- ಕುವೆಂಪು ಅವರ ಪುಣ್ಯ ಸ್ಮರಣೆ: ಕವಿಗೆ ನಮನ
- ಕುಪ್ಪಳಿಯಲ್ಲಿ ಸಮಾಧಿಗೆ ಗೌರವ ಸಲ್ಲಿಕೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಯುಗದ ಕವಿ ಜಗದ ಕವಿ ರಾಷ್ಟ್ರಕವಿ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರ ಪುಣ್ಯ ಸ್ಮರಣೆಯನ್ನು ಎಲ್ಲೆಡೆ ಆಚರಣೆ ಮಾಡಲಾಗುತ್ತಿದೆ.
ವಿಶ್ವ ಮಾನವ ಸಂದೇಶ ಸಾರಿರುವ ಕುವೆಂಪು ಅವರ ಸಾಹಿತ್ಯ ಕನ್ನಡದ ಮೇರು ಸಾಹಿತ್ಯ. ಡಿಸೆಂಬರ್ 29, 1904ರಲ್ಲಿ ಹಿರೇಕೊಡಿಗೆಯಲ್ಲಿ ಜನಿಸಿದ್ದ ಕುವೆಂಪು ಕನ್ನಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿ ಹೆಸರು ಮಾಡಿದವರು. ಕುವೆಂಪು ಅಂದರೆ ಶಕ್ತಿ, ಕುವೆಂಪು ಅಂದರೆ ಯುಕ್ತಿ. ನವೆಂಬರ್ 11, 1994
ಮೈಸೂರಲ್ಲಿ ಅವರು ನಿಧನರಾದರು. ಅವರ ಸಾವಿನ ಬಳಿಕವೂ ಅವರು ಬಿತ್ತಿದ ಚಿಂತನೆ, ಸಾಹಿತ್ಯ ಇಡೀ ದೇಶದಲ್ಲಿ ಅವರ ಹೆಸರನ್ನು ಜೀವಂತವಾಗಿಟ್ಟಿದೆ.
ಸಣ್ಣಕತೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಆತ್ಮಕಥೆ, ಜೀವನ ಚರಿತ್ರೆ, ಮಹಾಕಾವ್ಯ ಸೇರಿದಂತೆ ಸಾಹಿತ್ಯದ ಎಲ್ಲಾ ಕ್ಷೇತ್ರದಲ್ಲೂ ಅವರ ಸೇವೆ ಅಪಾರ. ಪ್ರೇಮ, ದೇಶಪ್ರೇಮ, ಪ್ರಕೃತಿ, ಅಧ್ಯಾತ್ಮ, ವಿಚಾರ, ಸಾಹಿತ್ಯ ಚಳುವಳಿ, ನವೋದಯ ಸಾಹಿತ್ಯದ ಮುಂಚೂಣಿ ಕವಿ.
ಜ್ಞಾನಪೀಠ ಪ್ರಶಸ್ತಿ, ಪದ್ಮ ವಿಭೂಷಣ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ಪಂಪ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿ ಗೌರವಗಳು ಸಂದವು.
ಕುವೆಂಪು ಅವರ ಹುಟ್ಟೂರು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯಲ್ಲಿ ಅವರ ಮನೆ, ಅವರ ಜೀವನ ಕಥೆ ಹೇಳುವ ಸ್ಮಾರಕ ಭವನ, ಸಮಾಧಿ ಇಂದಿಗೂ ಅವರನ್ನು ನೋಡುವ ಭಾಗ್ಯ ಕಲ್ಪಿಸಿದೆ.
ಕುವೆಂಪು ಸಮಾಧಿಗೆ ನಮನ
ಕುಪ್ಪಳಿಯಲ್ಲಿ ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್, ಖಜಾಂಚಿ ಮನುದೇವ್, ಸಿಬ್ಬಂದಿ ವರ್ಗದವರು, ಸ್ಥಳೀಯರು ಕುವೆಂಪು ಪುಣ್ಯ ಸ್ಮರಣೆಯಂದು ಕುವೆಂಪು ಸಮಾಧಿಗೆ ನಮನ ಸಲ್ಲಿಸಿದರು.