ಜೈ ಶ್ರೀ ರಾಮ್.. ಭಾರತದೆಲ್ಲೆಡೆ ಸಂಭ್ರಮ!
– ಅಯೋಧ್ಯೆ ರಾಮನಿಗೆ ವರ್ಷದ ಹರ್ಷ: ಎಲ್ಲೆಡೆ ರಾಮನಿಗೆ ನಮನ
– ಶ್ರೀ ರಾಮನ ಪ್ರತಿಷ್ಠಾಪನೆ ದಿನ: ದೇಶದ ಹಬ್ಬದಂತೆ ಸಂಭ್ರಮ
NAMMUR EXPRESS NEWS
ಅಯೋಧ್ಯೆ: ಉತ್ತರ ಪ್ರದೇಶ ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಾಗಿ ಒಂದು ವರ್ಷ ಪೂರ್ಣಗೊಂಡಿದೆ. ಹೀಗಾಗಿ ರಾಮಮಂದಿರದ ಮೊದಲ ವಾರ್ಷಿಕೋತ್ಸವ ಅದ್ದೂರಿಯಾಗಿ ದೇಶದ ಮೂಲೆ ಮೂಲೆಯಲ್ಲೂ ನಡೆಯಲಿದೆ. ಈಗಾಗಲೇ ದೇಶದ ಎಲ್ಲೆಡೆ ಸಂಭ್ರಮ ಕಳೆಗಟ್ಟಿದೆ. ಅಯೋಧ್ಯೆಯಲ್ಲಿ ಮೂರು ದಿನಗಳ ಉತ್ಸವ ಕೂಡ ನಡೆಯಲಿದೆ. ರಾಮ ಮಂದಿರದಲ್ಲಿ ರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆಯ ದಿನ ಎಲ್ಲೆಡೆ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕೇಸರಿ ಧ್ವಜಗಳಿಂದ ಎಲ್ಲಾ ದೇವಸ್ಥಾನಗಳು ಹಾಗೂ ಪಟ್ಟಣಗಳು ಕಂಗೊಳಿಸುತ್ತಿವೆ. ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರತಿಷ್ಠಾಪನೆ ದಿನವನ್ನು ಇಡೀ ದೇಶದ ಹಬ್ಬದಂತೆ ಸಂಭ್ರಮ ಸಡಗರದಿಂದ ಆಚರಣೆ ಮಾಡಲು ಸಿದ್ಧತೆ ನಡೆದಿದೆ.
– ಅಯೋಧ್ಯೆ ದೇಶದ ನಂ.1 ಪ್ರವಾಸಿ ತಾಣ
ಉದ್ಘಾಟನೆಗೊಂಡ ವರ್ಷದೊಳಗೇ ಅಯೋಧ್ಯೆ ರಾಮಮಂದಿರ ದೇಶದ ನಂ.1 ಪ್ರವಾಸಿ ತಾಣ ಅಥವಾ ಭಕ್ತಾದಿಗಳ ನೆಚ್ಚಿನ ಭೇಟಿಯ ತಾಣವಾಗಿ ಹೊರಹೊಮ್ಮಿದೆ. 2024ರ ಜನವರಿ ಮತ್ತು ಸೆಪ್ಟೆಂಬರ್ ಅವಧಿಯಲ್ಲಿ ಉತ್ತರ ಪ್ರದೇಶಕ್ಕೆ ಸುಮಾರು 47 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದರು. ಈ ಪೈಕಿ ಅಯೋಧ್ಯೆ ಒಂದಕ್ಕೇ 13.3 ಕೋಟಿ ಪ್ರವಾಸಿಗರು ಭೇಟಿ ಕೊಟ್ಟಿದ್ದಾರೆ. ಅದರಲ್ಲಿ 3,153 ವಿದೇಶಿಗರೂ ಕೂಡ ಸೇರಿದ್ದಾರೆ. ಮಂದಿರದಿಂದ ರಾಜ್ಯದ ಪ್ರವಾಸೋದ್ಯಮದ ನಕಾಶೆಯನ್ನೇ ಬದಲಿಸಿದೆ. ಹಬ್ಬಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ದಂಡೇ ಹರಿದು ಬರುತ್ತದೆ. ಅಯೋಧ್ಯೆ ರಾಮನ ವಿಗ್ರಹವನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಮಾಡಿದ್ದರು. ದೇಶದ ಪ್ರಮುಖ 3 ಶಿಲ್ಪಿಗಳಲ್ಲಿ ಅರುಣ್ ಒಬ್ಬರಾಗಿದ್ದರು. ಮೈಸೂರಿನ ಎಚ್ ಡಿ ಕೋಟೆ ಕಲ್ಲು ಬಳಕೆ ಮಾಡಲಾಗಿತ್ತು.
ಗಿನ್ನಿಸ್ ದಾಖಲೆ ಬರೆದ ಲಕ್ಷ ಹಣತೆ!
ದೀಪಾವಳಿ ಸಂದರ್ಭದಲ್ಲಿ ಸರಯೂ ನದಿಯ ದಂಡೆಯ ಮೇಲೆ 22 ಲಕ್ಷ ಹಣತೆಗಳನ್ನು ಸರ್ಕಾರ ಬೆಳಗಿಸುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಿತು. ರಾಮಮಂದಿರ ಸುರಕ್ಷತೆ ನಿರ್ವಹಣೆಗೆ ವಿಶ್ವದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪ್ರತಿಷ್ಠಿತ ‘ಸ್ವರ್ಡ್ ಆಫ್ ಆನರ್’ ಪ್ರಶಸ್ತಿಯನ್ನು ರಾಮಮಂದಿರ ಪಡೆದುಕೊಂಡಿದೆ.
ಹಳ್ಳಿ ಹಳ್ಳಿಯಲ್ಲೂ ಸಡಗರ: ವಿಶೇಷ ಆಚರಣೆ
ಶ್ರೀ ರಾಮ ಮಂದಿರ ನಿರ್ಮಾಣದ ದಿನವನ್ನು ದೇಶದ ಜನ ವಿಶೇಷವಾಗಿ ಆಚರಣೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಜ. 21ರಿಂದಲೇ ಆಚರಣೆಗೆ ಎಲ್ಲೆಡೆ ಕೇಸರಿ ಧ್ವಜ ಕಟ್ಟಲಾಗುತ್ತಿದೆ. ಇನ್ನು ರಾಮನ ದೇಗುಲ, ಸೇರಿ ದೇಗುಲಗಳಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.