14 ವರ್ಷಗಳ ನಂತರ ತಂದೆ ಕೊಲೆಗೆ ಪ್ರತೀಕಾರ!
– ವೃದ್ಧನ ಬರ್ಬರ ಹತ್ಯೆ: ಖಾಕಿ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಹಂತಕ ಅಂದರ್
– ನಡೆದುಕೊಂಡು ಹೋಗುತ್ತಿದ್ದವನ ಕೊಚ್ಚಿ ಕೊಂದ ಕೊಲೆಗಾರ
NAMMUR EXPRESS NEWS
ಅರಕಲಗೂಡು: ತನ್ನ ತಂದೆಯನ್ನು ಕೊಂದು ಬೇರೊಂದು ಊರಿನಲ್ಲಿ ಉಳಿದುಕೊಂಡಿದ್ದ ವೃದ್ಧನನ್ನು ಹತ್ಯೆಯಾದವನ ಮಗ ಹಾಡಹಗಲೇ
ಬರ್ಬರವಾಗಿ ಕೊಲೆ ಮಾಡುವ ಮೂಲಕ ಬರೋಬ್ಬರಿ 14ವರ್ಷಗಳ
ನಂತರ ಪ್ರತೀಕಾರ ತೀರಿಸಿಕೊಂಡಿದ್ದಾನೆ.
ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ದಡದಹಳ್ಳಿಯಲ್ಲಿ ಮಂಗಳವಾರ ಹಾಡ ಹಗಲೇ ಈ ಘಟನೆ
ನಡೆದಿದ್ದು, ನಿರ್ವಾಣಪ್ಪ (೭೫) ಕೊಲೆಯಾದ ವ್ಯಕ್ತಿ. ಗ್ರಾಮದ ನಡುವಿನ ರಸ್ತೆ ಪಕ್ಕದಲ್ಲಿ ನಡೆದು ಹೋಗುತ್ತಿದ್ದಾಗ ಏಕಾಏಕಿ ದಾಳಿ ಮಾಡಿದ ವ್ಯಕ್ತಿ, ಮನಸೋ ಇಚ್ಛೆ ಕೊಚ್ಚಿ ಜೀವ ತೆಗೆದಿದ್ದಾನೆ. ಘಟನೆಯಿಂದ ಇಡೀ ಗ್ರಾಮವೇ ಬೆಚ್ಚಿ ಬಿದ್ದಿದೆ. ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಹಿನ್ನೆಲೆ: ಕೊಲೆಯಾಗಿರುವ ನಿರ್ವಾಣಪ್ಪನ ವೃತ್ತಿ ವ್ಯವಸಾಯ. ಮೂವರು ಗಂಡು ಮಕ್ಕಳು, ಒಬ್ಬಳೇ ಮಗಳಿದ್ದು, ಎಲ್ಲರನ್ನೂ ಮದುವೆ ಮಾಡಿದ್ದಾರೆ. ವಯಸ್ಸಾಗಿದ್ದರೂ ಮಾಡಬಾರದ ಕೆಲಸ ಮಾಡುತ್ತಿದ್ದ. ಸಣ್ಣಪುಟ್ಟ ಕಾರಣಕ್ಕೆ ಒಡ ಹುಟ್ಟಿದವರ ವಿರುದ್ಧವೇ ಹಗೆ ಸಾಧಿಸುತ್ತಿದ್ದ. ಜಮೀನು ವಿವಾದ ಹಿನ್ನೆಲೆಯಲ್ಲಿ ೨೦೧೧ ರಲ್ಲಿ ತನ್ನ ಸಹೋದರನ ಮೇಲೆ ಕೊಲೆ ಆರೋಪ ಹೊರಿಸುವ ದುರುದ್ದೇಶದಿಂದ ಅವರ ಮನೆಯಲ್ಲಿ ಕೂಲಿ ಕೆಲಸ ಮಾಡುತಿದ್ದ ಅದೇ ಗ್ರಾಮದ ಲಕ್ಕಯ್ಯ ಎಂಬಾತನನ್ನು ತಾನೇ ಕೊಲೆ ಮಾಡಿದ್ದ. ನಂತರ ಸಹೋದರನ ಮನೆಯ ಕಾಂಪೌಂಡ್ ಒಳಗೆ ಮೃತದೇಹ ಬಿಸಾಡಿ ಸಹೋದರನ ಮೇಲೆ ಆರೋಪ ಬರುವಂತೆ ಕ್ರಿಮಿನಲ್ ಪ್ಲಾನ್ ಮಾಡಿದ್ದ ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಪೊಲೀಸರು, ಲಕ್ಕಪ್ಪನನ್ನು ಕೊಲೆ ಮಾಡಿದ್ದು ನಿರ್ವಾಣಪ್ಪ ಎಂದು ಪತ್ತೆ ಮಾಡಿದ್ದರು. ಪೊಲೀಸರ ತನಿಖೆಯಲ್ಲಿ ಮುದುಕನ ನಾಟಕ ಬಯಲಾಗಿ ೭ ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ. ಕೆಲ ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಯಾದ ನಿರ್ವಾಣಪ್ಪ ದಡದಹಳ್ಳಿ ಗ್ರಾಮಕ್ಕೆ ಎಂಟ್ರಿ ಕೊಡದೆ, ಸಮೀಪದ ಮಲ್ಲಿಪಟ್ಟಣ ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದ. ಹಿಂದೆ ಕೊಲೆಯಾಗಿದ್ದ ಲಕ್ಕಪ್ಪನ ಮಕ್ಕಳು ದಡದಹಳ್ಳಿ ಗ್ರಾಮದಲ್ಲೇ ವಾಸವಾಗಿದ್ದ ರಿಂದ ಹೆಚ್ಚು ಕಡಿಮೆ ಆಗಬಹುದು ಎಂದು ಅಂದಾಜಿಸಿ ಮಲ್ಲಿಪಟ್ಟನದಲ್ಲಿ ಆಶ್ರಯ ಪಡೆದಿದ್ದ. ಮಧ್ಯಾಹ್ನ ತನ್ನ ತಂದೆಯ ಮರಣ ಪ್ರಮಾಣ ಪತ್ರ ಪಡೆಯಲು ನಿರ್ವಾಣಪ್ಪ ದಡದಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿಂದ ಗ್ರಾಮ ಪಂಚಾಯ್ತಿಗೆ ಹೋಗಲೆಂದು ಅದೇ ಗ್ರಾಮದ ಶಂಕರ್ ಎಂಬುವವರ ಮನೆಯ ಮುಂದೆ ಬೆಳಿಗ್ಗೆ ೧೧ ಗಂಟೆ ಸುಮಾರಿಗೆ ನಡೆದುಕೊಂಡು ಹೋಗುತ್ತಿದ್ದ.
ಈ ವೇಳೆ ದಿಢೀರ್ ಎಂಟ್ರಿಕೊಟ್ಟ, ೧೪ ವರ್ಷಗಳ ಹಿಂದೆ ತನ್ನದಲ್ಲದ ತಪ್ಪಿಗೆ ಇದೇ ನಿರ್ವಾಣಪ್ಪನಿಂದ ಕೊಲೆಯಾಗಿದ್ದ ಲಕ್ಕಪ್ಪನ ಮಗ ಮೂರ್ತಿ ಅಲಿಯಾಸ್ ಗುಂಡ, ತನ್ನ ತಂದೆಯನ್ನು ಕೊಲೆ ಮಾಡಿದ್ದ ಹಳೆಯ ದ್ವೇಷ ಇಟ್ಟುಕೊಂಡು ನಡೆದುಕೊಂಡು ಹೋಗುತ್ತಿದ್ದ ನಿರ್ವಾಣಪ್ಪಗೆ ಲಾಂಗ್ನಿಂದ ಮುಖ, ಗದ್ದ, ಕುತ್ತಿಗೆ, ತಲೆ ಹಾಗೂ ದೇಹದ ಇತರೆ ಕಡೆಗಳಿಗೆ ಹೊಡೆದು ಕೊಲೆ ಮಾಡಿದ್ದಾನೆ. ಸುದ್ದಿ ತಿಳಿದ ಕೂಡಲೇ ಎಸ್ಪಿ ಮೊಹಮದ್ ಸುಜೀತಾ, ಎಎಸ್ಪಿ ಶಾಲೂ, ಅರಕಲಗೂಡು ಸಿಪಿಐ ಕೆ.ಎಂ.ವಸಂತ್, ಪಿಎಸ್ಐ ಕಾವ್ಯ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೊಲೆ ವಿಷಯ ತಿಳಿಯುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಸಿಪಿಐ ವಸಂತ್ ನೇತೃತ್ವದ ತಂಡ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದು, ತನಿಖೆ ಮುಂದುವರಿದಿದೆ.