ಕಾಂತಾರ ಚಾಪ್ಟರ್ -1ರಲ್ಲಿ ಮಲೆನಾಡ ಕಲಾವಿದರ ಅಬ್ಬರ
* ಸಣ್ಣ ಕಲಾವಿದರಿಗೆ ಅವಕಾಶ ಕೊಟ್ಟು ಪ್ರೋತ್ಸಾಹಿಸಿದ ಕಾಂತಾರ ತಂಡ
* ಕಾಂತಾರ ಚಿತ್ರದಲ್ಲಿ ಶೃಂಗೇರಿಯ ಅನಿಲ್ ಕುಮಾರ್ ಹಾಗೂ ರಾಜೇಶ್
NAMMMUR EXPRESS NEWS
ಶೃಂಗೇರಿ: ಜಗತ್ತಿನಾದ್ಯಂತ ಅದ್ಬುತ ಪ್ರದರ್ಶನ ಕಾಣುತ್ತಾ 1000 ಕೋಟಿ ಗಳಿಕೆಯತ್ತ ಮುನ್ನುಗ್ಗುತ್ತಿರುವ ರಿಷಭ್ ಶೆಟ್ಟಿ ನಿರ್ದೇಶನದ ಹೊಂಬಾಳೆ ಫಿಲಂಸ್ ನಿರ್ಮಾಣದ ಕಾಂತಾರ ಚಾಪ್ಟರ್ -1 ಒಂದೊಳ್ಳೆ ಚಿತ್ರದೊಂದಿಗೆ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಲ್ಲದೇ ಕರ್ನಾಟಕ ರಾಜ್ಯ ಮತ್ತು ಸ್ಯಾಂಡಲ್ವುಡ್ಗೆ ಹೆಮ್ಮೆ ತಂದಿದೆ.
ಉತ್ತಮ ಕಥೆಯ ಮೂಲಕ ಜನರ ಮನಗೆದ್ದ ಚಿತ್ರ ತಂಡ ಚಿತ್ರದಲ್ಲಿ ಹಲವು ಸಣ್ಣ ಉದಯೋನ್ಮುಕ ಕಲಾವಿದರಿಗೆ ಅವಕಾಶ ನೀಡಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಕಾಂತಾರ ಚಾಪ್ಟರ್ -1 ರಲ್ಲಿ ಹಲವು ಸಣ್ಣ ಕಲಾವಿದರು ಚಿಕ್ಕಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲೂ ಮಲೆನಾಡಿ ಹಲವು ಕಲಾವಿದರು ಈ ಚಿತ್ರದಲ್ಲಿ ಕೆಲಸ ಮಾಡಿದ್ದು,ಆ ಸಂತಸವನ್ನು ಹಂಚಿಕೊಂಡಿದ್ದಾರೆ.
* ಬಾಂಗ್ರಾದ ವರ್ತಕನಾಗಿ ಶೃಂಗೇರಿಯ ಕೈಮನೆಯ ಅನಿಲ್ ಕುಮಾರ್
ಕಾಂತಾರ ಚಾಪ್ಟರ್ -1 ರಲ್ಲಿ ಬಾಂಗ್ರಾದ ವರ್ತಕನಾಗಿ ಕಾಣಿಸಿಕೊಂಡಿರುವ ಶೃಂಗೇರಿ ತಾಲೂಕಿನ ಕೈಮನೆಯ ಅನಿಲ್ ಕುಮಾರ್ ಚಿತ್ರ ತಂಡದಲ್ಲಿ ಭಾಗವಹಿಸಿದ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ತನ್ನ ವಿದ್ಯಾರ್ಥಿ ದಿನಗಳಿಂದಲೇ ಅಭಿನಯದಲ್ಲಿ ಆಸಕ್ತಿ ಹೊಂದಿದ್ದ ಅನಿಲ್ ಶಾಲೆಗಳಲ್ಲಿ ನಾಟಕಗಳಲ್ಲಿ ನಟಿಸಿ ಮುಂದೆ ಕೆಲವು ರಂಗಭೂಮಿ ಸಂಸ್ಥೆಯಲ್ಲಿ ನಟಿಸಿದ್ದಾರೆ. ತಮ್ಮ ಅಭಿನಯ ಪಯಣವನ್ನು ಮುಂದುವರೆಸಿ ಹಲವು ಶಾರ್ಟ್ ಫಿಲಂಗಳಲ್ಲಿ ನಟಿಸುತ್ತಾ ಚಲನಚಿತ್ರಗಳಲ್ಲಿ ನಟಿಸುವ ಅವಕಾಶ ಪಡೆದರು.ವೈಶಂಪಾಯನ ತೀರ,ಲವ್ಲೀ ಸಾರಾ,ಹ್ಯಾಕ್,ವ್ಯಾಘ್ರ,ಕರಿಗಂದ ಕರಿಯಜ್ಜ ಲಯನ್ ಸಫಾರಿ,ಬಲರಾಮನ ದಿನಗಳು ಸೇರಿದಂತೆ ಹಲವು ಚಿತ್ರದಲ್ಲಿ ನಟಿಸಿದ್ದು,ಕೆಲವು ಚಿತ್ರ ಇನ್ನು ಬಿಡುಗಡೆಯಾಗಬೇಕಿದೆ.
