ಮೈಸೂರು-ಹಾಸನ: ಟಾಪ್ 4 ನ್ಯೂಸ್..!
– ಹಾಸನ: ಮದುವೆಯಾಗುವುದಾಗಿ ನಂಬಿಸಿ ಮೋಸ; ಕಾನ್ಸ್ಟೆಬಲ್ ವಿರುದ್ಧ ದೂರು
– ಕೊಡಗು: ವಿದ್ಯುತ್ ಸ್ಪರ್ಶಿಸಿ ಮತ್ತೊಂದು ಕಾಡಾನೆ ಸಾವು
– ಮೈಸೂರು: ಸೆರೆಸಿಕ್ಕ ಚಿರತೆ ಜತೆ ಸೆಲ್ಪಿ ತೆಗೆದುಕೊಳ್ಳುವಾಗ ದಾಳಿ!
– ಮಂಗಳಮುಖಿಯರ ಕಿರುಕುಳ: ಆತ್ಮಹತ್ಯೆಗೆ ಶರಣಾದ ಬಾಲಕ!
NAMMUR EXPRESS NEWS
ಹಾಸನ: ಹಾಸನ ಮೂಲದ ಯುವತಿಯೊಬ್ಬರು ಪೊಲೀಸ್ ಕಾನ್ಸ್ಟೆಬಲ್ ಮೇಲೆ ವಂಚನೆ ಕೇಸ್ ದಾಖಲಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೊಡ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಠಾಣೆ ಕಾನ್ಸ್ಟೆಬಲ್ ಗಿರೀಶ್ ಎಸ್ ಎಮ್ ವಿರುದ್ಧ ಸುಚಿತ್ರಾ ಎಂಬ ಯುವತಿ ಕೇಸ್ ದಾಖಲಿಸಿದ್ದಾರೆ. ಹಾಸನ ಜಿಲ್ಲಾ ಚೆನ್ನರಾಯಪಟ್ಟಣ ಮೂಲದ ಸುಚಿತ್ರಾ ಎಂಬ ಯುವತಿಗೆ ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಯುವತಿಯಿಂದ ಕಾನ್ಸ್ಟೆಬಲ್ ಗಿರೀಶ್ 20 ಲಕ್ಷ ಪಡೆದಿದ್ದ. ಹಣ ಪಡೆದ ಬಳಿಕ ಮದುವೆ ಮಾಡಿಕೊಳ್ಳಲು ಆಗುವುದಿಲ್ಲ ಎಂದು ಮೋಸ ಮಾಡಿದ್ದ. ಸುಚಿತ್ರಾಳಿಂದ ಪಡೆದ ಹಣ ಕೂಡ ಹಿಂತಿರುಗಿಸಲು ನಿರಾಕರಿಸಿದ್ದ. ಈ ವಿಚಾರವಾಗಿ ಕೆಲ ತಿಂಗಳ ಹಿಂದೆ ಉತ್ತರ ಕನ್ನಡ ಎಸ್ ಪಿ ಗೆ ದೂರು ನೀಡಿದ್ದಳು. ಬಳಿಕ ಪೊಲೀಸ್ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಹಣ ಹಿಂತಿರುಗಿಸುವುದಾಗಿ ಗಿರೀಶ್ ಒಪ್ಪಿದ್ದ. ಆದರೆ ಇದುವರೆಗೂ ಯುವತಿಗೆ ಹಣ ಹಿಂತಿರುಗಿಸಿಲ್ಲ. ಹೀಗಾಗಿ ಸೋಮವಾರ ರಾತ್ರಿ ಮುಂಡಗೊಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಿದ್ಯುತ್ ಸ್ಪರ್ಶಿಸಿ ಮತ್ತೊಂದು ಕಾಡಾನೆ ಸಾವು!
ಕೊಡಗು: ವಿದ್ಯುತ್ ಸ್ಪರ್ಶಿಸಿ ಮತ್ತೊಂದು ಕಾಡಾನೆ ಮೃತಪಟ್ಟಿದೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಅರುವತ್ತೊಕ್ಕಲು ಗ್ರಾಮದಲ್ಲಿ ಘಟನೆ ನಡೆದಿದ್ದು, ಈಶ್ವರ ರಾವ್ ತೋಟದಲ್ಲಿ ಆನೆ ಕಳೇಬರ ಪತ್ತೆಯಾಗಿದೆ. ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶದಿಂದ ಕಾಡಾನೆ ಮೃತಪಟ್ಟಿದೆ ಎಂದು ಶಂಕಿಸಲಾಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ರು. ಜಿಲ್ಲೆಯಲ್ಲಿ ವಾರದಲ್ಲಿ 3 ಕಾಡಾನೆಗಳು ಮೃತಪಟ್ಟಿವೆ.
