ಹಳ್ಳಿ ಔಷಧಿ ಕೊಟ್ಟು ನೂರಾರು ಮಂದಿ ಜೀವ ಉಳಿಸಿದರು!
– ತೀರ್ಥಹಳ್ಳಿ ತಾಲೂಕು ಮೃಗವಧೆ ಪುರುಷೋತ್ತಮ್ ವೈದ್ಯ ಸೇವೆ
– ಆಯುರ್ವೇದ ಪಂಡಿತನ ಸೇವೆಗೆ ನಮ್ಮ ಅಕ್ಷರ ನಮನ
ಸಂದರ್ಶನ: ಮನಿಷಾ
ಮಲೆನಾಡು ಪ್ರಕೃತಿಯ ತವರೂರು, ಇಲ್ಲಿನ ಪ್ರಕೃತಿ ಸಹಾಯದಿಂದ ದೊರಕುವ ಸಸ್ಯ ಮೂಲಿಕೆಗಳಿಂದ ತಮಗೆ ತಿಳಿದ ಆಯುರ್ವೇದ ಔಷಧಿ ಮೂಲಕ ನೂರಾರು ಜನ ಜೀವ ಉಳಿಸುವ ಕಾರ್ಯದಲ್ಲಿ ತೊಡಗಿರುವ ಮಲೆನಾಡಿನ ಆಯುರ್ವೇದ ತಜ್ಞ ಮೃಗವಧೆ ಮೂಲದ ಪುರುಷೋತ್ತಮ್.
ನೂರಾರು ಜನರಿಗೆ ಸೇವೆ
ತೀರ್ಥಹಳ್ಳಿ ತಾಲೂಕಿನ ಮೃಗವಧೆ ಗ್ರಾಮದ ಕಾನುಕೊಪ್ಪ ವಾಸಿಯಾದ ಪುರುಷೋತ್ತಮ್ ಅವರ ತಂದೆ ಹಿರಿಯಣ್ಣ ಹಾಗೂ ತಾಯಿ ಶಾರದಮ್ಮ ಅವರ ಕೊನೆಯ ಪುತ್ರ, ಪುರುಷೋತ್ತಮ್ ಅವರ ತಂದೆ ಸಹ ಆಯುರ್ವೇದವನ್ನು ಕಲಿತಿದ್ದು ಸುತ್ತಮುತ್ತದ ಹಳ್ಳಿಗಳಲ್ಲಿನ ಜನರ ಹತ್ತು ಹಲವು ಖಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ತಂದೆಯಿಂದ ಆಯುರ್ವೇದ ವಿದ್ಯೆಯನ್ನು ಕಲಿತು ತಂದೆಯಂತೆ ಹಲವು ಜನರ ಜೀವವನ್ನು ಉಳಿಸಿ ತಂದೆಗೆ ತಕ್ಕ ಮಗ ಎನಿಸಿಕೊಂಡಿದ್ದಾರೆ ಪುರುಷೋತ್ತಮ್.
– ಎಲೆ ಮರೆ ಕಾಯಿಯಂತೆ ಯಾರಿಗೂ ತಿಳಿಯದೆ ಜನರ ಸೇವೆ..!
ಪುರುಷೋತ್ತಮ್ ಅವರು ಮೂಲತಃ ಪ್ರಗತಿಪರ ಕೃಷಿಕರು ಆಗಿದ್ದು ತಮ್ಮ ಬಿಡುವಿನ ವೇಳೆಯಲ್ಲಿ ತಂದೆಯಿಂದ ತಿಳಿದ ವಿದ್ಯೆಯನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಜನ ಸೇವೆ ಮಾಡುತ್ತಿದ್ದಾರೆ. ಪುರುಷೋತ್ತಮ್ ಅವರು ಪ್ರಮುಖವಾಗಿ ಯಾವುದೆ ತರಹದ ವಿಷಪೂರಿತ ಹಾವು ಕಚ್ಚಿದರೂ ಚಿಕಿತ್ಸೆಯನ್ನು ನೀಡಿ ಸೈ ಎನಿಸಿಕೊಂಡಿದ್ದಾರೆ. ಇದರಿಂದ ನೂರಾರು ಮಂದಿಯ ಜೀವವನ್ನು ರಕ್ಷಿಸಿದ್ದಾರೆ.
