ಮೈಸೂರು ಟಾಪ್ 3 ನ್ಯೂಸ್..!
ಚೆಕ್ ದುರುಪಯೋಗ ಆರೋಪ..!
– ಆರೋಗ್ಯಾಧಿಕಾರಿ ಸೇರಿ ಇಬ್ಬರ ವಿರುದ್ಧ ದೂರು
ಮೈಸೂರು ಸರ್ಕಾರಿ ಆಸ್ಪತ್ರೆಯಲ್ಲಿ ನೀರು,ವಿದ್ಯುತ್ ಸಮಸ್ಯೆ.!
– ಸರಿಯಾದ ಚಿಕಿತ್ಸೆ ಸಿಗದೆ ರೋಗಿಗಳ ಪರದಾಟ
ಮೈಸೂರು ಪಾಲಿಕೆಯಿಂದ 1515 ಕೆಜಿ ಪ್ಲಾಸ್ಟಿಕ್ ವಶ!
– 1,61 ಲಕ್ಷ ದಂಡ ವಸೂಲಿ
NAMMUR EXPRESS NEWS
ಮೈಸೂರು: ವ್ಯವಹಾರದ ನಿಮಿತ್ತ ಭದ್ರತೆಗಾಗಿ ನೀಡಿದ್ದ 4.5 ಲಕ್ಷ ರೂ. ಚೆಕ್ ದುರುಪಯೋಗ ಆರೋಪ ಕೇಳಿಬಂದ ಹಿನ್ನೆಲೆ ಪಾಲಿಕೆ ಆರೋಗ್ಯಾಧಿಕಾರಿ ವಿರುದ್ಧ ಮೈಸೂರಿನ ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವ್ಯವಹಾರದ ನಿಮಿತ್ತ ನೀಡಿದ್ದ ಚೆಕ್ನಲ್ಲಿ 4.5 ಲಕ್ಷ ರೂ. ನಮೂದಿಸಿಕೊಂಡು ಬೌನ್ಸ್ಗೆ ಯತ್ನಿಸಲಾಗಿದೆ. ಪಾಲಿಕೆ ಹಿರಿಯ ಆರೋಗ್ಯಾಧಿಕಾರಿ ವೆಂಕಟೇಶ್ ಹಾಗೂ ಹಾಸನ ನಿವಾಸಿ ಕೇಶವಮೂರ್ತಿ ಎಂಬುವರಿಂದ ವಂಚನೆ ಮಾಡಿದ್ದು, ಸರಸ್ವತಿಪುರಂ ನಿವಾಸಿ ಮೀರಾ ಎಂಬುವವರಿಂದ ದೂರು ನೀಡಲಾಗಿದೆ. ಸದ್ಯ ಇಬ್ಬರ ವಿರುದ್ಧ ವಂಚನೆ ಕೇಸ್ ದಾಖಲಿಸುವಂತೆ ಮೈಸೂರಿನ ಜೆಎಂಎಫ್ಸಿ ನ್ಯಾಯಾಲಯದಿಂದ ಸರಸ್ವತಿಪುರಂ ಠಾಣಾ ಪೊಲೀಸರಿಗೆ ಆದೇಶ ನೀಡಲಾಗಿದೆ. ದೂರು ನೀಡಿರುವ ಮೀರಾ ಎಂಬುವವರು ಸರಸ್ವತಿಪುರಂನಲ್ಲಿ ಅನ್ನಪೂರ್ಣ ಆಫ್ ಸೆಟ್ ಮುದ್ರಣಾಲಯ ಇಟ್ಟುಕೊಂಡಿದ್ದಾರೆ.
