- ‘ಸುಪ್ರೀಂ’ ಆದೇಶ: ಸನ್ನಡತೆ ಆಧಾರದಲ್ಲಿ ಬಂಧಮುಕ್ತ
- ಆತ್ಮಹತ್ಯೆ ಬಾಂಬ್ ಸ್ಫೋಟ ಮಾಡಿ ಹತ್ಯೆ
NAMMUR EXPRESS NEWS
ನವದೆಹಲಿ: 1991ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಆತ್ಮಹತ್ಯಾ ಬಾಂಬ್ ಸ್ಫೋಟಿಸಿ ಹತ್ಯೆಗೈದ ಪ್ರಕರಣದಲ್ಲಿ ಕಳೆದ 30 ವರ್ಷಗಳಿಂದ ಜೈಲಿನಲ್ಲಿದ್ದ 6 ಅಪರಾಧಿಗಳನ್ನು ಬಿಡುಗಡೆ ಮಾಡಲು ಸುಪ್ರೀಂಕೋರ್ಟ್ ಶುಕ್ರವಾರ ಮಹತ್ವದ ನಿರ್ದೇಶನ ಹೊರಡಿಸಿದೆ.
ರಾಜೀವ್ ಹತ್ಯೆ ಪ್ರಕರಣದ 7 ಅಪರಾಧಿಗಳ ಪೈಕಿ ಕಳೆದ ಮೇನಲ್ಲಿ ಒಬ್ಬನಿಗೆ ಸರ್ವೋಚ್ಚ ನ್ಯಾಯಾಲಯ ಬಿಡುಗಡೆ ಭಾಗ್ಯ ಕಲ್ಪಿಸಿತ್ತು. ಇದೀಗ ಉಳಿದ 6 ಮಂದಿಯನ್ನು ಬಂಧಮುಕ್ತಗೊಳಿಸುವುದರೊಂದಿಗೆ ರಾಜೀವ್ ಹತ್ಯೆ ಪ್ರಕರಣದ ಎಲ್ಲ ಅಪರಾಧಿಗಳೂ ಜೈಲಿನಿಂದ ಹೊರಬಂದಂತಾಗಿದೆ.
ಯಾರಿಗೆ ಮುಕ್ತಿ?!: ನಳಿನಿ ಶ್ರೀಹರನ್, ಆರ್.ಪಿ.ರವಿಚಂದ್ರನ್, ಶಾಂತನ್, ಮುರುಗನ್ (ನಳಿನಿ ಪತಿ), ರಾಬರ್ಟ್ ಪಯಸ್ ಹಾಗೂ ಜಯಕುಮಾರ್ ಬಿಡುಗಡೆ ಆಗಲಿರುವವರು. ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಹಾಗೂ ಬಿ.ವಿ.ನಾಗರತ್ನ ಅವರಿದ್ದ ಪೀಠ ಇವರ ಬಿಡುಗಡೆಗೆ ಸೂಚಿಸಿದೆ. ಅಪರಾಧಿಗಳ ಗಲ್ಲು ಶಿಕ್ಷೆಯನ್ನು ವಿಳಂಬದ ಕಾರಣ ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಗಿತ್ತು. ಈಗ ಎಲ್ಲರೂ ಶಿಕ್ಷೆ ಅನುಭವಿಸಿದ್ದಾರೆ. ತಮಿಳುನಾಡು ಸರ್ಕಾರ ಕೂಡ ಅವರ ಬಿಡುಗಡೆಗೆ ಶಿಫಾರಸು ಮಾಡಿದೆ. ಅವರು ಬೇರೆ ಪ್ರಕರಣದಲ್ಲಿ ಬೇಕಿಲ್ಲದಿದ್ದರೆ ಬಿಡುಗಡೆ ಮಾಡಬಹುದು’ ಎಂದು ನ್ಯಾಯಪೀಠ ತಿಳಿಸಿದೆ. ಸಂವಿಧಾನದ ಪರಿಚ್ಛೇದ 142ರಲ್ಲಿ ಇರುವ ವಿಶೇಷ ಅಧಿಕಾರವನ್ನು ಬಳಸಿಕೊಂಡು ಮೇ18ರಂದು ನ್ಯಾಯಾಲಯ ಪೆರಾರಿವಾಲನ್ ಎಂಬ ಮತ್ತೊಬ್ಬ ಅಪರಾಧಿಯನ್ನು ಬಿಡುಗಡೆ ಮಾಡಿತ್ತು. ಅದೇ ಆದೇಶ ಪ್ರಕರಣದ ಇತರೆ, ಅಪರಾಧಿಗಳಿಗೂ ಅನ್ವಯವಾಗುತ್ತದೆ’ ಎಂದು ತಿಳಿಸಿದೆ. ಸಂವಿಧಾನದ ಪರಿಚ್ಛೇದ 142ರಡಿ ಸಂಪೂರ್ಣ ನ್ಯಾಯ ಒದಗಿಸಲು ಯಾವುದೇ ತೀರ್ಪು ಅಥವಾ ಆದೇಶ ಹೊರಡಿಸಲು ಸುಪ್ರೀಂಕೋರ್ಟ್ಗೆ ಅಧಿಕಾರವಿದೆ. ‘ಶಿಕ್ಷೆ ಅನುಭವಿಸುವ ಹಂತದಲ್ಲಿ ಅವರ ನಡವಳಿಕೆ ತೃಪ್ತಿದಾಯಕವಾಗಿದೆ. ಅಲ್ಲದೆ ಅವರು ವಿವಿಧ ಅಧ್ಯಯನವನ್ನೂ ನಡೆಸಿದ್ದಾರೆ’ ಎಂದು ನ್ಯಾಯಪೀಠ ಹೇಳಿದೆ. ನ್ಯಾಯಾಲಯದ ಈ ಆದೇಶಕ್ಕೆ ಕಾಂಗ್ರೆಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಳಿನಿ ಹಾಗೂ ರವಿಚಂದ್ರನ್ ಅವರು ಪರೋಲ್ ಮೇಲಿದ್ದಾರೆ. ಉಳಿದ ನಾಲ್ವರು ಜೈಲಿನಲ್ಲಿದ್ದಾರೆ.
1991ರ ಸಾರ್ವತ್ರಿಕ ಲೋಕಸಭೆ ಚುನಾವಣೆಯ ಪ್ರಚಾರ ಉತ್ತುಂಗದಲ್ಲಿದ್ದಾಗ ಮೇ 21ರಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಶ್ರೀಪೆರಂಬದೂರಿನಲ್ಲಿ ಪ್ರಚಾರ ಸಭೆಯೊಂದರಲ್ಲಿ ಭಾಗವಹಿಸಿದ್ದರು. ಎಲ್ಟಿಟಿಇ ಲ್ಲಿ ಸಂಘಟನೆಯ ಧನು ಎಂಬ ಆತ್ಮಾಹುತಿ ಬಾಂಬರ್ ರ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದರಿಂದ ರಾಜೀವ್
ಗಾಂಧಿ ದೇಹ ಛಿದ್ರವಾಗಿತ್ತು. ಪ್ರಕರಣ ಸಂಬಂಧ 26 ಮಂದಿಯ ವಿರುದ್ಧ ಕಠಿಣ ಟಾಡಾ ಕಾಯ್ದೆಯಡಿ ವಿಚಾರಣೆ ಆರಂಭಿಸಲಾಗಿತ್ತು. ಟಾಡಾ ಕಾಯ್ದೆ ರದ್ದಾದ ಬಳಿಕ 1999ರಲ್ಲಿ 7 ಮಂದಿಯನ್ನು ಮಾತ್ರ ಅಪರಾಧಿ ಎಂದು ಪರಿಗಣಿಸಿದ ಸುಪ್ರೀಂಕೋರ್ಟ್, ಉಳಿದವರನ್ನು ಬಿಡುಗಡೆ ಮಾಡಲು ಆದೇಶಿಸಿತ್ತು. ಏಳು ಮಂದಿಯ ಪೈಕಿ ನಾಲ್ವರಿಗೆ ಗಲ್ಲು ಶಿಕ್ಷೆ, ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.