ಮತ್ತೆ ಕಸ್ತೂರಿ ರಂಗನ್ ವರದಿ ಸದ್ದು!
– ಮಲೆನಾಡು ತಪ್ಪಲಿನ ಗ್ರಾಮಗಳ ಜೊತೆಗೆ ಕಂಟಕ
– ನ.8ರಂದು ಸುಬ್ರಹ್ಮಣ್ಯದಿಂದ ಹೋರಾಟ ಶುರು
NAMMUR EXPRESS NEWS
ಚಿಕ್ಕಮಗಳೂರು/ಶಿವಮೊಗ್ಗ: ಕಳೆದ 17 ವರ್ಷಗಳಿಂದ ಮಲೆನಾಡು ತಪ್ಪಲಿನ ಗ್ರಾಮಗಳ ಜನತೆ ಮೇಲೆ ಕಸ್ತೂರಿ ರಂಗನ್ ವರದಿ ಅನುಷ್ಠಾನದ ತೂಗುಗತ್ತಿ ನೇತಾಡುತ್ತಲೇ ಇದೆ. ಸರಕಾರ ಈ ಬಗ್ಗೆ ಸ್ಪಷ್ಟ ನಿರ್ಧಾರ ಪ್ರಕಟಿಸದಿದ್ದರೂ, ಯಾವಾಗ ಅನುಮೋದನೆ ನೀಡಬಹುದು ಎಂಬ ಆತಂಕ ಸ್ಥಳೀಯ ಜನರದ್ದು, ಈ ಬಗ್ಗೆ ತಾರ್ಕಿಕ ಅಂತ್ಯ ಇನ್ನೂ ಕಂಡಿಲ್ಲ, ಮತ್ತೆ ಉಗ್ರ ಹೋರಾಟಕ್ಕೆ ಜನತೆ ಸಜ್ಜಾಗಿದ್ದಾರೆ.
ಮಲೆನಾಡು ಜನಹಿತ ರಕ್ಷಣಾ ವೇದಿಕೆ ಕಸ್ತೂರಿ ರಂಗನ್ ವಿರುದ್ಧ ನಿರಂತರ ಹೋರಾಟ ಮಾಡುತ್ತಲೆ ಬಂದಿದೆ. ಇತ್ತೀಚೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿಕೆಯಿಂದ ವೇದಿಕೆ ರೊಚ್ಚಿಗೆದ್ದಿತ್ತು. ಸಚಿವರು ಹೇಳಿಕೆಗೆ ತೇಪೆ ಹಚ್ಚಿದರು ವರದಿ ಅನುಷ್ಠಾನದ ಗುಮ್ಮ ಬಿಟ್ಟಿಲ್ಲ. ಅದೇ ಕಾರಣಕ್ಕೆ ಮತ್ತೆ ಸೆಟೆದು ನಿಂತಿರುವ ಮಲೆನಾಡು ಜನ ಹಿತರಕ್ಷಣಾ ವೇದಿಕೆ ನ.8 ರಂದು ಸುಬ್ರಹ್ಮಣ್ಯದಿಂದ ಹೋರಾಟದ ರಣಕಹಳೆ ಮೊಳಗಿಸಲು ಸಜ್ಜಾಗಿದೆ.
ಹೋರಾಟಗಾರರ ಬೇಡಿಕೆ ಏನು?
ಕಸ್ತೂರಿ ರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಅನುಷ್ಠಾನ ಮಾಡಬಾರದು, ಪ್ರಾಸ್ತವಿಕ ತಳದ ರೈತರನ್ನು ಒಕ್ಕಲೆಬ್ಬಿಸದೆ ಅವರಿಗೆ ಹಕ್ಕು ಪತ್ರ ನೀಡುವುದು ಹಾಗೂ ಜಂಟಿ ಸರ್ವೆ ಮಾಡುವುದು, ಅಡಿಕೆಗೆ ಹಳದಿ ರೋಗ ಹಾಗೂ ಎಲೆ ಚುಕ್ಕಿ ರೋಗದಿಂದ ಸಂತ್ರಸ್ತರಾಗಿರುವ ರೈತರಿಗೆ ಅವರು ಬಯಸಿದ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ, ಸಹಕಾರಿ ಸಂಘ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ಸಾಲ ಮನ್ನಾ ಮಾಡುವುದು, ಕಾಡು ಪ್ರಾಣಿಗಳಿಂದ ರಕ್ಷಣೆಗಾಗಿ ಕೋವಿ ಪರವಾನಾಗಿ ನೀಡುವುದು ಮುಂತಾದ ಹಕ್ಕೋತಾಯದೊಂದಿಗೆ ಪ್ರತಿಭಟನೆಗೆ ಸಿದ್ಧತೆ ನಡೆಸಲಾಗುತ್ತಿದೆ.
ಸಾವಿರಾರು ಮಂದಿ ರೈತರ ಬದುಕು ಬೀದಿಗೆ…!