ಮೈಸೂರು ಸರ್ಕಾರಿ ಆಸ್ಪತ್ರೆಯಲ್ಲಿ ನೀರು,ವಿದ್ಯುತ್ ಸಮಸ್ಯೆ: ಸರಿಯಾದ ಚಿಕಿತ್ಸೆ ಸಿಗದೆ ರೋಗಿಗಳ ಪರದಾಟ:
ಮೈಸೂರು: ಕರ್ನಾಟಕದ ಗ್ರಾಮೀಣ ಭಾಗ ಮತ್ತು ದೂರದ ಊರುಗಳಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿವೆ, ಆದರೆ ಇಲ್ಲಿಯ ವಾಸ್ತವವೇ ಬೇರೆ ಇದೆ. ಬಡವರ ಆರೋಗ್ಯ ಸೇವೆಗಾಗಿ ಶ್ರಮಿಸುತ್ತಿದ್ದೇವೆ. ಆರೋಗ್ಯ ಕ್ಷೇತ್ರದಲ್ಲಿ ನಾವು ಬಹಳಷ್ಟು ಅಭಿವೃದ್ಧಿ ಮಾಡಿದ್ದೇವೆ ಎಂದು ಹೇಳುವ ರಾಜಕಾರಣಿಗಳು ಒಮ್ಮೆ ಹೆಚ್ಡಿ ಕೋಟೆ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ. ಈ ಭಾಗದಲ್ಲಿ ಹೆಚ್ಚಾಗಿರುವ ಬುಡಕಟ್ಟು ಜನರಿಗೆ ಸೇವೆ ಸಲ್ಲಿಸುತ್ತಿರುವ ಹೆಚ್ಡಿ ಕೋಟೆ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುತ್ ಮತ್ತು ನೀರಿನ ನಿರಂತರ ಕೊರತೆಯಿಂದಾಗಿ ರೋಗಿಗಳು ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನೀರಿಲ್ಲದೆ ಪರದಾಡುತ್ತಿರುವ ಬಗ್ಗೆ ಹೇಳಿಕೊಳ್ಳಲಾಗಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರೋಗಿಗಳಿಗೆ ಬೇಕಾಗಿರುವ ಅಗತ್ಯ ಚಿಕಿತ್ಸೆಗಳನ್ನು ನೀಡಲು ಸೌಲಭ್ಯದ ಕೊರತೆಯಿಂದಾಗಿ ಕಳೆದ ಎರಡು ದಿನದಿಂದ ಕನಿಷ್ಠ 5 ರಿಂದ 10 ಡಯಾಲಿಸಿಸ್ ರೋಗಿಗಳಿಗೆ ಆಸ್ಪತ್ರೆಯ ಸಿಬ್ಬಂದಿ ಚಿಕಿತ್ಸೆ ನೀಡಲಾಗಿಲ್ಲ. ತೀವ್ರ ಮೂತ್ರಪಿಂಡದ ಸಮಸ್ಯೆಗಳಿರುವ ವ್ಯಕ್ತಿಗಳಿಗೆ ಡಯಾಲಿಸಿಸ್ ಮಾಡುವುದು ಅತ್ಯವಶ್ಯಕ. ಆದರೆ ಆಸ್ಪತ್ರೆಯಲ್ಲಿ ವಿದ್ಯುತ್ ಮತ್ತು ನೀರಿನ ಸಮಸ್ಯೆಯಿಂದಾಗಿ ರೋಗಿಗಳಿಗೆ ಚಿಕಿತ್ಸೆ ಸಹ ಕಷ್ಟಕರವಾಗಿದೆ. ಈ ಆಸ್ಪತ್ರೆಯಲ್ಲಿ ಅತಿ ಮುಖ್ಯವಾದ ನೀರು, ವಿದ್ಯುತ್ ಇಲ್ಲದೆ ಅನೇಕರ ರೋಗಿಗಳ ಜೀವಕ್ಕೆ ಅಪಾಯವಿದೆ ಎಂಬಂತಾಗಿದೆ. ಆಸ್ಪತ್ರೆಗೆ ಬಂದ ರೋಗಿಗಳು ಸರಿಯಾದ ಚಿಕಿತ್ಸೆ ಸಿಗದೆ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಆಸ್ಪತ್ರೆಗೆ ಸೇರಿದ ನಂತರವೂ ಚಿಕಿತ್ಸೆ ಸಿಗದೆ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ರೋಗಿಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬೇರೆಡೆ ತೆರಳಿದ್ದಾರೆ. ಡಯಾಲಿಸಿಸ್ ಮಿಸ್ ಆದ ರೋಗಿಗಳು ಮತ್ತಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಈ ಸರ್ಕಾರಿ ಆಸ್ಪತ್ರೆಯಲ್ಲಿನ ಕಳಪೆ ಸೇವೆ ಮತ್ತು ಸಂಪನ್ಮೂಲಗಳ ಕೊರತೆಯ ವಿರುದ್ಧ ರೋಗಿಗಳು ತಮ್ಮ ಹತಾಶೆ ಮತ್ತು ಭಯವನ್ನು ವ್ಯಕ್ತಪಡಿಸಿದ್ದಾರೆ. ಬಡ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆ ಇದ್ದರೂ ಇಲ್ಲದಂತಾಗಿದೆ.
