ಬೈಕ್ ಓಡಿಸಿದ ಅಪ್ರಾಪ್ತನಿಗೆ 25 ವರ್ಷದವರೆಗೆ ಲೈಸನ್ಸ್ ನೀಡದಂತೆ ಕೋರ್ಟ್ ಆದೇಶ
– ತಂದೆಗೆ ₹27000 ದಂಡ, ಆರ್ಸಿ ಅಮಾನತು
– ಪ್ರಕರಣ ದಾಖಲಿಸಿದ್ದ ಮೈಸೂರು ಜಿಲ್ಲೆ ಟಿ.ನರಸೀಪುರದ ಪೊಲೀಸರು
NAMMUR EXPRESS NEWS
ಮೈಸೂರು: ವಯಸ್ಸು ಹದಿನೆಂಟು ಆಗದಿದ್ದರೂ ರಾಜಾರೋಷವಾಗಿ ವಾಹನ ಓಡಿಸುವವರು ಹಾಗೂ ಅಪ್ರಾಪ್ತರೆಂದು ಗೊತ್ತಿದ್ದರೂ ಅವರ ಕೈಗೆ ವಾಹನ ನೀಡುವವರಿಗೆ ಇಲ್ಲಿನ ನ್ಯಾಯಾಲಯವೊಂದು ಕಠಿಣ ತೀರ್ಪಿನ ಮೂಲಕ ಬಿಸಿ ಮುಟ್ಟಿಸಿದೆ. ಅಪ್ರಾಪ್ತನಿಗೆ ದ್ವಿಚಕ್ರ ವಾಹನ ನೀಡಿದ ವ್ಯಕ್ತಿಗೆ 27 ಸಾವಿರ ರು. ದಂಡ ವಿಧಿಸಿದ್ದಲ್ಲದೆ, ವಾಹನ ಓಡಿಸುವ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದ ಅಪ್ರಾಪ್ತನಿಗೆ 25 ವರ್ಷ ಆಗುವವರೆಗೆ ಚಾಲನಾ ತರಬೇತಿ ನೀಡದಂತೆ ಸೂಚಿಸಿ ತೀರ್ಪು ಹೊರಡಿಸಿದೆ. ಟಿ.ನರಸೀಪುರದ ಜೆಎಫ್ಎಂಸಿ ನ್ಯಾಯಾಲಯ ಇಂಥದ್ದೊಂದು ಅಪರೂಪದ ತೀರ್ಪು ನೀಡಿದೆ. ಇತ್ತೀಚೆಗೆ ಟಿ.ನರಸೀಪುರ ಪೊಲೀಸರು ವಾಹನ ತಪಾಸಣೆ ನಡೆಸುವಾಗ ಬಾಲಕನೊಬ್ಬ ದ್ವಿಚಕ್ರ ವಾಹನ ಓಡಿಸುತ್ತಿರು ವುದು ಪತ್ತೆಯಾಗಿದ್ದು, ವಾಹನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಟಿ.ನರಸೀಪುರದ ನ್ಯಾಯಾಲಯವು, ಬಾಲಕನಿಗೆ ವಾಹನ ನೀಡಿದ ವಾಹನ ಮಾಲಿಕ ಟಿ.ನರಸೀಪುರ ತಾಲೂಕು ತ್ರಿವೇಣಿನಗರ ನಿವಾಸಿ ಮಹೇಶ್ ಎಂಬವರಿಗೆ 27 ಸಾವಿರ ರು. ದಂಡ ವಿಧಿಸಿದ್ದಲ್ಲದೆ, ಒಂದು ವರ್ಷ ವಾಹನದ ಆರ್.ಸಿ. ಅಮಾನತಿನಲ್ಲಿರಿಸು ವಂತೆ ಆದೇಶಿಸಿದೆ. ಜತೆಗೆ, ಬಾಲಕನಿಗೆ 25 ವರ್ಷದವರೆಗೆ ವಾಹನ ಚಾಲನಾ ಪರವಾನಗಿ ನೀಡದಂತೆ ತೀರ್ಪು ನೀಡಿದೆ.