ಸರ್ಪಸುತ್ತು, ಅಗ್ನಿಸುತ್ತು, ಚರ್ಮ ರೋಗಕ್ಕೆ ಮದ್ದು
ಸರ್ಪಸುತ್ತು ಅಥವಾ ಅಗ್ನಿಸುತ್ತು , ಎಂತದೇ ಚರ್ಮ ಸಂಬಂಧಿ ಕಾಯಿಲೆಗೂ ಸಹ ಪರಿಹಾರವನ್ನು ನೀಡುತ್ತಾರೆ. ಮಕ್ಕಳು ಇಲ್ಲದ ದಂಪತಿಗೆ ತಮ್ಮ ಆಯುರ್ವೇದ ವಿದ್ಯೆಯಿಂದ ಸಂತಾನ ಭಾಗ್ಯವನ್ನು ಕಲ್ಪಿಸಿದರೆ, ಮಹಿಳೆಯರ ಅನೇಕ ಆರೋಗ್ಯ ಸಂಬಂಧಿ ಕಾಯಿಲೆಗಳಿಗೂ ಮದ್ದು ನೀಡುತ್ತಾರೆ, ಹೊಟ್ಟೆಗೆ ಹಾಕಿದ ಮದ್ದು ತೆಗೆಯುತ್ತಾರೆ, ಅಷ್ಟೇ ಅಲ್ಲದೆ ತಲೆನೋವು, ಮೈ ಕೈ ನೋವು, ಮಂಡಿ ನೋವು ಹೀಗೆ ನಾನಾ ರೀತಿಯ ಕಾಯಿಲೆಗಳಿಗೆ ಪರಿಹಾರವನ್ನು ನೀಡುತ್ತಾರೆ. ಇವರಿಂದ ಚಿಕಿತ್ಸೆಯನ್ನು ಪಡೆಯಲು ಅಕ್ಕ- ಪಕ್ಕದ ಹಳ್ಳಿಯಿಂದ ಹಿಡಿದು ನಾನಾ ಜಿಲ್ಲೆಗಳಿಂದ ಜನರೂ ಬರುತ್ತಾರೆ. ಇವರನ್ನು ಆರಿಸಿ ಬಂದವರಿಗೆ ಅವರ ಸಮಸ್ಯೆಯನ್ನು ಪರಿಹರಿಸುತ್ತಾರೆ.
ಈಗಿನ ಕಾಲದಲ್ಲಿ ಹತ್ತು ರೂಪಾಯಿ ಕೊಟ್ಟರೂ ನೂರು ಜನರ ಬಳಿ ಹೇಳಿ ತಿರುಗುವ ಜನರ ಮದ್ಯೆ ಇಷ್ಟೆಲ್ಲಾ ವಿದ್ಯೆಯಿದ್ದರೂ ಸಹ ಯಾವುದನ್ನೂ ಪ್ರಚಾರ ಮಾಡದೆ ತಮ್ಮ ಸೇವೆಯನ್ನು ದೇವರ ಸೇವೆ ಎಂದು ಭಾವಿಸಿ ಸಹಾಯ ಮಾಡುತ್ತಿರುವ ಇವರು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.
ತಮ್ಮ ಆಯುರ್ವೇದ ವಿದ್ಯೆ ಧಾರೆ ಎರೆಯುವುದ್ದಕ್ಕೆ ಸಿದ್ದ
ಹಿಂದಿನ ಕಾಲದಲ್ಲಿ ಆಯುರ್ವೇದಕ್ಕೇ ಬಳಸುತ್ತಿದ್ದ ಗಿಡ ಮೂಲಿಕೆಗಳನ್ನು ಯಾರಿಗೂ ಹೇಳುತ್ತಿರಲಿಲ್ಲ. ಯಾರಿಗಾದರೂ ಹೇಳಿದರೆ ಕೊಟ್ಟ ಔಷಧಿ ಸರಿಯಾಗಿ ಕೆಲಸ ಮಾಡುವುದಿಲ್ಲ ಎಂದು ಹೆದರಿಸಿ ಆಯುರ್ವೇದ ಎನ್ನುವುದು ಕೆಲವರ ಕೈ ಮುಷ್ಟಿಯಲ್ಲಿ ಇರುವಂತೆ ಮಾಡಿದ್ದರು. ಆದರೆ ಪುರುಷೋತ್ತಮ್ ಅವರು ತಾವು ಕಲಿತ ವಿದ್ಯೆಯನ್ನು ಅರ್ಹ ಮತ್ತೂ ಸಮರ್ಥ ವ್ಯಕ್ತಿಗೆ ಧಾರೆ ಎರೆಯುದಕ್ಕೆ ಸಿದ್ದವಿದ್ದಾರೆ. ಇವರು ಈಗಲೇ ಅತಿ ತುರ್ತು ಸಂದರ್ಭದಲ್ಲಿ ಬಳಸುವ ಔಷಧಿಯ ಬಗ್ಗೆ ತಮ್ಮ ಹೆಂಡತಿ ಮತ್ತು ಮಗನಿಗೆ ಹೇಳಿಕೊಟ್ಟಿದ್ದಾರೆ. ಅವರು ಸಹ ತುಂಬಾ ಶ್ರದ್ಧೆಯಿಂದ ಕಲಿತಿದ್ದಾರೆ.
ಪುರುಷೋತ್ತಮ್ ಅವರ ಸಾಧನೆಯನ್ನು ಗುರುತಿಸಿ ಅನೇಕ ಗೌರವ ಸಂದಿವೆ. 2007ರ ಆಸುಪಾಸಿನಲ್ಲಿ ಆಕಾಶವಾಣಿ ಭದ್ರಾವತಿಯಲ್ಲಿ ಎರಡು ಬಾರಿ ಸಂದರ್ಶನವನ್ನು ನೀಡಿದ್ದಾರೆ. ಆಯುರ್ವೇದ ಔಷಧದ ಈ ಸಾಧನೆಯನ್ನು ಗುರುತಿಸಿ ಮೃಗವಧೆ ಶಂಕರ ಯುವಕ ಸಂಘದ ವತಿಯಿಂದ ಅಂದಿನ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರಿಂದ ಸನ್ಮಾನವನ್ನೂ ಪಡೆದಿದ್ದಾರೆ.
ಗಿಡ ಮೂಲಿಕೆಗಳ ವಿನಾಶ: ಬೇಸರ
ಜನ ಆಧುನಿಕ ನಾಗರಿಕತೆಯ ಕಡೆ ಪದಾರ್ಪಣೆ ಮಾಡಿದಂತೆ ತನಗೆ ತಿಳಿಯದೆ ಪ್ರಕೃತಿಯ ನಾಶವನ್ನು ಮಾಡುತ್ತಾ ಹೋಗುತ್ತಾನೆ ಅದರ ಫಲವಾಗಿ ಆಯುರ್ವೇದ ಗಿಡ ಮೂಲಿಕೆಗಳ ಪ್ರಮಾಣ ಕಡಿಮೆ ಆಗುತ್ತಿದೆ. ಆದರೂ ಹಳ್ಳಿಯ ಕಡೆ ಸ್ವಲ್ಪ ಮಟ್ಟಿಗೆ ಗಿಡ ಮೂಲಿಕೆಗಳು ಇನ್ನೂ ಸಹ ಜೀವಂತವಾಗಿವೆ. ಗಿಡ ಮರ ಉಳಿಸಬೇಕು ಎನ್ನುತ್ತಾರೆ ಪುರುಷೋತ್ತಮ್.
