ಹೆಲ್ಮೆಟ್ ಕಳ್ಳರಿದ್ದಾರೆ ಎಚ್ಚರ…! ಎಚ್ಚರ…! ಎಚ್ಚರ…!
* ಬೈಕ್ ಕೂಡ ಸುರಕ್ಷಿತ ಅಲ್ಲ,..ಮಲೆನಾಡ ಹಲವೆಡೆ ಕಳ್ಳತನ
* ಪಾರ್ಕಿಂಗ್ ಗೆ ಹೆದರುವ ಪರಿಸ್ಥಿತಿ.. ಸಿಸಿಟಿವಿ ಇಲ್ಲ!
NAMMUR EXPRESS NEWS
ಮಲೆನಾಡು: ಇತ್ತೀಚೆಗೆ ಹೆಲ್ಮೆಟ್ ಕಳ್ಳತನದ ಪ್ರಕರಣಗಳು ಅಲ್ಲಲ್ಲಿ ಕೇಳಿ ಬರುತ್ತಿವೆ, ಇದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಇನ್ನು ಅನೇಕ ಪಟ್ಟಣಗಳಲ್ಲಿ ನಿಲ್ಲಿಸಿದ ಬೈಕ್ ಕೂಡ ಮಂಗ ಮಾಯವಾಗುತ್ತಿದೆ.
ಅನೇಕ ಪ್ರಕರಣದಲ್ಲಿ ಪಾರ್ಕಿಂಗ್ ಜಾಗದಲ್ಲಿ ಬೈಕ್ ಸುರಕ್ಷಿತವಾಗಿದ್ದರೂ, ಹೆಲ್ಮೆಟ್ ಮಾತ್ರ ಕಳ್ಳತನ ಆಗುತ್ತಿದೆ.
ಶಿವಮೊಗ್ಗ, ತೀರ್ಥಹಳ್ಳಿ, ಸಾಗರ, ಕೊಪ್ಪ, ಶೃಂಗೇರಿ ಸೇರಿ ಅನೇಕ ಪಟ್ಟಣಗಳಲ್ಲಿ ಈ ರೀತಿಯ ದೂರು ಕೇಳಿ ಬಂದಿದೆ.
ಬಸ್ ನಿಲ್ದಾಣ, ಮಾರುಕಟ್ಟೆ, ಸರ್ಕಾರಿ ಕಚೇರಿ ಹಾಗೂ ವ್ಯಾಪಾರ ಬೀದಿಗಳಲ್ಲಿ ಪಾರ್ಕ್ ಮಾಡಲಾದ ಬೈಕ್ಗಳಿಂದ ಕೆಲವೇ ನಿಮಿಷಗಳಲ್ಲಿ ಹೆಲ್ಮೆಟ್ಗಳು ಕಳ್ಳತನವಾಗುತ್ತಿರುವುದು ಕಂಡುಬಂದಿದೆ.
“ಪಾರ್ಕಿಂಗ್ನಲ್ಲಿ ಬೈಕ್ ಹಾಗು ಹೆಲ್ಮೆಟ್ ಕಾಪಾಡೋದು ಕಷ್ಟ!” ಎಂದು ಬೈಕ್ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹೆಲ್ಮೆಟ್ ಕಳ್ಳತನದ ಹಾವಳಿ ಹೆಚ್ಚುತ್ತಿರುವುದರಿಂದ, ಪ್ರತೀ ಬಾರಿ ಹೊಸ ಹೆಲ್ಮೆಟ್ ಖರೀದಿಸಲು ಜನ ಸಾವಿರಾರು ರೂ ಹಣ ವ್ಯಯ ಮಾಡಬೇಕಿದೆ. ಒಂದು ಕಡೆ ಸಾರಿಗೆ ಇಲಾಖೆ ಮತ್ತು ಪೊಲೀಸರು ಹೆಲ್ಮೆಟ್ ಧರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡುತ್ತಿದ್ದರೆ, ಮತ್ತೊಂದು ಕಡೆ ಹೆಲ್ಮೆಟ್ ಕಳ್ಳರು ಸಾರ್ವಜನಿಕರನ್ನು ಕಂಗೆಡಿಸುತ್ತಿದ್ದಾರೆ. ಪ್ರಮುಖ ಪಟ್ಟಣದ ಪ್ರಮುಖ ಪಾರ್ಕಿಂಗ್ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಕಡ್ಡಾಯಗೊಳಿಸಬೇಕು. ಪೊಲೀಸರು ಕಳ್ಳತನ ನಿಯಂತ್ರಣಕ್ಕೆ ತಕ್ಷಣದ ಕ್ರಮ ಕೈಗೊಳ್ಳಬೇಕು ಎಂಬ ಅಗ್ರಹ ಸಾರ್ವಜನಿಕರಲ್ಲಿ ಆಗ್ರಹ ಕೇಳಿ ಬರುತ್ತಿದೆ.
ಹೆಲ್ಮೆಟ್ ಕಳ್ಳರ ಹಾವಳಿ ಹೆಚ್ಚಾಗಿರುವ ಕಾರಣ, ಪಾರ್ಕಿಂಗ್ ಜಾಗಗಳು ಜನರಿಗೆ ಸುರಕ್ಷಿತ ಸ್ಥಳವಲ್ಲ ಎಂಬ ಭೀತಿ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.