ನಮ್ಮಂತಹ ಸಣ್ಣ ಕಲಾವಿದರಿಗೆ ಅವಕಾಶ ಕೊಟ್ಟು ಪ್ರೋತ್ಸಾಹ ನೀಡುತ್ತಿರುವ ಕಾಂತಾರ ತಂಡಕ್ಕೆ ಅನಂತ ಧನ್ಯವಾದಗಳು ಮತ್ತು ಇದೊಂದು ಅವಿಸ್ಮರಣೀಯ ಅನುಭವ ಎಂದು ತಮ್ಮ ಸಂತಸ ಹಂಚಿಕೊಂಡಿದ್ದಾರೆ.
* ಫೈಟಿಂಗ್ ಸೀನ್ಗಳಲ್ಲಿ ಕಾಣಿಸಿಕೊಂಡ ಶೃಂಗೇರಿ ಮೂಲದ ರಾಜೇಶ್
ಚಿತ್ರದಲ್ಲಿನ ಹಲವು ಫೈಟ್ ದೃಶ್ಯಗಳಲ್ಲಿ ಶೃಂಗೇರಿ ಮೂಲದ ಕಲಾವಿದ ರಾಜೇಶ್ ಕಾಣಿಸಿಕೊಂಡಿದ್ದಾರೆ. ಕಾಂತಾರ ಚಿತ್ರ ತಂಡದ ಕೆಲಸದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ರಾಜೇಶ್ ಕನ್ನಡದ ಹಲವು ಸಿನಿಮಾಗಳಲ್ಲಿ ಫೈಟ್ ಸೀನ್ಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಬಾಲ್ಯದಿಂದಲೇ ಚಲನಚಿತ್ರ ಅಭಿನಯದಲ್ಲಿ ಆಸಕ್ತಿ ಹೊಂದಿದ್ದ ರಾಜೇಶ್ ಶೃಂಗೇರಿ ತಾಲೂಕಿನ ಗುಬ್ಬಗೋಡಿನವರು ಸದ್ಯ ಚಿಕ್ಕಮಗಳೂರಿನಲ್ಲಿ ನೆಲಸಿರುವ ಇವರು ಬೆಂಗಳೂರಿನ ಡ್ರ್ಯಾಗನ್ ಅಭಿ ಹಾಗೂ ಜೈ ಸುಬ್ರಮಣಿಯವರ ಸ್ಟಂಟ್ಗಳನ್ನು ನೋಡಿ ತಾನೂ ಅವರಂತೆಯೇ ಆಗಬೇಕೆಂದು ಆಸೆ ಇಟ್ಟು ಸಿಕ್ಕ ಅವಕಾಶಗಳನ್ನೆಲ್ಲಾ ಬಳಸಿಕೊಂಡು ಇಂದು ಕಾಂತಾರದಂತಹ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸದ್ಯ ಯುವರಾಜ್ ಕುಮಾರ್ ಅಭಿನಯದ ಎಕ್ಕಾ,ಸತೀಶ್ ನಿನಾಸಂ ಅಭಿನಯದ ಅಯೋಗ್ಯ -2,ಡಾಲಿ ಧನಂಜಯ್ ಅಭಿನಯದ ಅಣ್ಣಾ ಫ್ರಮ್ ಮೆಕ್ಸಿಕೋ,ವಿನೋದ್ ಪ್ರಭಾಕರ್ ಅಭಿನಯದ ರೋಲೆಕ್ಸ್ ಚಿತ್ರದಲ್ಲಿ ನಟಿಸಿದ್ದು ಇವು ಬಿಡುಗಡೆಯ ಹಂತದಲ್ಲಿದೆ. ಇದಕ್ಕಕ ಮೊದಲು ಜೀ ಕನ್ನಡ,ಉದಯ,ಕಲರ್ಸ್ ಕನ್ನಡ,ಸ್ಟಾರ್ ಸುವರ್ಣಗಳಂತಹ ಕನ್ನಡದ ಪ್ರಮುಖ ಚಾನೆಲ್ಗಳಲ್ಲಿ ಪ್ರಸಾರವಾಗುವ ಪ್ರಸಿದ್ಧ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದು, ಅನೇಕ ಕಿರುಚಿತ್ರಗಳಲ್ಲೂ ನಟಿಸಿದ್ದಾರೆ. ಇವರೂ ಕೂಡ ಕಾತಾಂರ ಚಿತ್ರದಲ್ಲಿ ಕೆಲಸ ಮಾಡಿದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು ಚಿತ್ರ ತಂಡಕ್ಕೆ ಹಾಗೂ ಸ್ಟಂಟ್ಗೆ ಸಹಕರಿಸಿದ ತನ್ನ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.








