ನ.1ರಿಂದ ಬ್ಯಾಂಕ್ ನಿಯಮ ಬದಲು: ಪ್ರತಿಯೊಬ್ಬರೂ ