ್ ನಿಯಂತ್ರಣ ತಪ್ಪಿ, ಪ್ರವೀಣ್ ಕುಮಾರ್ ಅವರು ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿರತೆಯು ಸಮೀಪದಲ್ಲಿದ್ದ ಕಾಡಿನೊಳಗೆ ಮರೆಯಾಯಿತು ಎನ್ನುವ ಸಂಗತಿ ತಿಳಿದುಬಂದಿದೆ.
* ಬೆಳ್ತಂಗಡಿ: ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಆತ್ಮಹತ್ಯೆ
ಬೆಳ್ತಂಗಡಿ: ಮೂಲವ್ಯಾಧಿ ಹಾಗೂ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿ, ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುಂಜಾಲುಕಟ್ಟೆಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ತೆಂಕಕಜೆಕಾರು ಗ್ರಾಮದ ನಿವಾಸಿ ದಿನೇಶ್ ಎಂದು ಹೇಳಲಾಗಿದ್ದು, ಅವರ ಸಹೋದರ ದಯಾನಂದ್ ಅವರು ನೀಡಿದ ಹೇಳಿಕೆಯ ಆಧಾರದ ಮೇಲೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
* ಬಂಟ್ವಾಳ: ಮಹಿಳೆಯ ಚಿನ್ನದ ಸರ ಕಳುವು
ಬಂಟ್ವಾಳ: ಬಾಳ್ತಿಲ ಗ್ರಾಮದ ಚೆಂಡೆ ನಿವಾಸಿಯಾದ ಸರಸ್ವತಿ ಅವರು ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ, ಬೈಕ್ ಸವಾರನೊಬ್ಬ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆದುಕೊಂಡು, ಪರಾರಿಯಾದ ಘಟನೆ ದಾಸಕೋಡಿಯ ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿಯಲ್ಲಿ ನಡೆದಿದೆ. ಆತ ದಾಸಕೋಡಿಯಿಂದ ಮಾಣಿ ಕಡೆ ತೆರಳಿದ ಎಂದು ಸರಸ್ವತಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಕಡಬ: ಕಾರಿಗೆ ಹಾನಿಗೊಳಿಸಿದ ಆರೋಪಿ ಸೆರೆ
ಕಡಬ: ಕೊಣಾಲು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿಯಾದ ರಮಣಿ ಎನ್ನುವವರು, ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಗೆ ತೆರಳಿದ್ದ ಸಂದರ್ಭದಲ್ಲಿ, ಕಾರನ್ನು ಗಣತಿ ಮಾಡಲು ತೆರಳಿದ ಮನೆಯ ಸಮೀಪ ನಿಲ್ಲಿಸಿದಾಗ, ಶಂಕರ ಪಾಜೋವು ಎನ್ನುವವರು ಕಾರಿಗೆ ಕಬ್ಬಿಣದ ರಾಡ್ ನಿಂದ ಹೊಡೆದು, ಕಾರಿನ ಹಿಂಬದಿಯ ಗಾಜನ್ನು ಪುಡಿ ಮಾಡಿ ಹಾನಿಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಕಿಯಾದ ರಮಣಿಯವರು ಕಡಬ ಪೊಲೀಸರಿಗೆ ಹಾಗೂ ತಹಶೀಲ್ದಾರರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
* ಪುತ್ತೂರು: ಬೈಕ್ ಮತ್ತು ಕಾರಿನ ನಡುವೆ ಅಪಘಾತ
ಪುತ್ತೂರು: ದರ್ಶನ್ ಎನ್ನುವವರು ಚಿಕ್ಕಬಳ್ಳಾಪುರ ನಿವಾಸಿಯಾಗಿದ್ದು, ಮಂಗಳೂರಿಗೆ ಪ್ರವಾಸಕ್ಕೆಂದು ಕಾರಿನಲ್ಲಿ ಬಂದ ಸಂದರ್ಭದಲ್ಲಿ, ಬೆಂಗಳೂರು ಕಡೆಯಿಂದ ಬೈಕ್ ನಲ್ಲಿ ಬರುತ್ತಿದ್ದ ಸುಭಾಷ್ ಎನ್ನುವವರು ಢಿಕ್ಕಿ ಹೊಡೆದ ಘಟನೆ, ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಸಮೀಪದಲ್ಲಿ ನಡೆದಿದೆ. ಬೈಕ್ ಸವಾರ ಸುಭಾಷ್ ಮತ್ತೊಂದು ಕಾರನ್ನು ಓವರ್ ಟೇಕ್ ಮಾಡಿಕೊಂಡು ಬರುತ್ತಿದ್ದ ಕಾರಣ, ಎದುರಿನಿಂದ ಬಂದ ದರ್ಶನ್ ಅವರ ಕಾರಿಗೆ ಗುದ್ದಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಇದರ ಪರಿಣಾಮವಾಗಿ ಎರಡು ವಾಹನಗಳು ಜಖಂಗೊಂಡಿದ್ದು, ಬೈಕ್ ಸವಾರ ಸುಭಾಷ್ ಮತ್ತು ಅವರ ಜೊತೆಗಿದ್ದ ಸಹಸವಾರ ಅನಿಲ್ ಅವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದವರಿಗೆ ಯಾವುದೇ ರೀತಿಯ ತೊಂದರೆ ಸಂಭವಿಸಿಲ್ಲ ಎನ್ನಲಾಗಿದೆ. ಅಪಘಾತಕ್ಕೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
* ಮಂಗಳೂರು: ಮದ್ಯಪಾನ ಮಾಡಿ, ಕಾರು ಚಲಾಯಿಸಿದ ಆರೋಪಿಯ ವಿರುದ್ಧ ಪ್ರಕರಣ ದಾಖಲು.
