ರಕ್ಷಣೆಗಾಗಿ ಪೊಲೀಸ್ ಠಾಣೆಗೆ ಬಂದ ಜಿಂಕೆ!
– ನಂಜನಗೂಡಿನಲ್ಲೊಂದು ಅಪರೂಪದ ಘಟನೆ
– ಹಾಡಹಗಲೇ ಜಿಂಕೆ ಓಡಾಟ ಕಂಡು ಆಶ್ಚರ್ಯಗೊಂಡ ಜನ
NAMMUR EXPRESS NEWS
ಮೈಸೂರು: ಮನುಷ್ಯರು ತಮ್ಮ ರಕ್ಷಣೆಗಾಗಿ ಪೊಲೀಸರ ಮೊರೆ ಹೋಗುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಪೊಲೀಸರು ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿಗಳಿಗೂ ರಕ್ಷಕರೇ ಎಂಬಂತೆ ಇಲ್ಲೊಂದು ಜಿಂಕೆ ತನ್ನ ರಕ್ಷಣೆಗಾಗಿ ಪೊಲೀಸ್ ಠಾಣೆಗೆ ಬಂದಿದೆ. ಇಂಥದ್ದೊಂದು ಅಪರೂಪದ ಘಟನೆ ನಡೆದಿದ್ದು ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ. ತನ್ನನ್ನು ಬೆನ್ನತ್ತಿದ್ದ ಬೀದಿನಾಯಿಗಳಿಂದ ಪಾರಾಗಲು ಜಿಂಕೆಯೊಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ಕುತೂಹಲಕಾರಿ ಘಟನೆ ಬುಧವಾರ ನಡೆದಿದೆ. ಹಾಡಹಗಲೇ ಪಟ್ಟಣದಲ್ಲಿ ಜಿಂಕೆ ಓಡಾಡಿದ್ದನ್ನು ಕಂಡು ಜನರು ಆಶ್ಚರ್ಯಚಕಿತರಾಗಿದ್ದಾರೆ.
ಬುಧವಾರ ಬೆಳಗ್ಗೆ 11:10ರ ಸುಮಾರಿಗೆ ಜಿಂಕೆ ದಾರಿ ತಪ್ಪಿ ನಂಜನಗೂಡು ಪಟ್ಟಣ ಪ್ರವೇಶಿಸಿದೆ. ಜನ ಹಾಗೂ ವಾಹನ ದಟ್ಟಣೆ ಕಂಡು ವಿಚಲಿತವಾಗಿ, ಕೆಲ ಬಡಾವಣೆಗಳಲ್ಲಿ ಸುತ್ತಾಡಿದೆ. ಈ ವೇಳೆ ಬೀದಿನಾಯಿಗಳು ಅದರ ಮೇಲೆ ಮುಗಿಬಿದ್ದು, ಮೂರ್ನಾಲ್ಕು ಕಡೆ ಅದನ್ನು ಕಚ್ಚಿ ಗಾಯಗೊಳಿಸಿವೆ.
ನಾಯಿಗಳ ದಾಳಿಯಿಂದ ತತ್ತರಿಸಿದ ಜಿಂಕೆ ನೇರವಾಗಿ ಪೊಲೀಸ್ ಠಾಣೆ ಸೇರಿಕೊಂಡಿದೆ. ನಂಜನಗೂಡಿನ ಶ್ರೀಕಂಠೇಶ್ವರ (ನಂಜುಂಡೇಶ್ವರ) ದೇವಾಲಯದ ಬಳಿಯಿರುವ ಪೋಲೀಸ್ ಉಪಠಾಣೆಯ ಮುಂಭಾಗದ ಬ್ಯಾರಿಕೇಡ್ ಹಾರಿ ನೇರವಾಗಿ ಠಾಣೆಯ ಕೊಠಡಿಗೆ ಬಂದು ನಿಂತಿದೆ. ಅನಿರೀಕ್ಷಿತವಾಗಿ ಪ್ರತ್ಯಕ್ಷವಾದ ಜಿಂಕೆ ಕಂಡು ಪೊಲೀಸರು ಆಶ್ಚರ್ಯಚಕಿತರಾಗಿದ್ದಾರೆ. ಕತ್ತಿನ ಭಾಗದಲ್ಲಿ ನಾಯಿ ಕಚ್ಚಿದ್ದರಿಂದ ಸೋರುತ್ತಿದ್ದ ರಕ್ತವನ್ನು ಗಮನಿಸಿದ ಪೊಲೀಸರು, ಜಿಂಕೆಗೆ ಪ್ರಾಥಮಿಕ ಚಿಕಿತ್ಸೆಯೊಂದಿಗೆ ಸಂತೈಸಿದ್ದಾರೆ. ಅಲ್ಲದೆ, ಠಾಣೆಯ ಕೊಠಡಿಯಲ್ಲೇ ಗಾಯಕ್ಕೆ ಅರಿಶಿನದ ಪುಡಿ ಹಚ್ಚಿ ರಕ್ತ ನಿಲ್ಲುವಂತೆ ಮಾಡಿದ್ದಾರೆ. ನಂತರ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಕೆಲ ಸಮಯದಲ್ಲೇ ಠಾಣೆಗೆ ಬಂದ ಅರಣ್ಯ ಸಿಬ್ಬಂದಿ ಜಿಂಕೆಯನ್ನು ಕೊಂಡೊಯ್ದು ಸುರಕ್ಷಿತ ಸ್ಥಳದಲ್ಲಿ ಬಿಟ್ಟುಬಂದಿದ್ದಾರೆ.