ಟಾಪ್ 4 ನ್ಯೂಸ್ ಮಲ್ನಾಡ್
– ಶೃಂಗೇರಿ: ತುಂಗಾ ನದಿಯಲ್ಲಿ ತೇಲಿ ಹೋದ ಬಾಲಕಿ..!
– ಸೊರಬ : ಸೊರಬದಲ್ಲಿ ಬೈಕಿಗೆ ಬೆಂಕಿ ಇಟ್ಟ ಕಿಡಿಗೇಡಿಗಳು!
– ಶಿವಮೊಗ್ಗ : ಮಧು ಬಂಗಾರಪ್ಪ ವಿರುದ್ಧ ಪೋಸ್ಟ್ : ಕೇಸ್
– ಹೊಸನಗರ: ಕೋರ್ಟ್ ಎಪಿಪಿ ಲೋಕಾಯುಕ್ತ ಬಲೆಗೆ
NAMMUR EXPRESS NEWS
ಸೊರಬ : ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದ ಬೋವಿ ಕಾಲೋನಿಯಲ್ಲಿ ನಡೆದಿದೆ. ಬೋವಿ ಕಾಲೋನಿ ನಿವಾಸಿ ದುರ್ಗಪ್ಪ ಬೋವಿ ಎಂಬುವವರಿಗೆ ಸೇರಿದ ಬೈಕ್ ಗೆ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಯಾರೋ ಕಿಡಿಗೇಡಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ನೆರೆ ಮನೆಯ ನಿವಾಸಿಗಳು ಬೆಂಕಿಯ ತೀವ್ರತೆ ಗಮನಿಸಿ ಬೆಂಕಿಯನ್ನು ನಂದಿಸಿದ್ದಾರೆ. ಅಷ್ಟರಲ್ಲಾಗಲೇ ಭಾಗಶಃ ಬೈಕ್ ಸುಟ್ಟು ಹೋಗಿದೆ. ಬೈಕ್ ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ದುರ್ಗಪ್ಪ ಅವರ ಪುತ್ರ ಶ್ರೀಧರ್ ಆಗ್ರಸಿದ್ದಾರೆ. ಘಟನೆ ಕುರಿತು ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಶೃಂಗೇರಿ: ತುಂಗಾ ನದಿಯಲ್ಲಿ ತೇಲಿ ಹೋದ ಬಾಲಕಿ
ಶೃಂಗೇರಿ: ತುಂಗಾ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ ಬಾಲಕಿ ತೇಲಿ ಹೋದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆಕ್ಕೂರು ಸೇತುವೆ ಬಳಿ ನಡೆದಿದೆ. ಪ್ರವಾಸಕ್ಕೆ ಬಂದಿದ್ದ ಶಾಲಾ ಮಕ್ಕಳ ಬಸ್ ತುಂಗಾ ನದಿಯಲ್ಲಿ ಸ್ನಾನಕ್ಕೆ ತೆರೆಳಿದ ವೇಳೆ ಬಾಲಕಿಗೆ ನದಿಯ ಆಳ ತಿಳಿಯದೆ ನೀರಿನಲ್ಲಿ ತೇಲಿ ಹೋಗಿದ್ದು, ಅದೇ ಸಮಯದಲ್ಲಿ ಸ್ಥಳೀಯರು ನೀರಿಗೆ ಹಾರಿ ಬಾಲಕಿಯನ್ನು ರಕ್ಷಿಸಿದ್ದಾರೆ. ಸದ್ಯ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೂ ಕ್ರಮೇಣ ಪ್ರವಾಸಿಗರ ಸಂಖ್ಯೆ ಏರಿಕೆ ಆಗಲಿದ್ದು, ಸಂಬಂಧಪಟ್ಟ ಅಧಿಕಾರಿಗಳು ಶೃಂಗೇರಿ ಸುತ್ತ ಮುತ್ತಲಿನ ಅಪಾಯ ಸ್ಥಳಗಳಿಗೆ ಸೂಚನಾ ಫಲಕ ಅಳವಡಿಸಬೇಕಾಗಿ ವಿನಂತಿ.
