Categories
ರಾಷ್ಟ್ರೀಯ ವಾರ್ತೆ

ವಿಶ್ವದಲ್ಲೇ ಟ್ರಾಫಿಕ್ ಜಾಂ ಸಮಸ್ಯೆ ಬೆಂಗಳೂರು 3ನೇ ಸ್ಥಾನ !

ವಿಶ್ವದಲ್ಲೇ ಟ್ರಾಫಿಕ್ ಜಾಂ ಸಮಸ್ಯೆ ಬೆಂಗಳೂರು 3ನೇ ಸ್ಥಾನ !
– ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ಸಿಲಿಕಾನ್ ಸಿಟಿ ಬೆಂಗಳೂರು
– ಕೊಲಂಬಿಯಾ ನಂ.1, ಕೋಲ್ಕತಾಗೆ 2ನೇ ಸ್ಥಾನ

NAMMUR EXPRESS NEWS
ನವದೆಹಲಿ: ಸಿಲಿಕಾನ್‌ ಸಿಟಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ದೇಶದಲ್ಲಿ ಮಾತ್ರವಲ್ಲ, ಇದೀಗ ವಿಶ್ವಮಟ್ಟದಲ್ಲೂ ಸುದ್ದಿಯಾಗುತ್ತಿದೆ. ವಾಹನ ದಟ್ಟಣೆಗೆ ಹೆಸರುವಾಸಿಯಾದ ಬೆಂಗಳೂರು ನಿಧಾನಗತಿಯ ಟ್ರಾಫಿಕ್‌ಗಾಗಿ ವಿಶ್ವದಲ್ಲೇ 3ನೇ ಸ್ಥಾನ ಪಡೆದಿದೆ. ನೆದರ್‌ಲೆಂಡ್‌ನ ಲೊಕೇಷನ್‌ ಟೆಕ್ನಾಲಜಿ ಸಂಸ್ಥೆ ‘ಟಾಮ್‌ ಟಾಮ್‌’ ಬಿಡುಗಡೆ ಮಾಡಿರುವ ವಿಶ್ವದ ಪ್ರಮುಖ ನಗರಗಳ ಸಂಚಾರ ದಟ್ಟಣೆ ಕುರಿತ ವರದಿಯಲ್ಲಿ ಭಾರತದ ಮೂರು ನಗರಗಳು ವಿಶ್ವದ ಟಾಪ್‌ 5 ನಿಧಾನಗತಿಯ ಟ್ರಾಫಿಕ್‌ ಹೊಂದಿರುವ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಅದರಲ್ಲಿ ಕೋಲ್ಕತಾ, ಬೆಂಗಳೂರು, ಪುಣೆ ಕ್ರಮವಾಗಿ 2 ರಿಂದ 4ನೇ ಸ್ಥಾನ ಪಡೆದುಕೊಂಡಿವೆ. ಮೊದಲ ಸ್ಥಾನದಲ್ಲಿ ಕೊಲಂಬಿಯಾದ ಬಾರಂಕ್ವಿಲಾ ನಗರವಿದೆ.

ಟ್ರಾಫಿಕ್‌ ಇಂಡೆಕ್ಸ್‌ ಹೇಳಿದ್ದೇನು?: ಟಾಟ್‌ ಟಾಮ್‌ ಟ್ರಾಫಿಕ್‌ ಇಂಡೆಕ್ಸ್‌ ಪ್ರಕಾರ 2024ರಲ್ಲಿ ಬೆಂಗಳೂರು ನಗರದಲ್ಲಿ 10 ಕಿ.ಮೀ. ಕ್ರಮಿಸಲು ಸರಾಸರಿ 30.10 ನಿಮಿಷ ಬೇಕಿತ್ತು. 2023ಕ್ಕೆ ಹೋಲಿಸಿದರೆ ಸಂಚಾರಿಸಲು ಬೇಕಾಗುವ ಸಮಯ 50 ಸೆಕೆಂಡ್‌ನಷ್ಟು ಹೆಚ್ಚಾಗಿದೆ. ಕೋಲ್ಕತಾದಲ್ಲಿ 10 ಕಿ.ಮೀ. ಕ್ರಮಿಸಲು 34.33 ನಿಮಿಷ ಬೇಕು. ಪುಣೆ, ನಿಧಾನಗತಿಯ ಟ್ರಾಫಿಕ್‌ ಹೊಂದಿರುವ ನಗರಗಳ ಪಟ್ಟಿಗೆ ಇದೇ ಮೊದಲ ಬಾರಿ ಸೇರ್ಪಡೆಯಾಗಿದ್ದು, ನಾಲ್ಕನೆಯ ಸ್ಥಾನ ಪಡೆದುಕೊಂಡಿದೆ. ಇನ್ನು ಭಾರತದ ಇತರೆ ನಗರಗಳಾದ ಹೈದರಾಬಾದ್‌ 18, ಚೆನ್ನೈ 31 ಮತ್ತು ಮುಂಬೈ 39ನೇ ಸ್ಥಾನದಲ್ಲಿದೆ.

ವರ್ಷ ವರ್ಷ ಐಟಿ ಸಿಟಿ ಟ್ರಾಫಿಕ್‌ ಸ್ಥಿತಿ ಗಂಭೀರ

2022ರಲ್ಲಿ ಬೆಂಗಳೂರು ನಗರದಲ್ಲಿ 10 ಕಿ.ಮೀ. ಕ್ರಮಿಸಬೇಕಿದ್ದರೆ ಸರಾಸರಿ 29 ನಿಮಿಷ 9 ಸೆಕೆಂಡ್‌, 2023ರಲ್ಲಿ 28 ನಿಮಿಷ 10 ಸೆಕೆಂಡ್‌, 2024ರಲ್ಲಿ 30 ನಿಮಿಷ 10 ಸೆಕೆಂಡ್‌ ಬೇಕಾಗಿತ್ತು. ಅತಿ ಹೆಚ್ಚು ಖಾಸಗಿ ಕಾರು ಹೊಂದಿರುವ ನಗರಗಳ ಪೈಕಿ ಬೆಂಗಳೂರು ಕೆಲ ವರ್ಷಗಳ ಹಿಂದೆಯೇ ದೆಹಲಿ ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಬಂದಿದೆ. ನಗರದಲ್ಲಿ 25 ಲಕ್ಷಕ್ಕೂ ಹೆಚ್ಚು ಖಾಸಗಿ ಕಾರುಗಳಿವೆ. ನಿತ್ಯವೂ 2000 ವಾಹನಗಳು ರಸ್ತೆಗೆ ಇಳಿಯುತ್ತಿವೆ ಎಂದು ನಗರದಲ್ಲಿನ ಪರಿಸ್ಥಿತಿ ದಿನೇ ದಿನೇ ಗಂಭೀರವಾಗುತ್ತಿರುವ ಬಗ್ಗೆ ವರದಿ ಒತ್ತಿ ಹೇಳಿದೆ.

ವಿಶ್ವದ ಟಾಪ್‌ 5 ನಗರಗಳು

1.ಬಾರಂಕ್ವಿಲಾ 36.6

2 ಕೋಲ್ಕತಾ 34.33

3 ಬೆಂಗಳೂರು 34.10

4 ಪುಣೆ 33.22

5 ಲಂಡನ್‌ 33.17

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.