ಕಸ್ತೂರಿ ರಂಗನ್ ವರದಿಯಂತೆ ಕಾರವಾರದಿಂದ ಚಾಮರಾಜನಗರದ ತನಕ ರಾಜ್ಯದ ಏಳು ಜಿಲ್ಲೆಗಳ ಪಶ್ಚಿಮ ಘಟ್ಟ ಭಾಗದ ಸಾವಿರಾರು ಗ್ರಾಮಗಳ ಲಕ್ಷಾಂತರ ಕುಟುಂಬದವರಿಗೆ ಕಂಟಕ ಪ್ರಾಯವಾದ ಈ ವರದಿಯನ್ನು ತಿರಸ್ಕರಿಸುವಂತೆ ಕಳೆದ 17 ವರ್ಷಗಳಿಂದ ಪ್ರತಿಭಟನೆ, ಹೋರಾಟ ನಡೆಯುತ್ತಲೇ ಇದೆ. ಇಷ್ಟಾದರೂ ಹಸಿರು ಪೀಠದಿಂದ ಹಿಂದಿನ ಆದೇಶವನ್ನೇ ಜಾರಿಗೊಳಿಸುವ ಆದೇಶವಿರುವುದರಿಂದ ಸಂತ್ರಸ್ತ ಗ್ರಾಮಗಳ ರೈತರು ಆತಂಕದಲ್ಲೇ ಇದ್ದಾರೆ. ಒಂದು ವೇಳೆ ಸರ್ಕಾರದ ನಿರ್ಧಾರದಂತೆ ಅನುಷ್ಠಾನವಾದರೆ, ಕೃಷಿ ಭೂಮಿಯನ್ನು ಅರಣ್ಯ ಇಲಾಖೆ ವಶಪಡಿಸಿಕೊಳ್ಳುತ್ತದೆ. ವರದಿಯಲ್ಲಿ ಈ ಭೂಮಿಗೆ ಇವರಿಗೆ ಯಾವುದೇ ಪರಿಹಾರ ನಮೂದಿಸಿಲ್ಲ. ಬೆಲೆ ನಿಗದಿಪಡಿಸಿಲ್ಲ, ಭೂಮಿ ಕಳೆದುಕೊಳ್ಳುವ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಉಲ್ಲೇಖವಿಲ್ಲ. ವಸತಿ ಇನ್ನಿತರ ಕಟ್ಟಡಗಳಿಗೂ ಪರಿಹಾರ ಘೋಷಿಸಿಲ್ಲ.
ಈಗಾಗಲೇ ಅರಣ್ಯ ಹಾಗೂ ಸರಕಾರಿ ಜಮೀನಿನಲ್ಲಿ ಮನೆ ಕಟ್ಟಿ ವಾಸಿಸುವವರಿಗೆ ಚೆಕ್ಕನ್ನು ಕೊಡದೆ ಒಕ್ಕಲೆಬ್ಬಿಸಿದ ವಿದ್ಯಾಮಾನ ನಡೆಯಲಿದೆ. ಇದಕ್ಕೆ ಹಿಂಜರಿದಲ್ಲಿ ಮೂಲ ಸೌಕರ್ಯಗಳಾದ ವಿದ್ಯುತ್, ರಸ್ತೆ, ನೀರು, ದೂರವಾಣಿ ಇತ್ಯಾದಿ ಕಡಿತಗೊಳಿಸಿ ತಾವಾಗಿಯೇ ಒಕ್ಕಲೆಳುವಂತೆ ಮಾಡಲಾಗುತ್ತದೆ. ಭೂಮಿಯ ಹಕ್ಕು ಪತ್ರ ರದ್ದಾಗಲಿದೆ. ಯೋಜನೆಯು ಈ ಭಾಗದಿಂದ 10 ಕಿ.ಮೀ ತನಕ ಕಾಯಿದೆ ಉರ್ಜಿತದಲ್ಲಿರುತ್ತದೆ. ರೈತರಿಗೆ ಕೋವಿ ಪರವಾನಗಿ ನೀಡುವುದನ್ನು ರದ್ದುಗೊಳಿಸಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿ 75, ರಾಜ್ಯ ಹೆದ್ದಾರಿಗಳಾದ ಬಿಸಿಲೆ ಹಾಗೂ ಚಾರ್ಮುಡಿ ಘಾಟಿ ರಸ್ತೆಗಳು, ಮಂಗಳೂರು- ಬೆಂಗಳೂರು ರೈಲು ಮಾರ್ಗಗಳು ಯೋಜನೆಯ ನೀಲ ನಕ್ಷೆಯಲ್ಲಿ ಒಳಪಡುವುದರಿಂದ ಮುಂದೊಂದು ದಿನ ಈ ರೈಲು, ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳು ಬಂದ್ ಆಗಿ ಜಿಲ್ಲೆಯ ಅಭಿವೃದ್ಧಿಗೆ ಮಾರಕವಾಗಲಿದೆ ಎಂಬ ಆತಂಕ ಇಲ್ಲಿನ ಜನರನ್ನು ಕಾಡುತ್ತಿದೆ.