– ಶಿವಮೊಗ್ಗ : ಮಧು ಬಂಗಾರಪ್ಪ ವಿರುದ್ಧ ಪೋಸ್ಟ್: ಕೇಸ್
ಶಿವಮೊಗ್ಗ : ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ್ದ ಆರೋಪ ಸಂಬಂಧ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ. ಸಂವಿಧಾನಾತ್ಮಕ ಹುದ್ದೆಯಲ್ಲಿರುವವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮತ್ತು ಸರ್ಕಾರದ ವಿರುದ್ಧ ಸುಳ್ಳು ಮಾಹಿತಿ ಹಂಚಿರುವ ಹಿನ್ನೆಲೆ ಪ್ರಕರಣ ದಾಖಲು ಮಾಡಲಾಗಿದೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಮೋಹಿತ್ ನರಸಿಂಹಮೂರ್ತಿ ಎಂಬಾತನ ವಿರುದ್ಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ಅವಾಚ್ಯವಾಗಿ ನಿಂದಿಸಿ ಎಕ್ಸ್ ಮತ್ತು ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಪ್ರಕಟಿಸಲಾಗಿತ್ತು. ಇದರಿಂದ ಸಚಿವರ ವಿರುದ್ಧ ಅವಾಚ್ಯವಾಗಿ ನಿಂದಿಸಿರುವುದು, ಸರ್ಕಾರದ ಘನತೆಗೆ ಧಕ್ಕೆ ತಂದಿರುವ ಹಿನ್ನೆಲೆ ಪ್ರಕರಣ ದಾಖಲು ಮಾಡಲಾಗಿದೆ.
– ಹೊಸನಗರ: ನ್ಯಾಯಲಯದ ಎಪಿಪಿ ಲೋಕಾಯುಕ್ತ ಬಲೆಗೆ
ಹೊಸನಗರ : ರಬ್ಬರ್ ಮರ ಲೀಜ್ ವಿಚಾರವಾಗಿ ಇದ್ದ ಜಗಳದ ಕೇಸನ್ನು ರಾಜಿ ಮೂಲಕ ಬೇಗ ಮುಗಿಸಿಕೊಡುತ್ತೇನೆ ಎಂದು ಹೇಳಿ ಪಿರ್ಯಾದಿಯಿಂದ ಲಂಚ ಪಡೆಯುತ್ತಿದ್ದ ಹೊಸನಗರ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕ ರವಿ ಎನ್ನುವವರನ್ನು ಲೋಕಾಯುಕ್ತ ಪೊಲೀಸರು ಶುಕ್ರವಾರ ಸಂಜೆ ನ್ಯಾಯಾಲಯದ ಆವರಣದಲ್ಲೇ ಬಂಧಿಸಿದ್ದಾರೆ. ರಿಪ್ಪನ್ಪೇಟೆಯ ಕೆರೆಹಳ್ಳಿ ಗ್ರಾಮದ ಅಂಜನ್ಕುಮಾರ್ ರವರ ಅವರ ಕೇಸ್ ಮುಗಿಸಿಕೊಡಬೇಕಾದರೆ 5,೦೦೦ ರೂ ಕೊಡಬೇಕು ಎಂದು ಹೇಳಿ, ಪಿರ್ಯಾದುದಾರರ ಹತ್ತಿರ 1,೦೦೦ ರೂ ಹಣವನ್ನು ಆರೋಪಿ ಮೊದಲೇ ಪಡೆದಿದ್ದರು. ಇಂದು ಮತ್ತೆ ನ್ಯಾಯಾಲಯಕ್ಕೆ ನಾಯರ್ ಬಂದಾಗ 3 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ತನ್ನ ಮೊಬೈಲ್ನಲ್ಲಿ ಆಡಿಯೋ ವೀಡಿಯೋ ರೆಕಾರ್ಡ್ ಮಾಡಿಕೊಂಡು ಲೋಕಾಯುಕ್ತರಿಗೆ ನಾಯರ್ ನೀಡಿದ್ದರು. ಆಪಾದಿತ ಸರ್ಕಾರಿ ನೌಕರ ಕಚೇರಿಯಲ್ಲೇ ಹಣ ಪಡೆಯುವಾಗ ಟ್ರ್ಯಾಪ್ ಮಾಡಿ ಲಂಚದ ಹಣವನ್ನು ಜಪ್ತಿ ಪಡಿಸಿಕೊಳ್ಲಲಾಗಿದೆ. ಆಪಾದಿತ ಸರ್ಕಾರಿ ನೌಕರನನ್ನು ತನಿಖೆ ಸಂಬಂಧ ವಶಕ್ಕೆ ಪಡೆದು ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಸಿಪಿಐ ಪ್ರಕಾಶ್ ಕೈಗೊಂಡಿದ್ದಾರೆ. ಕಾರ್ಯಾಚರಣೆಯನ್ನು ಡಿಎಸ್ಪಿ ಮಂಜುನಾಥ ಚೌಧರಿ ನೇತೃತ್ವದಲ್ಲಿ ನಡೆಸಲಾಗಿದೆ. ಸಿಪಿಐ ಪ್ರಕಾಶ್, ಹೆಚ್.ಎಸ್ ಸುರೇಶ್, ಸಿಬ್ಬಂದಿ ಇದರಲ್ಲಿ ಪಾಲ್ಗೊಂಡಿದ್ದರು.