ಮೈಸೂರು ಟಾಪ್ 4 ನ್ಯೂಸ್..!
– ಮಳೆಗೆ ಬಿದ್ದ ಬೃಹತ್ ಗಾತ್ರದ ಮರ: 700 ವರ್ಷ ಹಳೆಯ ಮಠದ ಕಟ್ಟಡ ಹಾನಿ
– ಸಾರ್ವಜನಿಕರನ್ನು ಹೆದರಿಸಿ ದರೋಡೆಗೆ ಸಂಚು: ಇಬ್ಬರ ಬಂಧನ
– ಸ್ಕೂಟರ್ ಲಾರಿ ಢಿಕ್ಕಿ: ವಿಕಲಚೇತನ ವ್ಯಕ್ತಿ ಮೃತ್ಯು!
– ಜಾತಿ ನಿಂದನೆ ಮಾಡಿ ಕೊಲೆಗೆ ಯತ್ನ: ಆರೋಪಿಗೆ 10 ವರ್ಷ ಜೈಲು!
NAMMUR EXPRESS NEWS
ಹಾಸನ: ಹಾಸನ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಧಾರಾಕಾರ ಮಳೆಗೆ ನಗರದ ಸಂಗಮೇಶ್ವರ ಬಡಾವಣೆಯ ಜವೇನಹಳ್ಳಿ ಮಠದ ಈಶ್ವರ ದೇಗುಲದ ಮೇಲೆ ಬೃಹತ್ ಗಾತ್ರದ ಮರ ಬಿದ್ದಿದೆ. ಮರ ಬಿದ್ದ ಪರಿಣಾಮ ಮಠದ ಕಟ್ಟಡ ಹಾಗೂ ದೇಗುಲಕ್ಕೆ ಹಾನಿಯಾಗಿದೆ. ಮಠದಲ್ಲಿ ಯಾರೂ ಇಲ್ಲದಿದ್ದರಿಂದ ಭಾರಿ ಅನಾಹುತ ತಪ್ಪಿದೆ. ಹಳೆಯ ಮಠ ಮಳೆಗಾಲದಲ್ಲಿ ಸೋರುತ್ತಿದ್ದರಿಂದ ಮಠದ ಪೀಠಾಧ್ಯಕ್ಷ ಶ್ರೀ ಸಂಗಮೇಶ್ವರ ಸ್ವಾಮೀಜಿ ಬೇರೆಡೆ ತಂಗುತ್ತಿದ್ದರು. ಸದ್ಯ 700 ವರ್ಷ ಹಳೆಯದಾದ ಜವೇನಹಳ್ಳಿ ಮಠ ದುರಸ್ತಿ ಮಾಡುವಂತೆ ಭಕ್ತಾಧಿಗಳು ಆಗ್ರಹಿಸಿದ್ದಾರೆ. ಹಾಸನ, ಸಕಲೇಶಪುರ, ಆಲೂರು, ಬೇಲೂರು ಭಾಗದಲ್ಲಿ ಮಳೆ ಜೋರಾಗಿದೆ. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ವಿದ್ಯಾರ್ಥಿಗಳು, ವಾಹನ ಸವಾರರು ಪರದಾಡುವಂತಾಗಿದೆ.
ದರೋಡೆಗೆ ಸಂಚು: ಇಬ್ಬರ ಬಂಧನ.!
