ಕರಾವಳಿ ಟಾಪ್ ನ್ಯೂಸ್
* ಕುಂದಾಪುರ: ಲೈಂಗಿಕ ಕಿರುಕುಳ: ಆರೋಪಿಗೆ ಜಾಮೀನು
* ಪುತ್ತೂರು: ಹಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿ ಪ್ರಾಣಾಪಾಯದಿಂದ ಪಾರು!
* ಮಂಗಳೂರು: ಮಾದಕ ವಸ್ತು ಮಾರಾಟ ಪ್ರಕರಣವನ್ನು ಭೇದಿಸಿದ ಪೊಲೀಸರು
* ಬಂಟ್ವಾಳ: 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
* ಬೆಳ್ತಂಗಡಿ: ನಿವೇಶನದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕುಂದಾಪುರ: ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ನವೀನ್ ಚಂದ್ರ ಶೆಟ್ಟಿ ವಿರುದ್ಧ, ಮನೆಗೆ ಬಂದ ಮಹಿಳೆಯೊಬ್ಬಳ ಜೊತೆಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ ಪ್ರಕರಣ ದಾಖಲಾಗಿತ್ತು. ಈತನ ಬಂಧನಕ್ಕಾಗಿ ಪ್ರತಿಭಟನೆಗಳು ನಡೆದಿದ್ದವು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನವೀನ್ ಚಂದ್ರ ರವಿಕಿರಣ್ ಎನ್ನುವ ವಕೀಲರ ಮೂಲಕ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಇದೀಗ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಕೆಲವು ಷರತ್ತುಗಳನ್ನು ವಿಧಿಸುವ ಮೂಲಕ, ನಿರೀಕ್ಷಣಾ ಜಾಮೀನನ್ನು ಮಂಜೂರು ಮಾಡಿದೆ.
* ಪುತ್ತೂರು: ಹಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿ ಪ್ರಾಣಾಪಾಯದಿಂದ ಪಾರು
ಪುತ್ತೂರು: ಶೀನಪ್ಪಾ ಗೌಡ ಎನ್ನುವ ವ್ಯಕ್ತಿಯು ವಿಷಕಾರಿ ಹಾವಿನಿಂದ ಕಚ್ಚಿಸಿಕೊಂಡು, ಪ್ರಾಣಾಪಾಯದಿಂದ ಪಾರಾದ ವಿಸ್ಮಯಕಾರಿ ಘಟನೆ ಪುತ್ತೂರಿನಲ್ಲಿ ನಡೆದಿದೆ. ಭಾನುವಾರದಂದು ಶೀನಪ್ಪ ಗೌಡರು ತಮ್ಮ ತೋಟಕ್ಕೆ ತೆರಳಿ, ಬಾಳೆಗೊನೆಯನ್ನು ತೆಗೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ, ನಾಗರಹಾವೊಂದು ಅವರ ಎಡಗಾಲಿನ ಹಿಂಭಾಗಕ್ಕೆ ಕಚ್ಚಿದ ಪರಿಣಾಮವಾಗಿ, ಶೀನಪ್ಪ ಗೌಡರು ಅಸ್ವಸ್ಥರಾಗಿದ್ದರು. ತಕ್ಷಣ ಮನೆಯವರು ಅವರನ್ನು ಪ್ರಥಮ ಚಿಕಿತ್ಸೆಗಾಗಿ ನೆಲ್ಯಾಡಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಮಧ್ಯಾಹ್ನದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಆದರ್ಶ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆ ಸಂದರ್ಭದಲ್ಲಿ ಶೀನಪ್ಪ ಗೌಡರು ವಿಷದ ಪ್ರಮಾಣದ ಏರಿಕೆಯಿಂದಾಗಿ ಪ್ರಜ್ಞಾ ಶೂನ್ಯರಾಗಿದ್ದರು. ಆದರ್ಶ ಆಸ್ಪತ್ರೆಯ ವೈದ್ಯರು ಅವರಿಗೆ ತುರ್ತು ಚಿಕಿತ್ಸೆಯನ್ನು ನೀಡಿ, ಸುಮಾರು 90 ಎಎಸ್ವಿ ಇಂಜೆಕ್ಷನ್ ನೀಡಿದ ಬಳಿಕ, ಶೀನಪ್ಪ ಗೌಡರಿಗೆ ಪ್ರಜ್ಞೆ ಬಂದಿದ್ದು, ಆ ಮೂಲಕ ಚೇತರಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
* ಮಂಗಳೂರು: ಮಾದಕ ವಸ್ತು ಮಾರಾಟ ಪ್ರಕರಣವನ್ನು ಭೇದಿಸಿದ ಪೊಲೀಸರು
ಮಂಗಳೂರು: ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣಗಳನ್ನು ಭೇದಿಸುವಲ್ಲಿ, ಮಂಗಳೂರಿನ ಪೊಲೀಸರು ಯಶಸ್ವಿಯಾಗಿದ್ದಾರೆ. ಮುಂಬೈನಿಂದ ಮಾದಕ ವಸ್ತುಗಳನ್ನು ಆಮದು ಮಾಡಿಕೊಂಡು, ಮಂಗಳೂರಿನಲ್ಲಿ ಮಾರಾಟ ಮಾಡಲಾಗುತ್ತಿದೆ ಎನ್ನುವ ಸುಳಿವು ದೊರೆತ ಹಿನ್ನೆಲೆಯಲ್ಲಿ, ಪೊಲೀಸರು ಕಾರ್ಯಪ್ರವೃತ್ತರಾಗಿದ್ದರು. ಆರೋಪಿಗಳನ್ನು ಪತ್ತೆ ಹಚ್ಚುವ ಮೂಲಕ ಆರು ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳ ವಿಚಾರಣೆ ನಡೆಸಿದಾಗ, ಈಗಾಗಲೇ ತಮ್ಮ ಬಳಿ ಇದ್ದ ಕೊಕೇನ್ ಎಂಬ ಮಾದಕ ವಸ್ತುವನ್ನು ಮೂರು ವ್ಯಕ್ತಿಗಳಿಗೆ ಮಾರಾಟ ಮಾಡಲಾಗಿದೆ ಎಂದು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಆರೋಪಿಗಳು ನೀಡಿದ ಮಾಹಿತಿಯ ಆಧಾರದ ಮೇಲೆ ಸಿಸಿಬಿ ಘಟಕದ ಉಪನಿರೀಕ್ಷಕರು ಭಾನುವಾರದಂದು ಮಂಗಳೂರಿನ ಸೆಂಟ್ರಲ್ ವೇರ್ ಹೌಸ್ ಬಳಿ ಸ್ಕೂಟರ್ ಮೇಲೆ ಕುಳಿತು ಹರಟೆ ಹೊಡೆಯುತ್ತಿದ್ದ, ಜಗನ್ನಾಥ್, ರಾಜೇಶ್ ಬಂಗೇರ ಮತ್ತು ವರುಣ್ ಗಾಣಿಗ ಅವರ ಮೇಲೆ ದಾಳಿ ನಡೆಸಿದ್ದಾರೆ. ಮೂವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಅವರನ್ನು ಕೂಡ ಸೆರೆಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರು ಮಂದಿ ಆರೋಪಿಗಳಿಂದ ಸುಮಾರು 22.30 ಲಕ್ಷ ರೂಪಾಯಿ ಮೌಲ್ಯದ 111.83ಗ್ರಾಂ ಎಂಡಿಎಂಎ ಮತ್ತು 1.90 ಲಕ್ಷ ಮೌಲ್ಯದ 21.03 ಗ್ರಾಂ ಕೊಕೇನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಎನ್ ಡಿಪಿಎಸ್ ಕಾಯ್ದೆ 8(ಸಿ), 21 (ಸಿ), 22 (ಸಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