ಮಂಗಳೂರು: ವ್ಯಕ್ತಿಯೊಬ್ಬ ಕುಡಿದು ಕಾರು ಚಲಾಯಿಸಿ ಪೊಲೀಸರಿಗೆ ಸೆರೆ ಸಿಕ್ಕ ಘಟನೆ, ನಂತೂರು ಜಂಕ್ಷನ್ ಬಳಿ ನಡೆದಿದೆ. ಕದ್ರಿ ಸಂಚಾರ ಠಾಣೆಯ ಪೊಲೀಸರು ಗಸ್ತಿನಲ್ಲಿರುವಾಗ ಕಾರೊಂದು ವೇಗವಾಗಿ ಬಂದಿದ್ದು, ಪೊಲೀಸರಿಗೆ ಚಾಲಕನ ಮೇಲೆ ಅನುಮಾನ ಬಂದ ಹಿನ್ನೆಲೆಯಲ್ಲಿ, ಕಾರನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ, ಚಾಲಕನಾದ ಶಿವಪ್ರಸನ್ನ ಉಡಾಫೆಯಿಂದ ಪೊಲೀಸರನ್ನು ನಿರ್ಲಕ್ಷಿಸಿ ಮುಂದಕ್ಕೆ ತೆರಳಿದ್ದಾನೆ. ಈ ಸಂದರ್ಭದಲ್ಲಿ ಕಾನ್ಸ್ಟೇಬಲ್ ಕಾರನ್ನು ತಡೆದು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಮತ್ತೋರ್ವ ಪೊಲೀಸ್ ಕಾನ್ಸ್ಟೇಬಲ್ ತನ್ನ ಮೊಬೈಲ್ ನಿಂದ ಬಡಿದು, ಕಾರಿನ ಗಾಜು ಒಡೆದಿದೆ. ಚಾಲಕನನ್ನು ಪರೀಕ್ಷೆಗೆ ಒಳಪಡಿಸಿದಾಗ ಪೊಲೀಸರ ಅನುಮಾನದಂತೆ ಆತ ಕುಡಿದು, ಕಾರು ಚಲಾಯಿಸಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಚಾಲಕನಿಗೆ ನ್ಯಾಯಾಲಯವು ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಕಳುಹಿಸಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
* ಭಟ್ಕಳ: ಸ್ಕೂಟರ್ ಗೆ ಢಿಕ್ಕಿ ಹೊಡೆದ ಸರ್ಕಾರಿ ಬಸ್
ಭಟ್ಕಳ: ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ, ಮೂಡಭಟ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಈ ಮಾರ್ಗದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಸರಣಿ ಅಪಘಾತಗಳು ನಡೆದು ಹಲವರು ಸಾವನ್ನಪ್ಪಿದ್ದರೂ, ಸಂಬಂಧಿತ ಇಲಾಖೆ ಸೂಕ್ತ ಕ್ರಮ ಕೈಗೊಂಡಿಲ್ಲವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ನಿನ್ನೆಯ ದಿನ ಮತ್ತೊಂದು ಅಪಘಾತ ಸಂಭವಿಸಿದ್ದು, ಪುರವರ್ಗದ ಸುಂದರ ಲಕ್ಷ್ಮಣ ಪೂಜಾರಿ ಎನ್ನುವ ವ್ಯಕ್ತಿ ಮೃತಪಟ್ಟಿದ್ದಾರೆ. ಸುಂದರ್ ಅವರು ಪುರವರ್ಗದಿಂದ ಭಟ್ಕಳಕ್ಕೆ ಸ್ಕೂಟರ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ, ಮಣಿಪಾಲದಿಂದ ಗೋಕರ್ಣಕ್ಕೆ ಹೋಗುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಹಿಂದಿನಿಂದ ಸ್ಕೂಟರ್ ಗೆ ಢಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ಸುಂದರ್ ಅವರು ರಸ್ತೆಗೆ ಬಿದ್ದಿದ್ದು, ತಕ್ಷಣ ಅವರ ತಲೆಯ ಮೇಲೆಯೇ ಬಸ್ಸಿನ ಚಕ್ರ ಹರಿದು, ತಲೆ ಛಿದ್ರಗೊಂಡು ಸ್ಥಳದಲ್ಲೇ ಸಾವನ್ನಪ್ಪಿದರು. ಸ್ಥಳಕ್ಕೆ ಆಗಮಿಸಿದ ನಗರದ ಪೊಲೀಸ್ ಇನ್ಸ್ಪೆಕ್ಟರ್ ದಿವಾಕರ್, ಸಬ್ ಇನ್ಸ್ಪೆಕ್ಟರ್ ನವೀನ್ ನಾಯಕ ಹಾಗೂ ಪೊಲೀಸ್ ಸಿಬ್ಬಂದಿಗಳು ಸಂಚಾರವನ್ನು ಸುಗಮಗೊಳಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲ್ಲೂಕು ಆಸ್ಪತ್ರೆಗೆ ರವಾನಿಸಿದರು. ಬಳಿಕ ಸುಂದರ್ ಅವರ ಮೃತದೇಹವನ್ನು ಕುಟುಂಬ ವರ್ಗದವರಿಗೆ ಹಸ್ತಾಂತರಿಸಲಾಯಿತು. ಘಟನೆಗೆ ಸಂಬಂಧಿಸಿದಂತೆ ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







