ಉಳ್ಳಾಲ: ಪಿಯುಸಿ ವಿದ್ಯಾರ್ಥಿಗಳಿಬ್ಬರು ನೀರುಪಾಲು
ಬಡಗನ್ನೂರು: ರಕ್ತ ವಾಂತಿ ಮಾಡಿಕೊಂಡು ವ್ಯಕ್ತಿ ಸಾವು
ಸುರತ್ಕಲ್: ಟೋಲ್ ಗೇಟ್ ಗೆ ಡಿಕ್ಕಿ ಹೊಡೆದ ಟ್ರಕ್!
ಹೆಬ್ರಿ : ಅಕ್ರಮ ಮರಳು ಸಾಗಾಟ: ಟಿಪ್ಪರ್ ವಶ
NAMMUR EXPRESS NEWS
ಉಳ್ಳಾಲ : ಸೋಮೇಶ್ವರ ಸಮುದ್ರದ ನೀರಿನಲ್ಲಿ ಆಡಲು ಇಳಿದ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾಗಿದ್ದಾರೆ. ಸೋಮೇಶ್ವರ ಪರಿಜ್ಞಾನ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳಾದ ಮಂಜೇಶ್ವರ ಕುಂಜತ್ತೂರು ಅಡ್ಕ ನಿವಾಸಿ ಯಶ್ವಿತ್(17) ಮತ್ತು ಕುಂಜತ್ತೂರು ಮಜಲ್ ನಿವಾಸಿ ಯುವರಾಜ್ (17) ಸಮುದ್ರಪಾಲಾದವರು. ಶನಿವಾರ ಮಧ್ಯಾಹ್ನ ಬಳಿಕ ನಾಲ್ವರು ವಿದ್ಯಾರ್ಥಿಗಳು ಸೋಮೇಶ್ವರ ಸೋಮನಾಥ ದೇವಸ್ಥಾನಕ್ಕೆ ಆಗಮಿಸಿ ಅನ್ನಪ್ರಸಾದ ಸ್ವೀಕರಿಸಿದ ಬಳಿಕ ಕಡಲ ಕಿನಾರೆಗೆ ಹೋಗಿ ನೀರಾಟದಲ್ಲಿ ತೊಡಗಿದ್ದರು. ಈ ಸಂದರ್ಭ ಬಂದ ಬೃಹತ್ ಅಲೆಯ ಹೊಡೆತಕ್ಕೆ ಸಿಲುಕಿದ ಯಶ್ವಿತ್ ಮತ್ತು ಯುವರಾಜ್ ಸಮುದ್ರಪಾಲಾದರು. ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಈಜು ತಜ್ಞರು ಸ್ಥಳಕ್ಕೆ ಧಾವಿಸಿ ನೀರುಪಾಲಾದ ವಿದ್ಯಾರ್ಥಿಗಳ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಕ್ತ ವಾಂತಿ ಮಾಡಿಕೊಂಡು ವ್ಯಕ್ತಿ ಸಾವು
ಬಡಗನ್ನೂರು : ಇಲ್ಲಿನ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗುರುಪ್ರಸಾದ್ ರೈ ಕುದ್ಮಾಡಿ ಡಿ. 9ರಂದು ದಿಢೀರ್ ಅಸ್ವಸ್ಥಗೊಂಡು ವೆನ್ಹಾಕ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.ಡಿ. 8ರಂದು ಮೈಂದನಡ್ಕದಲ್ಲಿ ನಡೆದಿದ್ದ ವಾಲಿಬಾಲ್ ಪಂದ್ಯಾಟವೊಂದರಲ್ಲಿ ಭಾಗವಹಿಸಿ ರಾತ್ರಿ ಮನೆಗೆ ಬಂದಿದ್ದ ಅವರು ದಿಢೀರ್ ರಕ್ತವಾಂತಿ ಮಾಡಲಾರಂಭಿಸಿದ್ದರು. ಡಿ. 9ರಂದು ಬೆಳಗ್ಗೆ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ವೆನ್ಹಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಬಡಗನ್ನೂರು ಗ್ರಾಮ ಪಂಚಾಯತ್ನ ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿ ಒಂದು ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದ ಇವರು, ಕೋಟಿ ಚೆನ್ನಯ ಯುವಕ ಮಂಡಲ ಸೇರಿದಂತೆ ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡು ಚಿರಪರಿಚಿತರಾಗಿದ್ದರು
ಟೋಲ್ ಗೇಟ್ ಗೆ ಡಿಕ್ಕಿ ಹೊಡೆದ ಟ್ರಕ್!
ಸುರತ್ಕಲ್ : ಶನಿವಾರ ರಾತ್ರಿ ಮಳೆಗೆ ಸುರತ್ಕಲ್ ನಲ್ಲಿರುವ ಟೋಲ್ ಗೇಟ್ ಗೆ ಟ್ರಕ್ ವೊಂದು ಡಿಕ್ಕಿ ಹೊಡೆದ ಘಟನೆ ನಡೆದಿದೆ. ಟೋಲ್ ಸಂಗ್ರಹ ನಿಂತ ಬಳಿಕ ಅಲ್ಲಿನ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದ್ದು, ಕತ್ತಲಲ್ಲಿ ದಿಢೀರ್ ಎದುರಾಗುವ ಟೋಲ್ ಕಂಬಗಳು ಅಪಘಾತದ ಸ್ಪಾಟ್ ಆಗಿ ಬದಲಾಗಿದೆ. ಅಪಘಾತದ ಪರಿಣಾಮ ಕಂಬಗಳು ಜಾರಿ ಕುಸಿಯುವ ಭೀತಿ ಮೂಡಿಸಿದೆ.
ಅಕ್ರಮ ಮರಳು ಸಾಗಾಟ: ಟಿಪ್ಪರ್ ವಶ
ಹೆಬ್ರಿ : ಹಿರಿಯಡಕ ಪೊಲೀಸ್ ಠಾಣಾ ಮುಂಭಾಗದಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ ಟಿಪ್ಪರ್ ವಾಹನದಲ್ಲಿ ಹಿರಿಯಡಕ ಜಂಕ್ಷನ್ನಿಂದ ಮಣಿಪಾಲ ಕಡೆಗೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದವರನ್ನು ತಡೆದು ನಿಲ್ಲಿಸಿದಾಗ ಚಾಲಕ ಪರಾರಿಯಾದ ಘಟನೆ ನಡೆದಿದೆ. ಟಿಪ್ಪರ್ ವಾಹನವನ್ನು ಪರಿಶೀಲಿಸಿದಾಗ ಸುಮಾರು 12 ಸಾವಿರ ರೂ. ಮರಳನ್ನು ಯಾವುದೇ ಪರವಾನಿಗೆ ಇಲ್ಲದೇ ಕಳ್ಳತನ ಮಾಡಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದ್ದು ವಾಹನ ಸಹಿತ ವಶಪಡಿಸಿಕೊಂಡು ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.