ಹಾಸನ: ಕಾರಿನಲ್ಲಿ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ನಿರ್ಜನ ಪ್ರದೇಶದಲ್ಲಿ ಸಾರ್ವಜನಿಕರನ್ನು ಹೆದರಿಸಿ, ಹಲ್ಲೆ ಮಾಡಿ ನಗ-ನಾಣ್ಯ ದೋಚಲು ಮತ್ತು ದನಕರು ಕಳ್ಳತನ ಮಾಡಲು ಸಿದ್ಧತೆ ಮಾಡಿಕೊಂಡಿದ್ದ ಇಬ್ಬರನ್ನು ಅರಸೀಕೆರೆ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಜುಲೈ.21ರಂದು ಗ್ರಾಮಾಂತರ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಚಂದ್ರಶೇಖರ್ ಅವರು, ಮೈಸೂರು ರಸ್ತೆಯ ನಾರಾಯಣ ಘಟ್ಟೆಹಳ್ಳಿ ಸಮೀಪ ಬೈಪಾಸ್ ರಸ್ತೆಯ ಕೆಳಸೇತುವೆ ಕೆಳಗೆ ವಾಹನ ತಪಾಸಣೆ ನಡೆಸುತ್ತಿದ್ದರು. ರಾತ್ರಿ 8.30ರ ಸಮಯದಲ್ಲಿ ಮೈಸೂರು ಕಡೆಯಿಂದ ಅರಸೀಕೆರೆ ಕಡೆಗೆ ವೇಗವಾಗಿ ಬಂದ ಕಾರು, ಅರಸೀಕೆರೆ ಕಡೆಗೆ ಬರದೇ ಬೈಪಾಸ್ ರಸ್ತೆಯತ್ತ ವೇಗವಾಗಿ ಹೋಗಿದೆ. ಅನುಮಾನ ಬಂದ ಕೂಡಲೇ ಕಾರ್ಯಪ್ರವೃತ್ತರಾಗಿ ಚಂದ್ರಶೇಖರ್, ಸಿಬ್ಬಂದಿಯೊಂದಿಗೆ ಆ ಕಾರನ್ನು ಹಿಂಬಾಲಿಸಿದ್ದಾರೆ. ವಿಷ್ಣುಪುರ ಗ್ರಾಮದ ಹತ್ತಿರ ಕಾರನ್ನು ಅಡ್ಡಗಟ್ಟಿದ್ದು, ಕಾರಿನಿಂದ ಇಳಿದು ಓಡಲು ಯತ್ನಿಸಿದ ಮೂಡಿಗೆರೆ ಗ್ರಾಮದ ಫಾರೂಕ್ ಅಲಿಯಾಸ್ ಮಹಮ್ಮದ್ ಫಾರೂಕ್, ಮಹಮ್ಮದ್ ಅಲಿಯಾಸ್ ಮನ್ಸೂರ್ ಜಾವೀದ್ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ. ಇವರೊಂದಿಗಿದ್ದ ಚನ್ನರಾಯಪಟ್ಟಣದ ಹಸೇನ್ ಅಲಿಯಾಸ್ ಮೋಟು, ರಿಯಾಜ್, ಮುನೀರ್ ಎಂಬುವವರು ಪರಾರಿಯಾಗಿದ್ದಾರೆ. ಕಾರಿನ ಡಿಕ್ಕಿಯಲ್ಲಿದ್ದ ಕಬ್ಬಿಣದ ರಾಡು, ಮಚ್ಚು, ಕಾರದ ಪುಡಿ, ಡ್ರಾಗರ್ ಚಾಕು ವಶಪಡಿಸಿಕೊಳ್ಳಲಾಗಿದೆ. ಇವರು ದನಕರುಗಳನ್ನು ಕಳವು ಮಾಡುತ್ತಿದ್ದು, ಆ ಸಂದರ್ಭದಲ್ಲಿ ಯಾರಾದರೂ ತಡೆಯಲು ಬಂದರೆ ಮಾರಕಾಸ್ತ್ರಗಳಿಂದ ಹೆದರಿಸಿ ಹಲ್ಲೆ ಮಾಡಲು, ಜೊತೆಗೆ ರಾತ್ರಿಯ ವೇಳೆ ಒಬ್ಬಂಟಿಗರ ಮೇಲೆ ದಾಳಿ ಮಾಡಿ, ಹಣ, ವಡವೆ ಮತ್ತು ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಲು ಬಂದಿರುವುದಾಗಿ ಆರೋಪಿಗಳು ತಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಕೂಟರ್ ಲಾರಿ ಢಿಕ್ಕಿ: ವಿಕಲಚೇತನ ವ್ಯಕ್ತಿ ಮೃತ್ಯು
ಮೈಸೂರು: ವಿಕಲಚೇತನ ವ್ಯಕ್ತಿಯೋರ್ವರು ಚಲಾಯಿಸುತ್ತಿದ್ದ ಸ್ಕೂಟರ್ ಗೆ ಲಾರಿಯೊಂದು ಢಿಕ್ಕಿಯಾಗಿ ಸವಾರ ಮೃತಪಟ್ಟ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಂಜಲ್ಪಡು ಎಂಬಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ. ಬಂಟ್ವಾಳ ತಾಲೂಕಿನ ಪುತ್ತೂರು ಏಮಾಜೆ ಶಿವರಾಮ ನಾಯ್ಕ (50) ಎಂಬವರು ಮೃತಪಟ್ಟ ವ್ಯಕ್ತಿ. ಮಂಗಳೂರು ಕಡೆಗೆ ಹೋಗುತ್ತಿದ್ದ ಲಾರಿಯು ಶಿವರಾಮ ಅವರು ಚಲಾಯಿಸುತ್ತಿದ್ದ ಮೂರು ಚಕ್ರದ ಸ್ಕೂಟರ್ ಗೆ ಢಿಕ್ಕಿಯಾಗಿತ್ತು. ಢಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟು ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪುತ್ತೂರು ಸಂಚಾರ ಠಾಣೆಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಕೊಲೆಗೆ ಯತ್ನಿಸಿದವನಿಗೆ 10 ವರ್ಷ ಜೈಲು
ಮಡಿಕೇರಿ: ಜಾತಿ ನಿಂದನೆ ಮಾಡಿ, ಕೊಲೆ ಮಾಡಲು ಯತ್ನಿಸಿದ ಅಪರಾಧಿ ನಂದೀಶ ಎಂಬಾತನಿಗೆ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯವು 10 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ₹ 15 ಸಾವಿರ ದಂಡ ವಿಧಿಸಿದೆ. ಈತ ಮಾದಪಟ್ಟಣ ಗ್ರಾಮದ ನಿವಾಸಿ ಅಣ್ಣಾಜಿ ಎಂಬುವವರ ಮೇಲೆ ಹಳೆಯ ದ್ವೇಷದ ಕಾರಣಕ್ಕೆ 2022ರ ಅಕ್ಟೋಬರ್ 11ರಂದು ಜಾತಿ ನಿಂದನೆ ಮಾಡಿ, ಕತ್ತಿಯಿಂದ ತಲೆ ಹಾಗೂ ಕಿವಿಯ ಭಾಗಕ್ಕೆ ಹಲ್ಲೆ ನಡೆಸಿದ್ದ.
ಇದರಿಂದ ಅಣ್ಣಾಜಿ ಅವರ ಕಿವಿ ತುಂಡಾಗಿ, ದವಡೆಯ ಮೂಳೆ ಮುರಿದು, ತೀವ್ರ ಸ್ವರೂಪದ ಗಾಯಗಳಾಗಿದ್ದವು.
ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ತನಿಖಾಧಿಕಾರಿ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ ನೇತೃತ್ವದ ತಂಡವು ನಂದೀಶ್ನನ್ನು ಬಂಧಿಸಿ, ಐಪಿಸಿ 307 ಮತ್ತು ಎಸ್.ಸಿ, ಎಸ್.ಟಿ. ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಜಿ.ಪ್ರಶಾಂತಿ ಅವರು ಅಪರಾಧಿಗೆ ಶಿಕ್ಷೆ ವಿಧಿಸಿದರು. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಎನ್.ಪಿ.ದೇವೇಂದ್ರ ವಾದ ಮಂಡಿಸಿದ್ದರು.