ನಮ್ಮಲ್ಲೇ ಇದೆ ಔಷಧ!
ನಮ್ಮ ಸುತ್ತಮುತ್ತ ಇರುವ ಎಷ್ಟೋ ಗಿಡಗಳೂ ಔಷಧಿಯ ಗುಣವನ್ನು ಹೊಂದಿರುತ್ತದೆ ಆದರೆ ಇದರ ಬಗ್ಗೆ ಯಾರಿಗೂ ಸಹ ತಿಳಿದಿಲ್ಲ. ಉದಾಹರಣೆಗೆ
*ಒಂದಲಗ ಗಿಡ: ಇದು ತಲೆ ಕೂದಲು ಉದುರುವ ಸಮಸ್ಯೆಯನ್ನು ಪರಿಹಾರ ಮಾಡುತ್ತದೆ, ಬುದ್ದಿ ಮಟ್ಟವನ್ನು ಹೆಚ್ಚಿಸುತ್ತದೆ.
*ಗಾಂಧಾರಿ ಮೆಣಸು (ಜೀರಿಗೆ ಮೆಣಸು): ವಾಯು ಸಮಸ್ಯೆಯನ್ನು ಪರಿಹಾರ ಮಾಡುತ್ತದೆ, ದೇಹಕ್ಕೆ ತಂಪು ನೀಡುತ್ತದೆ, ಹಾವು ಕಚ್ಚಿದ ಔಷಧಿಗೆ ಬಳಸುತ್ತಾರೆ,
*ಗರಕೆ ಕುಡಿ: ಇದು ಸಣ್ಣ ಹೊಟ್ಟೆ ನೋವನ್ನು ಕಡಿಮೆ ಮಾಡುತ್ತದೆ , ತಲೆ ಕೂದಲು ಉದುರುವದನ್ನು ಕಡಿಮೆ ಮಾಡುತ್ತದೆ .
*ನಾಚಿಕೆಗಿಡ (ಮುಟ್ಟಿದರೆ ಮುನಿ):ಇದು ಕೂಡ ಒಂದು ಗಿಡ ಮೂಲಿಕೆ ನಂಜು ಕಡಿಮೆಮಾಡುತ್ತದೆ, ನೋವಿನ ಎಣ್ಣೆ ಮಾಡಲೂ ಬಳಸುತ್ತಾರೆ.
ಸುಖಿ ಕುಟುಂಬದ ಎಲ್ಲರ ಸಹಕಾರ
ಪ್ರಸ್ತುತ ಪುರುಷೋತ್ತಮ್ ಅವರ ಹೆಂಡತಿ ಗೀತಾ ಮತ್ತೂ ಮಗ ನಾಗಭರಣ ಅವರ ಜೊತೆ ತಮ್ಮ ಸುಖ ಜೀವನವನ್ನು ನಡೆಸುತ್ತಿದ್ದಾರೆ. ಇವರ ಸಾಧನೆ ಬರೀ ಹಳ್ಳಿಗೆ ಸೀಮಿತವಾಗದೆ ಎಲ್ಲಾ ಕಡೆ ಹರಡಬೇಕು. ಇವರು ಕಲಿತ ವಿದ್ಯೆ ಪ್ರತಿಫಲವನ್ನು ಅನೇಕರೂ ಪಡೆಯಬೇಕು ಎಂಬುದೂ ಪುರುಷೋತ್ತಮ್ ಅವರ ಆಸೆ.
ಯಾವುದೆ ತರಹದ ಆರೋಗ್ಯದ ಸಮಸ್ಯೆಯಿದ್ದಲ್ಲಿ ಇವರನ್ನು ಸಂಪರ್ಕಿಸಬಹುದು, ತಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ..
ಪುರುಷೋತ್ತಮ್ ಮೃಗವಧೆ
ಆಯುರ್ವೇದ ಗಿಡಮೂಲಿಕೆ ತಜ್ಞರು
-9449793274
-9449593274