ಮುಂದುವರಿದ ವರ್ಷಧಾರೆ; ಮಲೆನಾಡಾದ ಮೈಸೂರು.!
– ಪರಿಸರದಲ್ಲಿನ ತಾಪಮಾನದ ಪ್ರಮಾಣ ತೀವ್ರ ಇಳಿಕೆ
– ಹಾಸನದಲ್ಲೂ ಧಾರಾಕಾರ ಮಳೆ: ನೀರಿನಲ್ಲಿ ಸಿಲುಕಿದ ವಾಹನಗಳು
NAMMUR EXPRESS NEWS
ಮೈಸೂರು: ನಗರ ಹಾಗೂ ಸುತ್ತಮುತ್ತ ಭಾನುವಾರ ಆಗಾಗ್ಗೆ ಮಳೆಯಾಗಿದ್ದು, ಮಲೆನಾಡನ್ನು ನೆನಪಿಸುವಂತೆ ಇತ್ತು. ಕೆಲವಡೆ ಮುಂಜಾನೆ 6ಕ್ಕೆ ಮಳೆ ಆರಂಭಗೊಂಡು ಒಂದು ಗಂಟೆ ಕಾಲ ಅಬ್ಬರಿಸಿದರೆ, ಮತ್ತೆ ಕೆಲವೆಡೆ ಬೆಳಿಗ್ಗೆ 9ಕ್ಕೆ ಆರಂಭಗೊಂಡು 11ರವರೆಗೂ ಹನಿಯಿತು. ಮಧ್ಯಾಹ್ನ ಒಂದಿಷ್ಟು ಹೊತ್ತು ಬಿಸಿಲು ಬಂತಾದರೂ ಸಂಜೆ 4ರ ಬಳಿಕ ಮತ್ತೆ ಕಪ್ಪನೆಯ ಮೋಡಗಳು ಕವಿದು ಆಗಾಗ್ಗೆ ವರ್ಷಧಾರೆ ಆಗುತ್ತಲೇ ಹೋಯಿತು. ಗುಡುಗು-ಸಿಡಿಲಿನ ಅಬ್ಬರವಿಲ್ಲದೆಯೇ ಸುರಿಯುತ್ತಿದ್ದ ಮಳೆಯಲ್ಲಿ ಜನ ಅತ್ತಿಂದಿತ್ತ ಓಡಾಡಲು ಪ್ರಯಾಸ ಪಟ್ಟರು. ರಜೆಯ ಮೋಜು ಸವಿಯಲು ಹೊರಗೆ ಹೋಗುವ ಯೋಜನೆ ಮಾಡಿಕೊಂಡಿದ್ದವರು ಮನೆಯಲ್ಲೇ ಬೆಚ್ಚಗೆ ಕುಳಿತು ಮಳೆ ಆಸ್ವಾದಿಸಿದರು.
ಉಷ್ಣಾಂಶ ಇಳಿಕೆ:
ಕಳೆದೊಂದು ವಾರದಿಂದ ನಿರಂತರ ಮಳೆಯಿಂದಾಗಿ ಪರಿಸರದಲ್ಲಿನ ತಾಪಮಾನದ ಪ್ರಮಾಣವು ತೀವ್ರ ಇಳಿಕೆ ಆಗಿದೆ. ಎರಡು ವಾರದ ಹಿಂದಷ್ಟೇ ಗರಿಷ್ಠ 40 ಡಿಗ್ರಿ ಸೆಲ್ಸಿಯಸ್ನಷ್ಟು ಉಷ್ಣಾಂಶ ದಾಖಲಿಸಿ ಬಿಸಿಲ ನಗರಿಯಾಗಿದ್ದ ಮೈಸೂರಿನಲ್ಲಿ ಭಾನುವಾರ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ಗೆ ಇಳಿಕೆ ಆಗಿತ್ತು. ಬುಧವಾರದವರೆಗೂ ಇದೇ ವಾತಾವರಣ ಇರಲಿದೆ ಎಂದು ಹವಾಮಾನ ವರದಿಗಳು ಹೇಳಿವೆ.
ಹಾಸನದ ಹಲವೆಡೆ ಧಾರಾಕಾರ ಮಳೆ: ನೀರಿನಲ್ಲಿ ಸಿಲುಕಿದ ವಾಹನಗಳು
ಹಾಸನ: ಇಂದು ರಾಜ್ಯದ ಹಲವೆಡೆ ಭಾರೀ ಮಳೆಯಾಗಿದೆ. ಅದರಂತೆ ಹಾಸನ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ ಸುರಿದಿದ್ದು, ಮಳೆಯಿಂದ ಅವಾಂತರಗಳಾಗಿವೆ. ಕಳೆದ ಒಂದು ಗಂಟೆಯಿಂದ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ಜನ ಕಂಗಾಲಾಗಿದ್ದಾರೆ. ಇನ್ನು ನಿರಂತರ ಮಳೆಯಿಂದರಸ್ತೆಯ ಮೇಲೆ ಒಂದು ಅಡಿಗೂ ಹೆಚ್ಚು ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಇದರಿಂದ ಚನ್ನರಾಯಪಟ್ಟಣದ ಬಾಗೂರು ರಸ್ತೆ ಸಂಪೂರ್ಣ ಜಲಾವೃತವಾಗಿದ್ದು, ರಸ್ತೆಯಲ್ಲಿ ಉಕ್ಕಿ ಹರಿಯುತ್ತಿರುವ ನೀರಿನಲ್ಲಿ ವಾಹನಗಳು ಸಿಲುಕಿದೆ. ಇನ್ನು ಹಿಂದೂ ರುದ್ರಭೂಮಿಯ ಸಿಬ್ಬಂದಿ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ಹಾನಿಯಾಗಿವೆ.