* ಬಂಟ್ವಾಳ: ಹತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಬಂಟ್ವಾಳ: ಕಳೆದ 10 ವರ್ಷಗಳ ಹಿಂದೆ ಅಕ್ಟೋಬರ್ ಏಳರಂದು ವಿಟ್ಲ ಪೇಟೆಯಲ್ಲಿ, ಜಗದೀಶ್ ಕಾಮತ್ ಎನ್ನುವ ವ್ಯಕ್ತಿಯ ಮೇಲೆ ಮೆಣಸಿನ ಪುಡಿ ಎರಚಿ, ದರೋಡೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಆರೋಪಿಯಾದ ಅಶ್ರಫ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಲ್ಲದೆ 2016ರ ಜನವರಿ 23ರಂದು ಕೊಳ್ನಾಡು ಗ್ರಾಮದ ಮದ್ಯದಂಗಡಿಯ ಬಾಗಿಲು ಮುರಿದು, ಕಳ್ಳತನ ಮಾಡಿದ ಮತ್ತೊಂದು ಪ್ರಕರಣ ಕೂಡ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ 82 ಮತ್ತು 83 ವಾರೆಂಟ್ ಅನ್ನು ಜಾರಿಗೊಳಿಸಲಾಗಿತ್ತು. ಆದರೂ ಅಶ್ರಫ್ ಪೊಲೀಸರ ಕೈಗೆ ಸಿಗದೇ ಕಳೆದ ಹತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಇದೀಗ ಪೊಲೀಸರು ಆತನನ್ನು ಮಂಜೇಶ್ವರದ ಕೂಳೂರಿನಲ್ಲಿ ಭಾನುವಾರದಂದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅಶ್ರಫ್ ಗೆ ನ್ಯಾಯಾಂಗ ಬಂಧನ ವಿಧಿಸಿದೆ.
* ಬೆಳ್ತಂಗಡಿ: ನಿವೇಶನದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ.
ಬೆಳ್ತಂಗಡಿ: ಪ್ರವೀಣ್ ಭಂಡಾರಿ ಮತ್ತು ಶಾಂತ ಎಂಬ ಇಬ್ಬರು ವ್ಯಕ್ತಿಗಳು, ನಿವೇಶನ ಪರವಾನಿಗೆ ಮಾಡಿಸಿ ಕೊಡುವುದಾಗಿ ನಂಬಿಸಿ, 45 ಲಕ್ಷ ರೂಪಾಯಿ ಲಪಟಾಯಿಸಿದ ಘಟನೆ ನಡೆದಿದೆ. ಪ್ರವೀಣ್ ಭಂಡಾರಿ ಶಾಂತ ಅವರಿಂದ ಒಟ್ಟು 4೦ ಸೈಂಟ್ಸ್ ಜಾಗವನ್ನು ಖರೀದಿಸಿ, ಅದನ್ನು ವಿಶ್ವನಾಥ ರೈ ಎನ್ನುವವರಿಗೆ ಮಾರಾಟ ಮಾಡುವುದಾಗಿ ತಿಳಿಸಿ, 45 ಲಕ್ಷ ರೂಪಾಯಿ ಪಡೆದುಕೊಂಡಿದ್ದು, ಮೂರು ತಿಂಗಳ ಒಳಗಾಗಿ ದಾಖಲೆಗಳನ್ನು ಸರಿಪಡಿಸಿ ಬರೆದುಕೊಡುವುದಾಗಿ ಕಳೆದ ವರ್ಷ ಕರಾರುಪತ್ರ ಮಾಡಿಕೊಂಡಿದ್ದರು. ಅತ್ತ ನಿವೇಶನವನ್ನು ಮಾರಾಟ ಮಾಡದೆ, ಈ ಕಡೆ ಹಣವನ್ನೂ ಹಿಂತಿರುಗಿಸದೆ ವಿಶ್ವನಾಥ ರೈ ಅವರನ್ನು ವಂಚಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವನಾಥ ರೈ ಅವರು ಪ್ರವೀಣ್ ಭಂಡಾರಿ ಮತ್ತು ಶಾಂತ ವಿರುದ್ಧ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಶನಿವಾರದಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.







