- ಕನ್ನಡದ ಖ್ಯಾತ ಚಿಂತಕ ಶಂಕರ್ ಅವರ ಆಯ್ಕೆ
- ಕುವೆಂಪು ಪ್ರತಿಷ್ಠಾನಕ್ಕೆ ಹೊಸ ಸ್ಪರ್ಶ ನಿರೀಕ್ಷೆ
NAMMUR EXPRESS NEWS
ತೀರ್ಥಹಳ್ಳಿ: ಪ್ರತಿಷ್ಠಿತ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ನೂತನ ಅಧ್ಯಕ್ಷ ರಾಗಿ ಖ್ಯಾತ ಚಿಂತಕ ಡಾ.ಬಿ.ಎಲ್.ಶಂಕರ್ ಆಯ್ಕೆಯಾಗಿದ್ದಾರೆ. ಪಠ್ಯ ಪುಸ್ತಕಗಳ ವಿವಾದದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಖ್ಯಾತ ಸಾಹಿತಿ,
ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಡಾ ಹಂಪಾ ನಾಗರಾಜಯ್ಯ ರಾಜೀನಾಮೆ ಸಲ್ಲಿಸಿದ್ದರು. ಅವರ ಮನ ಒಲಿಕೆ ವಿಫಲವಾದ ಹಿನ್ನಲೆಯಲ್ಲಿ ಕುವೆಂಪು ಪ್ರತಿಷ್ಠಾನದ ಸದಸ್ಯರು ಸಭೆ ಸೇರಿ ಕ್ರಿಯಾಶೀಲ ಚಟುವಟಿಕೆಯ ಸಾಹಿತ್ಯ ಪ್ರೇಮಿ ಡಾ.ಬಿ.ಎಲ್ ಶಂಕರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ.
ಕುವೆಂಪು ಟ್ರಸ್ಟ್ನಲ್ಲಿ ಹಿರಿಯ ರಾಜಕಾರಣಿಗಳಾದ ಕಾಗೋಡು ತಿಮ್ಮಪ್ಪ, ಡಿ.ಬಿ.ಚಂದ್ರೇಗೌಡ, ಹಿರಿಯ ಸಾಹಿತಿ ಕಮಲಾ ಹಂಪನಾ, ಸ್ಥಳೀಯರಾದ ಡಿ.ಎಂ. ಮನುದೇವ್, ಕೆ.ಟಿ.ನಾರಾಯಣಮೂರ್ತಿ, ಕಡಿದಾಳ್ ಪ್ರಕಾಶ್ ಸೇರಿದಂತೆ ಹಲವು ಪ್ರಮುಖರು ಕಾರ್ಯನಿರ್ವಹಿಸುತ್ತಿದ್ದಾರೆ.
ಡಿಸೆಂಬರ್ 29ರಂದು ಕುವೆಂಪು ಜನ್ಮದಿನ ಆಚರಣೆ ಹಿನ್ನಲೆಯಲ್ಲಿ ಕುವೆಂಪು ಪ್ರತಿಷ್ಠಾನ ಪ್ರತಿ ವರ್ಷ ವಿಶಿಷ್ಟ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಕುವೆಂಪು ಹೆಸರಿನಲ್ಲಿ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತಿದ್ದು ದೇಶದ ಅತ್ಯುನ್ನತ ಸಾಹಿತಿಗಳನ್ನು ಆಯ್ಕೆ ಮಾಡಿ 5 ಲಕ್ಷ ರೂ.ನಗದು ಪ್ರಶಸ್ತಿ ಫಲಕಗಳ ಜೊತೆ ಈ ಪ್ರಶಸ್ತಿ ಕೊಡಲಾಗುತ್ತಿದೆ.
ಈ ಹೊತ್ತಿನಲ್ಲಿ ಪ್ರತಿಷ್ಠಾನಕ್ಕೆ ನೂತನ ಅಧ್ಯಕ್ಷರ ಪ್ರವೇಶವಾಗಿದ್ದು ಚಟುವಟಿಕೆಗಳು ಮತ್ತಷ್ಟು ಮೆರಗು ಪಡೆದುಕೊಳ್ಳುವ ಸಾಧ್ಯತೆಯಿದೆ.
ಕುವೆಂಪು ಪ್ರತಿಷ್ಟಾನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿನ್ನಲೆಯಲ್ಲಿ ಮೂಡಿಗೆರೆಯಲ್ಲಿರುವ ಪೂರ್ಣಚಂದ್ರ ತೇಜಸ್ವಿ ಟ್ರಸ್ಟ್ನ ಅಧ್ಯಕ್ಷ ಸ್ಥಾನಕ್ಕೆ ಬಿ.ಎಲ್.ಶಂಕರ್ ರಾಜೀನಾಮೆ ಸಲ್ಲಿಸಿದ್ದಾರೆ.
ಬೆಂಗಳೂರಿನ ವಿಶ್ವವಿಖ್ಯಾತ ಚಿತ್ರಕಲಾ ಪರಿಷತ್ ಅಧ್ಯಕ್ಷರಾದ ಡಾ.ಬಿ.ಎಲ್.ಶಂಕರ್ ಯಶಸ್ವಿ ಕಾರ್ಯನಿರ್ವಹಣೆ ಮಾಡಿ ಜನಮನ್ನಣೆ ಗಳಿಸಿದ್ದಾರೆ.