- ವಿಧಾನ ಸಭೆ ಚುನಾವಣೆ ಮುಗಿಯುತ್ತಿದ್ದಂತೆ ಚುನಾವಣೆ
- ಕ್ಷೇತ್ರ ಪುನರ್ವಿಂಗಡಣೆ, ಅಧಿಸೂಚನೆ ಹೊರಡಿಸಿದ ಸರ್ಕಾರ
NAMMUR EXPRESS NEWS
ಬೆಂಗಳೂರು: ರಾಜ್ಯದ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳನ್ನು ಪುನರ್ ವಿಂಗಡಿಸಿ ಹಾಗೂ ಸದಸ್ಯರ ಸಂಖ್ಯೆ ನಿಗದಿ ಮಾಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ರಾಜ್ಯದಲ್ಲಿ ಸ್ಥಳೀಯ ಆಡಳಿತದ ಚುನಾವಣೆಗೂ ವೇದಿಕೆ ಸಿದ್ಧಗೊಳ್ಳುತ್ತಿದೆ.
ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ಕ್ಷೇತ್ರಗಳನ್ನು ಪುನರ್ವಿಂಗಡಿಸಿ ಹಾಗೂ ಸದಸ್ಯರ ಸಂಖ್ಯೆ ನಿಗದಿಪಡಿಸಿ ಮಾಡಿದ್ದ ಶಿಫಾರಸು ಗಳನ್ನು ಸರ್ಕಾರ ಅಂಗೀಕರಿಸಿದೆ. ರಾಜ್ಯದ ಹಲವು ಗ್ರಾಮಗಳು ನಗರ ಪಾಲಿಕೆ, ನಗರ ಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಗಳಿಗೆ ಸೇರಿವೆ. ಕೆಲ ಗ್ರಾಮಗಳನ್ನು ಸೇರಿಸಿ ಪಟ್ಟಣ ಪಂಚಾಯಿತಿಗಳಾಗಿ ರೂಪಿಸಲಾಗಿದೆ. ಇಂತಹ ಗ್ರಾಮಗಳನ್ನು ಕೈಬಿಟ್ಟು ಕ್ಷೇತ್ರಗಳನ್ನು ಪುನರ್ ವಿಂಗಡಿಸಲಾಗಿದೆ. ಕೆಲ ಜಿಲ್ಲೆಗಳ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ, ಸದಸ್ಯರ ಸಂಖ್ಯೆಯಲ್ಲಿ ಕಡಿಮೆಯಾಗಿವೆ. ಕೆಲ ಜಿಲ್ಲೆ ಗಳಲ್ಲಿ ಹೆಚ್ಚಾಗಿವೆ. ಹಲವು ಕ್ಷೇತ್ರಗಳ ಸೀಮಾಗಡಿಯಲ್ಲಿ ವ್ಯತ್ಯಾಸವಾದರೂ, ಕ್ಷೇತ್ರ, ಸದಸ್ಯರ ಸಂಖ್ಯೆ ಯಥಾ ಸ್ಥಿತಿಯಲ್ಲಿವೆ.
ಎಷ್ಟು ಜನಸಂಖ್ಯೆಗೆ ಇಷ್ಟು ಸ್ಥಾನ!?
ಮೊದಲು 40 ಸಾವಿರ ಜನ ಸಂಖ್ಯೆಗೆ ಒಂದು ಜಿಲ್ಲಾ ಪಂಚಾಯಿತಿ ಕ್ಷೇತ್ರ, 10 ಸಾವಿರ ಜನಸಂಖ್ಯೆಗೆ ಒಂದು ತಾಲ್ಲೂಕು ಪಂಚಾಯಿತಿ ಕ್ಷೇತ್ರ ನಗದಿ ಮಾಡಲಾಗಿತ್ತು. ಹೊಸ ಆದೇಶದ ನಂತರ 35 ಸಾವಿರ ಜನ ಸಂಖ್ಯೆಗೆ ಒಂದು ಜಿಲ್ಲಾ ಪಂಚಾಯಿತಿ, 12,500 ಜನ ಸಂಖ್ಯೆಗೆ ಒಂದು ತಾಲ್ಲೂಕು ಪಂಚಾಯಿತಿ ಕ್ಷೇತ್ರ ರಚಿಸಿಲಾಗಿದೆ.