ಮೈಸೂರು ಅರಮನೆಗೆ ಈಗ ಪಾರಿವಾಳಗಳೇ ಕಂಟಕ!
– ಪಾರಿವಾಳದ ಹಿಕ್ಕೆಯಿಂದ ಅರಮನೆ ಸೌಂದರ್ಯಕ್ಕೆ ಧಕ್ಕೆ
– ಪಾರಿವಾಳಗಳಿಗೆ ಕಾಳು ಹಾಕುವುದಕ್ಕೆ ಜಿಲ್ಲಾಡಳಿತ ನಿಷೇಧ?!
NAMMUR EXPRESS NEWS
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಅರಮನೆಗೆ ಹೆಸರುವಾಸಿ. ಅರಮನೆ ನೋಡಲು ವಿಶ್ವದ ಮೂಲೆ ಮೂಲೆಯಿಂದ ಜನ ಬರುತ್ತಾರೆ..! ಆದರೆ ಈಗ ವಿಶ್ವವಿಖ್ಯಾತ ಮೈಸೂರು ಅರಮನೆಗೆ ಪಾರಿವಾಳಗಳ ಹಿಕ್ಕೆಯಿಂದ ಕಂಟಕ ಎದುರಾಗಿದೆ.
ಹೌದು. ಪಾರಿವಾಳಗಳು ಹಾಕುವ ಹಿಕ್ಕೆಯಲ್ಲಿ, ಯೂರಿಕ್ ಆಸಿಡ್ ಇರುತ್ತದೆ. ಯೂರಿಕ್ ಆಸಿಡ್ ಇಂದ ಕೂಡಿರುವ ಈ ಹಿಕ್ಕೆಗಳು ಪಾರಂಪರಿಕ ಕಟ್ಟಡಗಳ ಮೇಲೆ ಬೀಳುವುದರಿಂದ, ಕಟ್ಟಡಗಳು ವಿರೂಪಗೊಳ್ಳುತ್ತವೆ ಎಂದು ಇತಿಹಾಸ ತಜ್ಞ ಪ್ರೋ. ರಂಗರಾಜು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಪ್ರೋ. ರಂಗರಾಜು, ಈ ಹಿಕ್ಕೆಗಳನ್ನು ತಾಮ್ರ ಅಥವಾ ಸ್ಟೀಲ್ ಪಾತ್ರೆಯಲ್ಲಿ ಹಾಕಿ ಕೆಲವು ದಿನಗಳು ಬಿಟ್ಟರೆ, ರಂಧ್ರ ಬೀಳುತ್ತದೆ. ಮೈಸೂರಿನ ಹತ್ತನೇ ಚಾಮರಾಜ ವೃತ್ತ ಮತ್ತು ನಾಲ್ವಡಿ ಕೃಷ್ಣರಾಜ ವೃತ್ತಗಳನ್ನು ಮಾರ್ಬಲ್ ಕಲ್ಲಿನಿಂದ ಮಾಡಲಾಗಿದೆ. ಈ ವೃತ್ತದಲ್ಲಿ ಪಾರಿವಾಳಗಳು ಹಿಕ್ಕೆ ಹಾಕುವುದರಿಂದ ಮಾರ್ಬಲ್ಗೆ ಹಾನಿಯಾಗಲಿದೆ. ಈ ಹಿಕ್ಕೆಗಳಿಂದ ಅರಮನೆಗೆ ಬಹಳ ಮಾರಕವಾಗಲಿದೆ ಎಂದಿದ್ದಾರೆ.
