- ಮತದಾರರಿಗೆ ಹಂಚುವ 2900 ಕುಕ್ಕರ್ಗಳು ಜಪ್ತಿ
- ಚುನಾವಣೆ ವೇಳೆ ಮತದಾರರಿಗೆ ಭಾರೀ ಆಫರ್
- ಪೊದೆಯ ಮಧ್ಯೆ ದೇವರ ವಿಗ್ರಹಗಳು ಪತ್ತೆ
NAMMUR EXPRESS NEWS
ರಾಮನಗರ: ರಾಮನಗರ ತಾಲೂಕಿನ ಕರಿಕಲ್ ದೊಡ್ಡಿ ಬಳಿಯಿರುವ ಕುಕ್ಕರ್ ತಯಾರಿಕಾ ಕಾರ್ಖಾನೆ ಮೇಲೆ ತಹಶೀಲ್ದಾರ್ ತೇಜಸ್ವಿನಿ ನೇತೃತ್ವದಲ್ಲಿ ದಾಳಿ ಮಾಡಿದ್ದು, 2900 ಕುಕ್ಕರ್ಗಳನ್ನು ಜಪ್ತಿ ಮಾಡಲಾಗಿದೆ. ವಿಶ್ವಾಸ್ ವೈದ್ಯ ಎಂಬುವರಿಗೆ ಕುಕ್ಕರ್ಗಳು ಸೇರಿದ್ದು ಎನ್ನಲಾಗುತ್ತಿದೆ. ಸವದತ್ತಿ ಯಲ್ಲಮ್ಮ ಕ್ಷೇತ್ರದ ಮತದಾರರಿಗೆ ಹಂಚಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು ಎನ್ನಲಾಗುತ್ತಿದೆ. ಸದ್ಯ ಈ ಕುರಿತು ಇಬ್ಬರ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಕುಕ್ಕರ್, ಮಿಕ್ಸರ್ ಗ್ರೈಂಡರ್, ಸೀರೆಗಳನ್ನು ಹಂಚುವ ಕಾರ್ಯ ಎಲ್ಲ ಪಕ್ಷದ ಶಾಸಕರು, ನಾಯಕರು, ಉಚ್ಚಾಟಿತ ನಾಯಕರು ಶುರವಿಟ್ಟುಕೊಂಡಿದ್ದಾರೆ. ಜೆಡಿಎಸ್ ಪಕ್ಷದಿಂದ ಹೊರದೊಬ್ಬಲ್ಪಟ್ಟಿರುವ ಗುಬ್ಬಿ ಕ್ಷೇತ್ರದ ಶಾಸಕ ಎಸ್ ಆರ್ ಶ್ರೀನಿವಾಸ ಅವರು ಇತ್ತೀಚೆಗೆ ಶಿವರಾತ್ರಿಯಂದು ತಮ್ಮ ಕ್ಷೇತ್ರದಲ್ಲಿ ಕುಕ್ಕರ್ ಹಂಚಲು ಹೋಗಿ ಮತದಾರರಿಂದ ಮಂಗಳಾರತಿ ಮಾಡಿಸಿಕೊಂಡಿದ್ದಾರೆ
ತಲೆ ಮೇಲೆ ಹ್ಯಾಟು ಧರಿಸಿ ವಿದೇಶಿ ಮಹಿಳೆಯಂತೆ ಕಾಣುವ ಕಾರ್ಯಕರ್ತೆಯೊಬ್ಬರು ಶಾಸಕರ ಪರವಾಗಿ ಸ್ಥಳೀಯ ಕಾರ್ಯಕರ್ತರೊಂದಿಗೆ ಕುಕ್ಕರ್ ಹಂಚುತ್ತಾ ಈ ಮನೆಗೆ ಬಂದಾಗ ಅದರಲ್ಲಿ ವಾಸವಾಗಿರುವ ವ್ಯಕ್ತಿಯೊಬ್ಬರು, ತಮ್ಮ ಕಷ್ಟದ ಸಮಯದಲ್ಲಿ ನೆರವಾಗದ ಶಾಸಕ ಚುನಾವಣೆ ಸಮಯದಲ್ಲಿ ಕುಕ್ಕರ್ ಕಳಿಸಿದರೆ ಅದನ್ನು ತಗೋಬೇಕಾ? ನಮಗೇನೂ ಬೇಕಿಲ್ಲ, ನಿಮ್ಮ ಅರಿಶಿಣ ಕುಂಕುಮ ಕೂಡ ಬೇಡ ಅಂತ ಗದರುತ್ತಾ ಅಲ್ಲಿಂದ ಸಾಗಹಾಕಿದ್ದಾರೆ.
ಪೊದೆಯ ಮಧ್ಯೆ ದೇವರ ವಿಗ್ರಹಗಳು ಪತ್ತೆ
ಮಂಗಳೂರಿನ ಪಂಪ್ವೆಲ್-ಕುಸ್ಕೋರಿ ಗುಡ್ಡೆ ಮುಖ್ಯರಸ್ತೆ ಸಮೀಪದಲ್ಲಿ ಪೊದೆಯ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿಟ್ಟಿದ್ದ ದೇವರ ವಿಗ್ರಹಗಳು ಪತ್ತೆಯಾಗಿವೆ. ಶಾರಾದಾ ದೇವಿಯ 2.5 ಇಂಚು ಉದ್ದದ, ಗಣಪತಿಯ 1 ಇಂಚು ಉದ್ದದ, ಲಕ್ಷ್ಮೀ ದೇವಿಯ 2 ಇಂಚು ಉದ್ದದ, ಹಿತ್ತಾಳೆಯ ನಂದಿಯ 1 ಇಂಚು ಉದ್ದದ, ಕಂಚಿನ ದತ್ತಾತ್ರೇಯ ದೇವರ 6 ಇಂಚು ಉದ್ದ ಹಾಗೂ ಹಿತ್ತಾಳೆಯ ನಾಗದೇವರ 2 ಇಂಚು ಉದ್ದದ ವಿಗ್ರಹಗಳು ಪತ್ತೆಯಾಗಿವೆ. ಈ ವಿಗ್ರಹಗಳ ವಾರಸುದಾರರು ಇದ್ದಲ್ಲಿ ಸೂಕ್ತ ದಾಖಲೆಯೊಂದಿಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.