ಮೈಸೂರು ಟಾಪ್ 3 ನ್ಯೂಸ್..!
– ಪ್ರವಾಸಕ್ಕೆ ಹೋದ ಯುವತಿ ನೀರಿನಲ್ಲಿ ಮುಳುಗಿ ಸಾವು.!
– ರೈಲಿಗೆ ಸಿಲುಕಿ 19 ವರ್ಷದ ಯುವಕ ಆತ್ಮಹತ್ಯೆ.!
– ಕಲುಷಿತ ನೀರು ಸೇವಿಸಿ 25ಕ್ಕೂ ಹೆಚ್ಚು ಜನರು ಅಸ್ವಸ್ಥ!
NAMMUR EXPRESS NEWS
ಮೈಸೂರು: ನೀರಿನಲ್ಲಿ ಮುಳುಗಿ ಯುವತಿಯೊಬ್ಬಳು ಮೃತಪಟ್ಟಿದ್ದಾಳೆ. ಮೈಸೂರಿನ ತಿ.ನರಸೀಪುರ ತಾಲೂಕಿನ ತಲಕಾಡು ಗ್ರಾಮದ ಕಾವೇರಿ ನದಿಯಲ್ಲಿ ಘಟನೆ ನಡೆದಿದೆ. ಮೆಹನಾಜ್ (17) ಮೃತ ದುರ್ದೈವಿ. ಬೆಂಗಳೂರಿನ ಬನ್ನೇರುಘಟ್ಟ ನಿವಾಸಿಯಾದ ಮೆಹನಾಜ್ ತಲಕಾಡಿಗೆ ಪ್ರವಾಸಕ್ಕೆ ಬಂದಿದ್ದ ವೇಳೆ ದುರ್ಘಟನೆ ನಡೆದಿದೆ. ಈಜು ಬಾರದೆ ಇದ್ದರೂ, ನೀರಿನಲ್ಲಿ ಆಟವಾಡುಲು ನದಿಗೆ ಇಳಿದಿದ್ದಾಳೆ. ಆದರೆ ನೀರಿನ ಸೆಳತಕ್ಕೆ ಸಿಲುಕಿ ಮೃತಪಟ್ಟಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಲಕಾಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೀರಿನಲ್ಲಿ ಮುಳುಗಿದ್ದ ಮೃತದೇಹವನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ತಲಕಾಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೈಲಿಗೆ ಸಿಲುಕಿ 19 ವರ್ಷದ ಯುವಕ ಆತ್ಮಹತ್ಯೆ.!
ಮೈಸೂರು: ರೈಲಿಗೆ ಸಿಲುಕಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನ ಬಸವನಪುರ ಗ್ರಾಮದ ಬಳಿ ನಡೆದಿದೆ. ಕರ್ಣ (19ವ) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ. ಪತ್ರಿಕಾ ವಿತರಕನಾಗಿ ಕರ್ಣ ಕೆಲಸ ಮಾಡುತ್ತಿದ್ದನು. ಸೂಕ್ತ ಕೆಲಸವಿಲ್ಲದೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ರೈಲ್ವೆ ಪೊಲೀಸರು ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕಲುಷಿತ ನೀರು ಸೇವಿಸಿ 25ಕ್ಕೂ ಹೆಚ್ಚು ಜನರು ಅಸ್ವಸ್ಥ!
ಮೈಸೂರು: ಕಲುಷಿತ ನೀರು ಸೇವಿಸಿ 25ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿರುವ ಘಟನೆ ಹುಣಸೂರು ತಾಲೂಕಿನ ಕಡೇಮನುಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಯಿಂದ ಮನೆಗಳಿಗೆ ನೀರು ಪೂರೈಸುವ ಪೈಪ್ಗೆ ಹಾನಿಯಾಗಿದೆ. ಒಡೆದ ಪೈಪ್ ಒಳಗೆ ಕಲುಷಿತ ನೀರು ಸೇರ್ಪಡೆಯಾಗಿದೆ. ಈ ನೀರನ್ನು ಗ್ರಾಮಸ್ಥರು ಸೇವಿಸಿದ್ದು, 25ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥರನ್ನು ತಾಲೂಕು ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗ್ರಾಮಕ್ಕೆ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.