- ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆ
- ಬಿಎಸ್ ವೈಗೆ ಶಾಲು ಹೊದಿಸಿ ವಿಶೇಷ ಸನ್ಮಾನ
- ಮಲೆನಾಡಲ್ಲಿ ಎಲ್ಲೆಲ್ಲೂ ಸಂಭ್ರಮ… ಸಡಗರ
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗದ ಪಾಲಿಗೆ ಸೋಮವಾರ ಐತಿಹಾಸಿಕ ದಿನ. ಪ್ರಧಾನಿ ನರೇಂದ್ರ ಮೋದಿ ಸೋಗಾನೆಯ ನೂತನ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದ್ದು ಶಿವಮೊಗ್ಗ ಹಾಗೂ ಮಲೆನಾಡಿಗೆ ಹೊಸ ಐತಿಹ್ಯ ಬರೆದಿದೆ.
ವಿಮಾನ ನಿಲ್ದಾಣ ಮಾತ್ರವಲ್ಲದೆ ವಿವಿಧ 7,165 ಕೋಟಿ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಮೂಲೆ ಮೂಲೆಯಿಂದ ಜನ ಆಗಮಿಸಿದ್ದು, ಎಲ್ಲರಿಗೂ ಅವಕಾಶ ಕಲ್ಪಿಸಲಾಗಿತ್ತು.
ಮೋದಿ ಅವರು ದೆಹಲಿಯಿಂದ ವಿಮಾನದ ಮೂಲಕ ಆಗಮಿಸಿ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದರು. ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ರಾಘವೇಂದ್ರ ಸೇರಿದಂತೆ ಬಹುತೇಕ ನಾಯಕರು ಹಾಜರಿದ್ದರು. ಈ ವೇಳೆ ಯಡಿಯೂರಪ್ಪ ಅವರಿಗೆ ಸಭೆಯಲ್ಲಿ ಶಾಲು ಹೊದಿಸಿ ಸನ್ಮಾನ ಮಾಡಿದರು. ಅಲ್ಲದೆ ಯಡಿಯೂರಪ್ಪ ಅವರ ಸೇವೆಯನ್ನು ಗುಣಗಾನ ಮಾಡಿದರು.
ಯಡಿಯೂರಪ್ಪನವರ 80ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯ ವಿಶೇಷ ಉಡುಗೊರೆಯನ್ನು ನೀಡಿ ಗೌರವಿಸಲಾಗಿದೆ.
995 ಕೋಟಿ ವೆಚ್ಚದ 96 ಕಿ.ಮೀ. ಉದ್ದದ ರೈಲು ಮಾರ್ಗಕ್ಕೆ ಅಡಿಗಲ್ಲು ಹಾಗೂ ಶಿವಮೊಗ್ಗ- ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗಕ್ಕೆ ಶಂಕುಸ್ಥಾಪನೆ , 105 ಕೋಟಿ ವೆಚ್ಚದಲ್ಲಿ ಕೋಟೆಗಂಗೂರಿನಲ್ಲಿ ರೈಲ್ವೇ ಕೋಚಿಂಗ್ ಡಿಪೋ, 953 ಕೋಟಿ ಮೊತ್ತದ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದಾರೆ.
66.44 ಕೋಟಿ ವೆಚ್ಚದ ಬೈಂದೂರು-ರಾಣೆಬೆನ್ನೂರು ರಸ್ತೆ ಬೈಪಾಸ್, 96.20 ಕೋಟಿ ವೆಚ್ಚದಲ್ಲಿ ತೀರ್ಥಹಳ್ಳಿ-ಮಲ್ಪೆ ದ್ವಿಪಥ ರಸ್ತೆ ಅಗಲೀಕರಣ ಮತ್ತು ಶಿವಮೊಗ್ಗ-ಮಂಗಳೂರು ರಸ್ತೆ ಭಾರತೀಪುರ ಬಳಿ ರಸ್ತೆ ನಿರ್ಮಾಣ, 896.16 ಕೋಟಿ ವೆಚ್ಚದ 44 ಸ್ಮಾಟ್ರ್ಸಿಟಿ ಯೋಜನೆಗಳ ಉದ್ಘಾಟನೆ ಮಾಡಿದರು.
45 ಕೋಟಿ ವೆಚ್ಚದ ಶಿಮುಲ್ ಹಾಲು, ಮೊಸರು ಮತ್ತು ಮಜ್ಜಿಗೆ ಪ್ಯಾಕಿಂಗ್ ಘಟಕ, ಎಪಿಎಂಸಿ ಆವರಣದಲ್ಲಿ 8 ಕೋಟಿ ವೆಚ್ಚದ ಮ್ಯಾಮ್ಕೋಸ್ ಆಡಳಿತ ಕಚೇರಿ, ಮೇಗರವಳ್ಳಿ-ಆಗುಂಬೆವರೆಗೆ 96 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ನೂರಾರು ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಮಾಡಿದ್ದಾರೆ.