ಕಾಡುಕೋಣ ದಾಳಿ: ಚಿಕಿತ್ಸೆ ಪಲಿಸದೆ ಸಾವು!
– ಮೂಡಿಗೆರೆ ಬಾಳೂರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರೈತ
– ಕಾಡುಕೋಣಗಳ ನಿಯಂತ್ರಣಕ್ಕೆ ಗ್ರಾಮಸ್ಥರ ಪಟ್ಟು
NAMMUR EXPRESS NEWS
ಮೂಡಿಗೆರೆ: ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿಯ ಜಾವಳಿ ಗ್ರಾಮದಲ್ಲಿ ಕಾಡುಕೋಣ ದಾಳಿಯಿಂದ ರೈತ ರಾಜು (60) ಎಂಬುವರು ಗಾಯಗೊಂಡಿದ್ದು ಚಿಕಿತ್ಸೆಫಲ ನೀಡದೆ ಮೃತಪಟ್ಟಿದ್ದಾರೆ.
ರಾಜು ಅವರು ಮನೆಯ ಸಮೀಪದ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡುಕೋಣ ದಾಳಿ ನಡೆಸಿ ತೊಡೆ, ಹೊಟ್ಟೆಯ ಭಾಗಕ್ಕೆ ಗಾಯಗೊಳಿಸಿದ್ದು, ರಾಜು ಅವರ ಕಿರುಚಾಟವನ್ನು ಕೇಳಿ ಅಕ್ಕಪಕ್ಕದ ಮನೆಯವರು ಬಂದಾಗ ಕಾಡುಕೋಣ ಸ್ಥಳದಿಂದ ಓಡಿದೆ. ತಕ್ಷಣವೇ ರಾಜು ಅವರನ್ನು ಬಣಕಲ್ ಖಾಸಗಿ ಆಸ್ಪತ್ರೆಗೆ ಕರೆ ತಂದಿದ್ದು, ಪ್ರಥಮ ಚಿಕಿತ್ಸೆ ನೀಡಿ, ಬಳಿಕ ಪಟ್ಟಣದ ಎಂಜಿಎಂ ಆಸ್ಪತ್ರೆಗೆ ರವಾನಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಚಿಕ್ಕಮಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರು ಚಿಕಿತ್ಸೆಫಲ ನೀಡದೆ ಮೃತಪಟ್ಟಿದ್ದಾರೆ.
2 ತಿಂಗಳ ಹಿಂದೆ ಇದೇ ಪ್ರದೇಶದ ದುರ್ಗದಹಳ್ಳಿಯಲ್ಲಿ ಕಾಡುಕೋಣ ತಿವಿದು ರೈತರೊಬ್ಬರು ಮೃತಪಟ್ಟಿದ್ದರು. ಜಾವಳಿ ಹಾಗೂ ಸುಂಕಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡುಕೋಣ ಹಾವಳಿ ಹೆಚ್ಚಾಗಿದ್ದು, ಬೆಳೆ ಹಾನಿ ಮಾಡುವುದಲ್ಲದೆ ಜೀವ ಹಾನಿಯೂ ಸಂಭವಿಸುತ್ತಿವೆ. ಕೂಡಲೇ ಅರಣ್ಯ ಇಲಾಖೆಯು ಕಾಡುಕೋಣಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಆಸ್ಪತ್ರೆ ಎದುರಿನಲ್ಲಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.







