- ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಆರಂಭ
- ಮಂಗಳವಾರದಿಂದ ಪೂಜಾ ವಿಧಿ ವಿಧಾನ ಶುರು
NAMMUR EXPRESS NEWS
ಶಬರಿಮಲೆ: ಸ್ವಾಮಿಯೇ ಶರಣಂ ಅಯ್ಯಪ್ಪ..!.
ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಸ್ವಾಮಿಯ ದರ್ಶನ ಆರಂಭವಾಗಿದೆ. ಕರ್ನಾಟಕ ಸೇರಿ ವಿವಿಧ ರಾಜ್ಯಗಳ ಭಕ್ತರು ಆಗಮಿಸುತ್ತಿದ್ದಾರೆ.
ಕರೋನಾ ಆತಂಕದ ಬಳಿಕ ಶಬರಿಮಲೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಮಂಗಳವಾರ ಶಬರಿಮಲೆಯಲ್ಲಿ ಧಾರ್ಮಿಕ ವಿಧಿಗಳು ಆರಂಭಗೊಂಡಿದ್ದು ಬುಧವಾರ ದೇವಸ್ಥಾನದ ಬಾಗಿಲು ತೆರೆಯಲಾಗಿದೆ. ಭಕ್ತರಿಂದ ದರ್ಶನ ಆರಂಭವಾಗುತ್ತಿದೆ.
ಕಾರ್ತಿಕ ಮಾಸದ ಸಂಕ್ರಮಣದಂದು ಭಕ್ತರು ಮಾಲೆಯನ್ನು ಹಾಕುತ್ತಾರೆ. ಡಿ. 27ರಂದು ಮಂಡಲ ಪೂಜೆ ನಡೆಯಲಿದ್ದು ಬಳಿಕ ಇನ್ನೊಂದಾವರ್ತಿಯಲ್ಲಿ ಮಕರಸಂಕ್ರಮಣ ದರ್ಶನಕ್ಕೆ ತೆರೆಯಲಾಗುತ್ತದೆ. ಡಿಸೆಂಬರ್ ಮೊದಲೆರಡು ವಾರಗಳಲ್ಲಿಯೂ ವಿವಿಧೆಡೆ ಶಿಬಿರಗಳ ಮೂಲಕ ಮಾಲೆ ಧರಿಸುತ್ತಾರೆ. ಈ ಸಂದರ್ಭ ವ್ರತಧಾರಿಗಳಲ್ಲದೆ ಮನೆಯ ಇತರ ಸದಸ್ಯರೂ ಸಸ್ಯಾಹಾರವನ್ನು ಸ್ವೀಕರಿಸಿರುವುದರಿಂದ ಒಟ್ಟಾರೆ ತರಕಾರಿ, ಹಣ್ಣುಗಳ ಬಳಕೆ ಜಾಸ್ತಿಯಾಗುತ್ತಿದೆ.
ಯಾತ್ರೆ ಹೇಗೆ ಎತ್ತ..?, ವಾಹನ ಎಲ್ಲಿ ನಿಲ್ಲಿಸಬೇಕು?
ಚೆಂಗನ್ನೂರಿನಿಂದ ನೀಲಕಲ್ ವರೆಗೆ ಸ್ಪಾಟ್ ಬುಕಿಂಗ್ ಮಾಡುವ 12 ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. 15 ಆಸನಗಳಿಗಿಂತ ಕಡಿಮೆ ಇರುವ ವಾಹನಗಳಿಗೆ ಪಂಪೆ ವರೆಗೆ ಹೋಗಲು ಅವಕಾಶವಿದೆ. ಅದಕ್ಕಿಂತ ಹೆಚ್ಚಿನ ಆಸನ ಸಾಮರ್ಥ್ಯದ ವಾಹನಗಳಿಗೆ ನೀಲಕಲ್ ವರೆಗೆ ಮಾತ್ರ ಪ್ರವೇಶವಿದೆ. ಅಲ್ಲಿ ಭಕ್ತರು ಇಳಿದು ಸರಕಾರಿ ಬಸ್ಗಳಲ್ಲಿ ತೆರಳಬೇಕು. ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.
ನಿತ್ಯ 1 ಲಕ್ಷ ಭಕ್ತರಿಗೆ ಅವಕಾಶ!
ಶಬರಿಮಲೆಯಲ್ಲಿ ನಿತ್ಯ ಒಂದು ಲಕ್ಷ ಭಕ್ತರಿಗೆ ದರ್ಶನಾವಕಾಶ ಸಿಗುವ ಸಾಧ್ಯತೆ ಇದೆ. ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಸಂಘಟನೆ 18 ರಾಜ್ಯಗಳಲ್ಲಿ 4,000ಕ್ಕೂ ಹೆಚ್ಚು ಕಡೆ, ಕರ್ನಾಟಕ ರಾಜ್ಯದ 22 ಜಿಲ್ಲೆಗಳಲ್ಲಿ ಅಸ್ತಿತ್ವಕ್ಕೆ ಬಂದಿವೆ. ”ಹರಿವರಾಸನಂ’ ಹಾಡು ರಚನೆಯಾಗಿ ನೂರು ವರ್ಷ ಆಗಿರುವ ಹಿನ್ನೆಲೆಯಲ್ಲಿ ಕರಾವಳಿ ಎರಡೂ ಜಿಲ್ಲೆಗಳ ಮಟ್ಟದ ಕಾರ್ಯಕ್ರಮ ಡಿ.11ರಂದು ಮಂಗಳೂರಿನಲ್ಲಿ ನಡೆಯಲಿದೆ. ರಾಜ್ಯದ ಪ್ರತಿ ತಾಲೂಕು ಜಿಲ್ಲೆಯಲ್ಲಿ ಭಕ್ತರು ಮಾಲೆ ಧರಿಸಲಿದ್ದಾರೆ.