ನಾವು ಸರ್ಕಾರಿ ಆಸ್ಪತ್ರೆಗಳ ಮೇಲೆ ಡಿಪೆಂಡ್ ಆಗಿದ್ದೇವೆ. ಆರೋಗ್ಯ ಸುಧಾರಿಸಬಹುದು ಎಂದು ಇಲ್ಲಿಗೆ ಬಂದ್ವಿ. ಸಾವಿರಾರು ರೂಪಾಯಿ ನೀಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ನಮ್ಮಿಂದ ಸಾಧ್ಯವಿಲ್ಲ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ವಿದ್ಯುತ್, ನೀರು ಮುಂತಾದ ಮೂಲ ಸೌಕರ್ಯಗಳೇ ಇಲ್ಲದಿದ್ದರೆ ರೋಗಿಗಳ ಪರಿಸ್ಥಿತಿ ಏನಾಗಬಹುದು? ಕೆಲವೊಮ್ಮೆ ಆಸ್ಪತ್ರೆ ಸಿಬ್ಬಂದಿ ಮಳೆ, ಸೆಸ್ಕ್ ಅಧಿಕಾರಿಗಳನ್ನು ದೂಷಿಸುತ್ತಾರೆ, ಆದರೆ ಚಿಕಿತ್ಸೆಗೆಂದೇ ಅಕ್ಕಪಕ್ಕದ ಹಳ್ಳಿಗಳಿಂದ ದೂರದೂರಿಂದ ಬರುವ ರೋಗಿಗಳ ಪರಿಸ್ಥಿತಿ, ಸಮಸ್ಯೆಗಳನ್ನು ಪರಿಗಣಿಸುವುದಿಲ್ಲ ಎಂದು ರೋಗಿಯ ಸಂಬಂಧಿ ರಂಗಸ್ವಾಮಿ ಬೇಸರ ವ್ಯಕ್ತಪಡಿಸಿದರು. ನಾವು ನಮ್ಮಲ್ಲಿರುವದರೊಂದಿಗೆ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದ್ದೇವೆ, ಆದರೆ ಸ್ಥಿರವಾದ ವಿದ್ಯುತ್ ಮತ್ತು ನೀರು ಇಲ್ಲದೆ, ಈ ರೋಗಿಗಳಿಗೆ ಅಗತ್ಯವಿರುವ ಆರೈಕೆಯನ್ನು ಮಾಡಲು ಅಸಾಧ್ಯವಾಗುತ್ತಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿಯೊಬ್ಬರು ಹೇಳಿದರು. ಇನ್ನು ಈ ಸಮಸ್ಯೆ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್ಒ) ಡಾ.ಕುಮಾರಸ್ವಾಮಿ ಅವರ ಗಮನಕ್ಕೆ ತಂದಿದ್ದು ಈ ಬಗ್ಗೆ ಪರಿಶೀಲಿಸಿ ಶೀಘ್ರದಲ್ಲಿಯೇ ಪರಿಹರಿಸುವುದಾಗಿ ತಿಳಿಸಿದ್ದಾರೆ.
ಮೈಸೂರು ಪಾಲಿಕೆಯಿಂದ 1515 ಕೆಜಿ ಪ್ಲಾಸ್ಟಿಕ್ ವಶ: 1,61 ಲಕ್ಷ ದಂಡ ವಸೂಲಿ:
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ನಗರ ಪಾಲಿಕೆ ಹಲವಾರು ಕಾರ್ಯಕ್ರಮಗಳನ್ನು ಯೋಜಸುತ್ತಾ ಬರುತ್ತಿದೆ. ನಗರ ಪಾಲಿಕೆಯಿಂದ ನಿಷೇಧಿತ ಪ್ಲಾಸ್ಟಿಕ್ ಬಳಕೆ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಾ ಬರುತ್ತಿದ್ದು, ನಿನ್ನೆ (ಮೇ.16) ಒಟ್ಟು 9 ವಲಯ ಕಚೇರಿ ವ್ಯಾಪ್ತಿಯಲ್ಲಿ ಕಾರ್ಯಚರಣೆ ನಡೆಸಿದ ನಗರ ಪಾಲಿಕೆ 1515 ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಂಡಿದೆ. ಹಾಗೂ 1,61 ಲಕ್ಷ ದಂಡ ವಸೂಲಿ ಮಾಡಿದೆ. ಸೂಕ್ತ ಮಾಹಿತಿ ಮೇರೆಗೆ ಆಯಕ್ತರ ಆದೇಶದಂತೆ ನಗರದ ಧನ್ವಂತ್ರಿ ರಸ್ತೆಯಲ್ಲಿರುವ, ಮಲ್ಲೇಶ್ ಎಂಬುವವರಿಗೆ ಸೇರಿದ ಧನ್ವಂತ್ರ ಎಂಟರ್ಪ್ರೈಸಸ್ ಗೋದಾಮಿಗೆ ವಲಯ ಆಯುಕ್ತರ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಗೋದಾಮಿನಲ್ಲಿ ಸಂಗ್ರಹಿಸಿದ್ದ ನಿಷೇಧಿತ ಪ್ಲಾಸ್ಟಿಕ್ನ್ನು ವಶಪಡಿಸಿಕೊಂಡು 25 ಸಾವಿರ ರೂ ದಂಡ ವಿಧಿಸಿದ್ದಾರೆ.