ಹೀಗಾಗಿ, ಅರಮನೆ, ಈ ವೃತ್ತಗಳ ಬಳಿ ಪಾರಿವಾಳಗಳಿಗೆ ಕಾಳು ಹಾಕುವುದನ್ನು ತಡೆಯಬೇಕು. ಈ ಬಗ್ಗೆ ಅನೇಕರು ಧ್ವನಿ ಎತ್ತಿದ್ದಾರೆ. ಈ ಪಾರಿವಾಳಗಳು ಅರಮನೆ, ರಾಜರ ವೃತ್ತಗಳಿಂದ ದೂರ ಹೋಗುವಂತೆ ಮಾಡಬೇಕು. ಪಾರಿವಾಳಗಳು ದೂರ ಹೋಗಬೇಕೆಂದರೆ ಕಾಳುಗಳನ್ನು ಹಾಕುವುದು ನಿಲ್ಲಿಸಬೇಕು. ಪಾರಿವಾಳಗಳಿಗೆ ಹಾಕುವ ಕಾಳುನ್ನು ಅರಮನೆ ಅಕ್ಕ- ಪಕ್ಕ ಮಾರಾಟ ಮಾಡಲು ಆರಂಭಿಸಿದ್ದಾರೆ. ಇದನ್ನೂ ತಡೆಯಬೇಕು. ಅರಮನೆ ಸೇರಿ ಪಾರಂಪರಿಕ ಕಟ್ಟಡದ ರಕ್ಷಣೆಗೆ ಕ್ರಮ ವಹಿಸುವಂತೆ ಮನವಿ ಮಾಡಿದರು.
ಪಾರಿವಾಳಗಳಿಗೆ ಕಾಳು ಹಾಕುವುದನ್ನು ತಡೆಯಬೇಕು: ಜಿಲ್ಲಾಧಿಕಾರಿ
ಮೈಸೂರು ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಮಾತನಾಡಿ, ಅರಮನೆಯ ಮುಂಭಾಗದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ನಿತ್ಯ ಪಾರಿವಾಳಗಳಿಗೆ ಮೂಟೆಗಟ್ಟಲೆ ಗೋಧಿ, ಜೋಳ, ಭತ್ತವನ್ನು ನೀಡುತ್ತಿದ್ದಾರೆ. ಪ್ರವಾಸಿಗರು ಹಾಗೂ ಸಾರ್ವಜನಿಕರು ಕೂಡ ಆಹಾರ ಧಾನ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹಾಕುತ್ತಿದ್ದಾರೆ. ಇದರಿಂದ ಪಾರಿವಾಳಗಳು ಅರಮನೆ ಸುತ್ತಮುತ್ತ ವಾಸಿಸಲು ಆರಂಭಿಸಿವೆ. ಈ ಪಾರಿವಾಳಗಳು ಅರಮನೆಯ ಕಟ್ಟಡದ ಮೇಲೆಲ್ಲ ಹಿಕ್ಕೆಗಳನ್ನು ಹಾಕಿ, ಹಾನಿ ಮಾಡುತ್ತಿವೆ. ಇದು ಹೀಗೆ ಮುಂದುವರೆದರೆ ಮುಂಬರುವ ದಿನಗಳಲ್ಲಿ ಸಾಂಸ್ಕೃತಿಕ ಕಟ್ಟಡ ತನ್ನ ಸೌಂದರ್ಯ ಕಳೆದುಕೊಳ್ಳುತ್ತದೆ. ಹೀಗಾಗಿ ಇದನ್ನು ಈಗಲೇ ತಡೆಗಟ್ಟಬೇಕು ಎಂದರು. ಪಾರಿವಾಳಗಳಿಗೆ ಕಾಳು ಹಾಕುವುದನ್ನು ಪಾರಂಪರಿಕ ತಜ್ಞರು ಹಾಗೂ ಪರಿಸರ ಪ್ರೇಮಿಗಳು ಅಪಾಯಕಾರಿ ಎಂದು ಹೇಳಿದ್ದಾರೆ. ಹಾಗಾಗಿ ಸಾರ್ವಜನಿಕರು ತಮ್ಮ ಖುಷಿಗಾಗಿ ಪಕ್ಷಿಗಳಿಗೆ ತೊಂದರೆ ನೀಡದಂತೆ ಪ್ರವಾಸಿಗರಿಗೆ ಜಾಗೃತಿ ಮೂಡಿಸಬೇಕು ಎಂದು ಸೂಚನೆ ನೀಡಿದರು.