ಸೆರೆಸಿಕ್ಕ ಚಿರತೆ ಜತೆ ಸೆಲ್ಪಿ ತೆಗೆದುಕೊಳ್ಳುವಾಗ ದಾಳಿ!
ಮೈಸೂರು: ಸೆರೆಸಿಕ್ಕ ಚಿರತೆ ಜತೆ ಸೆಲ್ಪಿ ತೆಗೆದುಕೊಳ್ಳಲು ಹೋಗಿ ಅವಾಂತರ ಮಾಡಿಕೊಂಡಿದ್ದಾನೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಯಲಹಳ್ಳಿಯಲ್ಲಿ ಘಟನೆ ನಡೆದಿದ್ದು, ಗ್ರಾಮಕ್ಕೆ ಎಂಟ್ರಿಕೊಟ್ಟಿದ್ದ ಚಿರತೆಯನ್ನ ಸೆರೆಹಿಡಿಯಲಾಗಿತ್ತು. ಆಗ ಸೆಲ್ಪಿ ತೆಗೆದುಕೊಳ್ಳುತ್ತಿದ್ದ ಯುವಕ ಜಯಶಂಕರ್ನನ್ನು ಚಿರತೆ ಪರಚಿದೆ. ಗಾಯಾಳು ಜಯಶಂಕರ್ಗೆ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಮಂಗಳಮುಖಿಯರ ಕಿರುಕುಳದಿಂದp ಆತ್ಮಹತ್ಯೆಗೆ ಶರಣಾದ ಬಾಲಕ!
ಮೈಸೂರು : ಮಂಗಳಮುಖಿಯರು ಗುಂಪಾಗಿ ಬಂದು ಕಿರುಕುಳ ನೀಡಿದ್ದಾರೆಂದು ಬೇಸತ್ತ ಬಾಲಕನೊಬ್ಬ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹೆದ್ದೂರು ಗ್ರಾಮದಲ್ಲಿ ನಡೆದಿದೆ. ಹೌದು ಮೃತ ಬಾಲಕನನ್ನು ರಾಹುಲ್ ಮೌರ್ಯ(17) ಎಂದು ಗುರುತಿಸಲಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ರಾಹುಲ್ ಮೌರ್ಯ ನಾಪತ್ತೆಯಾಗಿದ್ದನು.ಇತ್ತೀಚಿಗೆ ಮನೆಗೆ ವಾಪಾಸ್ ಬಂದಿದ್ದ. ಈ ವೇಳೆ ಜೂನ್ 23ರಂದು ಕೆಲವು ಮಂಗಳಮುಖಿಯರಿಂದ ರಾಹುಲ್ ಮೌರ್ಯ ಕುಟುಂಬಸ್ಥರ ಜೊತೆ ಜಗಳವೂ ಉಂಟಾಗಿತ್ತು. ನೀವು ನಿಮ್ಮ ಹುಡುಗನನ್ನು ನಮ್ಮೊಂದಿಗೆ ಕಳಿಸಿಕೊಡಿ ಎಂದು ಗಲಾಟೆ ಮಾಡಿದ್ದರು. ಜೊತೆಗೆ, ನಿಮ್ಮ ಮಗನೇ ನಮ್ಮ ಹುಡುಗಿಯನ್ನು ಕರೆದೊಯ್ದಿದ್ದಾನೆಂದು ಆರೋಪಿಸಿ ಮಂಗಳಮುಖಿಯರು ಊರಿನಲ್ಲಿ ಬಂದು ಜೋರಾಗಿ ಗಲಾಟೆಯನ್ನೂ ಮಾಡಿದ್ದರು.ಮಂಗಳಮುಖಿಯರು ಮನೆಯ ಬಳಿ ಗಲಾಟೆ ಮಾಡಿದ ದಿನ ಜಮೀನಿನಲ್ಲಿರುವ ಶೆಡ್ ನಲ್ಲಿ ರಾಹುಲ್ ಮೌರ್ಯ ಆತ್ಮಹತ್ಯೆಗೆ ಶರಣಾಗಿದ್ದಾನೆ.