- ನಾಳೆ ದೆಹಲಿಗೆ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ
NAMMUR EXPRESS NEWS
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯ ಚಟುವಟಿಕೆ ಚುರುಕುಗೊಂಡಿದ್ದು ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಜೋರಾಗಿದೆ. ಈ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಸಿದ್ಧವಾಗಿದ್ದು ಮಾರ್ಚ್ 17 ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ಧರಾಮಯ್ಯ ದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿದೆ.
ಈಗಾಗಲೇ 120ರಿಂದ 150 ಅಭ್ಯರ್ಥಿಗಳನ್ನು ಒಳಗೊಂಡಿರುವ ಮೊದಲ ಪಟ್ಟಿ ಅಂತಿಮವಾಗಿದ್ದು ಈ ಹಿನ್ನೆಲೆಯಲ್ಲಿ ಮೊದಲ ಪಟ್ಟಿ ಬಿಡುಗಡೆ ಮಾಡುವ ಮುನ್ನ ಅಂತಿಮವಾಗಿ ಚರ್ಚಿಸಲು ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಮಾ.17ರಂದು ಸಭೆ ಕರೆದಿದೆ. ಈ ಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭಾಗಿಯಾಗಲಿದ್ದಾರೆ.
ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮಾರ್ಚ್ 17ರಂದು ದೆಹಲಿಗೆ ತೆರಳಲಿದ್ದು, ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಮೋಹನ್ ಪ್ರಕಾಶ್ ನೇತೃತ್ವದ ಸೀನಿಂಗ್ ಕಮಿಟಿಯಲ್ಲಿ ಪರಿಶೀಲಿಸಿದ್ದು, ಅಂತಿಮ ಪಟ್ಟಿಯನ್ನು ಹೈಕಮಾಂಡ್ ಕಳುಹಿಸಿತ್ತು. ಈಗ ಇದೇ ಪಟ್ಟಿ ಬಗ್ಗೆ ಮಾ.17ರಂದು ನಡೆಯಲಿರುವ ಸಭೆಯಲ್ಲಿ ಚರ್ಚೆ ನಡೆಯಲಿದೆ. ಇನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಸಭೆಯಲ್ಲಿ ಸಿದ್ದರಾಮಯ್ಯ ಡಿಕೆ ಶಿವಕುಮಾರ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮನಮೋಹನ್ ಸಿಂಗ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಕೆ.ಸಿ. ವೇಣುಗೋಪಾಲ್, ಎಕೆ.ಆಯಂಟನಿ, ವೀರಪ್ಪ ಮೊಯ್ಲಿ, ಸೀನಿಂಗ್ ಕಮಿಟಿ ಮುಖ್ಯಸ್ಥ ಮೋಹನ್ ಪ್ರಕಾಶ್ ಸೇರಿದಂತೆ ಹಲವು ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.
ಸಭೆ ಬಳಿಕ ಸುಮಾರು ಮೊದಲ ಪಟ್ಟಿಯಲ್ಲಿ 150 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸುವ ಸಾಧ್ಯತೆಗಳಿದೆ, ಮೊದಲ ಪಟ್ಟಿಯನ್ನು ಮಾರ್ಚ್ 20ರೊಳಗೆ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.
ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ಗಾಗಿ ಸುಮಾರು 1230 ಅರ್ಜಿಗಳು ಬಂದಿದ್ದವು. ಈ ಪೈಕಿ ಅಳೆದು ತೂಗಿ ಮೊದಲ ಹಂತದಲ್ಲಿ 150 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು ಈ ಮೊದಲ ಪಟ್ಟಿಯಲ್ಲಿ ಪ್ರಮುಖ ನಾಯಕರ ಹೆಸರು ಇರುವ ಸಾಧ್ಯತೆಗಳಿವೆ. ರಾಮಲಿಂಗರೆಡ್ಡಿ, ಡಾ.ಜಿ.ಪರಮೇಶ್ವರ್, ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ, ಜಮೀರ್ ಅಹ್ಮದ್ ಖಾನ್ ಸೇರಿದಂತೆ ಬಹುತೇಕ ಹಲವು ಹಾಲಿ ಶಾಸಕರಿಗೆ ಟಿಕೆಟ್ ಘೋಷಿಸಲಾಗುತ್ತೆ ಎನ್ನಲಾಗಿದೆ.