ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್. ಐ. ಆರ್..!
– ಮೈಸೂರು ಲೋಕಾಯುಕ್ತದಲ್ಲಿ ದೂರು ದಾಖಲು
– ಏನಾಗುತ್ತೆ? ಮುಂದಿನ ಕಾನೂನು ಪ್ರಕ್ರಿಯೆ ಏನು?
NAMMUR EXPRESS NEWS
ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಜನಪ್ರತಿನಿಧಿಗಳ ನ್ಯಾಯಾಲಯ ಮೈಸೂರು ಲೋಕಾಯುಕ್ತಕ್ಕೆ ಆದೇಶಿಸಿದೆ.
ಕೋರ್ಟ್ ಆದೇಶದ ಮೇರೆಗೆ ಮೈಸೂರು ಲೋಕಾಯುಕ್ತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶದಂತೆ ಲೋಕಾಯುಕ್ತ ಎಡಿಜಿಪಿ ಮನೀಶ್ ಖರ್ಬೀಕರ್ ಸೂಚನೆ ಮೇರೆಗೆ ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್ ನೇತೃತ್ವದಲ್ಲಿ ಎಫ್ಐಆರ್ ದಾಖಲಾಗಿದೆ. ಸಿಆರ್ಪಿಸಿ ಅಡಿಯಲ್ಲಿ ಎಫ್ಐಆರ್ ದಾಖಲಿಸಿ ಎಂದು ಕೋರ್ಟ್ ಆದೇಶ ನೀಡಿತ್ತು. ಅದೇ ಕಾಯ್ದೆಯಡಿ ಇದೀಗ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಯಾವೆಲ್ಲಾ ಸೆಕ್ಷನ್ ದಾಖಲು ಮಾಡಲಾಗಿದೆ ಎಂಬುದು ತಿಳಿದುಬರಬೇಕಿದೆ.
ದೂರು ನೀಡಿದ್ದು ಯಾರು?
ದೂರುದಾರ, ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರ ದೂರಿನ ಮೇರೆಗೆ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸುವಂತೆ ನ್ಯಾಯಾಲಯ ಸೂಚಿಸಿತ್ತು. ನ್ಯಾಯಾಲಯ ಸೂಚಿಸಿರುವ ಐಪಿಸಿ ಸೆಕ್ಷನ್ ಭ್ರಷ್ಟಾಚಾರ ತಡೆ ಕಾಯ್ದೆ, ಬೇನಾಮಿ ಆಸ್ತಿ ವಹಿವಾಟು ಕಾಯ್ದೆ, ಭೂ ಕಬಳಿಕೆ ನಿರ್ಬಂಧ ಕಾಯ್ದೆಯಡಿ ಲೋಕಾಯುಕ್ತ ಎಫ್ಐಆರ್ ದಾಖಲಿಸಿದೆ. ಸಿಎಂ ಸಿದ್ದರಾಮಯ್ಯ A 1 ಆರೋಪಿಯಾಗಿದ್ದರೆ, ಪತ್ನಿ ಪಾರ್ವತಿ A 2 ಆರೋಪಿಯಾಗಿದ್ದಾರೆ. ಇನ್ನು ಬಾಮೈದಾ ಮಲ್ಲಿಕಾರ್ಜುನ A 3, ದೇವರಾಜು ಎ4 ಹಾಗೂ ಎ5 ಇತರರು ಎಂದು ಎಫ್ಐಆರ್ನಲ್ಲಿ ದಾಖಲಿಸಲಾಗಿದೆ. ಇನ್ನು ಸಿಎಂ ಸಿದ್ದರಾಮಯ್ಯ ವಿರುದ್ಧದ ಎಫ್ಐಆರ್ ನಂಬರ್ 11/2024 ಎಂದು ತಿಳಿದು ಬಂದಿದೆ.
ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶದ ಪ್ರತಿ ಗುರುವಾರ ಲೋಕಾಯುಕ್ತ ಎಸ್ಪಿ ಉದೇಶ್ ಅವರ ಪೆಡೆದ್ದರು. ಬಳಿಕ ಲೋಕಾಯುಕ್ತ ಪ್ರಧಾನ ಕಚೇರಿಗೆ ಭೇಟಿ ನೀಡಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಕೊನೆಗೆ ಲೋಕಾಯುಕ್ತ ಎಡಿಜಿಪಿ ಮನೀಶ್ ಖರ್ಬೀಕರ್ ಮಾರ್ಗದರ್ಶನದಲ್ಲಿ ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್ ಅವರು ಖುದ್ದು ತಾವೇ ಮುಂದೆ ನಿಂತು ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಮುಂದಿನ ಕಾನೂನು ಪ್ರಕ್ರಿಯೆ ಏನು?
ಈಗಷ್ಟೇ ಸಿದ್ದರಾಮಯ್ಯ ವಿರುದ್ಧ ಮೈಸೂರು ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಈ ಎಫ್ಐಆರ್ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ತನಿಖೆಗೆ ಕೈಗೊಳ್ಳಲಿದ್ದಾರೆ. ಅಗತ್ಯವಿದ್ದಾಗ ಸಿಎಂ ಸಿದ್ದರಾಮಯ್ಯನವರನ್ನು ವಿಚಾರಣೆಗೆ ಬರುವಂತೆ ನೋಟಿಸ್ ನೀಡಬಹುದು. ಅಲ್ಲದೇ ಲೋಕಾಯುಕ್ತ ಬಂಧಿಸುವ ಅಧಿಕಾರವನ್ನೂ ಸಹ ಹೊಂದಿದೆ. ಹೀಗಾಗಿ ಬಂಧನ ಮಾಡಿದರೂ ಮಾಡಬಹುದು. ಇನ್ನು ಸಿಎಂ ಸಿದ್ದರಾಮಯ್ಯ ಕಾನೂನು ಪರಿಣಿತರ ಸಲಹೆ ಮೇರೆಗೆ ಜಾಮೀನಿಗೆ ಅರ್ಜಿ ಸಲ್ಲಿಸಬಹುದು.