ಕಾಂತರ -1 ರಲ್ಲಿ ಮಲೆನಾಡ ಪ್ರತಿಭೆ ಶೃಂಗೇರಿಯ ರೇವಂತ್ ನಾಯಕ್
* ಚಿತ್ರದಲ್ಲಿ ಮಲೆನಾಡಿನ ಅನೇಕ ಕಲಾವಿದರ ನಟನೆ
* ಹಲವು ಸೀರಿಯಲ್,ಚಲನಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡ ಯುವ ಕಲಾವಿದ
NAMMMUR EXPRESS NEWS
ಶೃಂಗೇರಿ: ಭಾರತೀಯ ಚಿತ್ರರಂಗದ ಇತಿಹಾಸದಲ್ಲಿನ ಎಲ್ಲಾ ದಾಖಲೇಗಳನ್ನು ಮುರಿದು ಮುನ್ನುಗ್ಗುತ್ತಿರುವ ಸ್ಯಾಂಡಲ್ವುಡ್ನ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ರಚಿಸಿ, ನಿರ್ದೇಶಿಸಿ, ನಟಿಸಿರುವ ಕನ್ನಡಿಗರ ಹೆಮ್ಮೆಯ ಚಲನಚಿತ್ರ ಕಾಂತರ -1 ಬಾಕ್ಸ್ಆಫೀಸ್ನಲ್ಲಿ ದಾಖಲೆಗಳನ್ನು ನಿರ್ಮಿಸುತ್ತಾ ದೇಶ ವಿದೇಶದಾದ್ಯಂತ ಭರ್ಜರಿ ಪ್ರದರ್ಶನಗೊಳ್ಳುತ್ತಾ ವೀಕ್ಷರಿಂದ ಮೆಚ್ಚುಗೆ ಪಡೆಯುತ್ತಿದೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಅನೇಕ ಕಲಾವಿದರ ದಂಡೇ ಇದ್ದು ಜೊತೆಗೆ ಅನೇಕ ಉದಯೋನ್ಮುಖ ಕಲಾವಿದರಿಗೆ ನಟನೆಗೆ ಅವಕಾಶ ಕಲ್ಪಿಸಲಾಗಿದ್ದು,ಮಲೆನಾಡಿನ ಅನೇಕ ಕಲಾವಿದರು ಚಿತ್ರತಂಡದೊಂದಿಗೆ ಕೆಲಸ ಮಾಡಿದ್ದಾರೆ. ಇದರೊಂದಿಗೆ ಕಾಂತಾರ – 1 ರಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಲ್ಲದೇ, ಚಿತ್ರದ ಯಶಸ್ಸಿನಲ್ಲಿ ಕೈಜೋಡಿಸಿದ್ದಾರೆ.
* ಕಾಂತಾರ ಚಾಪ್ಟರ್ -1 ರಲ್ಲಿ ಶೃಂಗೇರಿಯ ಕಲಾವಿದ ರೇವಂತ್ ನಾಯಕ್
ಹಲವು ವರ್ಷಗಳಿಂದ ಅನೇಕ ಕಿರುಚಿತ್ರ,ಧಾರಾವಾಹಿ,ಚಲನಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡ ಮಲೆನಾಡು ಶೃಂಗೇರಿಯ ಯುವ ಕಲಾವಿದ ರೇವಂತ್ ನಾಯಕ್ ಈ ಚಿತ್ರದಲ್ಲಿ ಅಭಿನಯಿಸಿದ್ದು,ಅಭಿನಯದ ಸಣ್ಣ ಪಾತ್ರದಲ್ಲೇ ಚಿತ್ರ ತಂಡ ಹಾಗೂ ಜನರ ಮೆಚ್ಚುಗೆ ಗಳಿಸಿದ್ದಾರೆ.
ರೇವಂತ್ ಶೃಂಗೇರಿಯಲ್ಲಿ ಕೂಲಿ ಕೆಲಸ ಮಾಡಿಕೊಂಡು ನಂತರ ಪಟ್ಟಣದ ಕಟ್ಟೇಬಾಗಿಲಿನಲ್ಲಿ ಹೂವಿನ ವ್ಯಾಪಾರ ಮಾಡುವುದರ ಜೊತೆಗೆ ತನಗಿರುವ ನಟನೆಯ ಆಸಕ್ತಿಯನ್ನು ಬೆಳೆಸುವ ಸಲುವಾಗಿ ಶೃಂಗೇರಿ,ಬೆಂಗಳೂರು,ಮಂಗಳೂರಿನಲ್ಲಿ ಹಲವು ನಾಟಕಗಳಲ್ಲಿ ನಟಿಸಿ ಹಾಗೆ ಕಿರುಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿ ಮತ್ತು ಕನ್ನಡ ಕಿರುತೆರೆಯ ಜನಪ್ರಿಯ ಧಾರವಾಹಿಗಳಾದ “ನನ್ನರಸಿ ರಾಧೆ,ಗಟ್ಟಿಮೇಳ,ಶಾಂತಂ ಪಾಪಂ,ಸ್ನೇಹದ ಕಡಲಲ್ಲಿ,ಗಂಧದ ಗುಡಿ”ಯಲ್ಲಿ ನಟಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು. ತನ್ನಲ್ಲಿರುವ ಕಲೆಯನ್ನು ಆರಾಧಿಸುತ್ತಾ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಸುಮಾರು 13 ಚಿತ್ರಗಳಲ್ಲಿ ನಟಿಸಿದ್ದಾರೆ.ಇವುಗಳಲ್ಲಿ ಭಗೀರ, ಮಾರ್ನಮಿ,ವೈಶಂಪಾಯನ ತೀರ ಚಿತ್ರಗಳು ಯಶಸ್ವಿ ಪ್ರದರ್ಶನಗೊಂಡಿದ್ದು,ಜ್ವಾಲಾಮೂರ್ತಿ ಎಂಬ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಇನ್ನು ತೆರೆಗೆ ಬರಬೇಕಿದೆ. ಸದ್ಯ ಕಾಂತಾರ ಚಾಪ್ಟರ್-1ರಲ್ಲಿ ರೇವಂತ್ ನಾಯಕ್ ಕಾಣಿಸಿಕೊಂಡಿದ್ದಾರೆ.ಈ ಚಿತ್ರ ಪ್ರಪಂಚದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು,ಮಲೆನಾಡಿಗರು ಹೆಮ್ಮೆಪಡುವ ಸಂಗತಿಯಾಗಿದೆ.
ಕನ್ನಡ ಚಿತ್ರರಂಗಕ್ಕೆ ಮಲೆನಾಡಿನ ಪ್ರತಿಭೆಗಳು ಪಾದಾರ್ಪಣೆ ಮಾಡುತ್ತಿದ್ದು ಇವರ ಕಲೆಯನ್ನು ಬೆಳೆಸಬೇಕಿದೆ. ಇನ್ನೂ ಉತ್ತಮ ಅವಕಾಶಗಳು ದೊರೆತು ಮಲೆನಾಡಿಗೆ ಕೀರ್ತಿ ತರುವಂತಾಗಲಿ ಎಂದು ನಮ್ಮೂರ್ ಎಕ್ಸ್ಪ್ರೆಸ್ ಹಾರೈಸುತ್ತಿದೆ.








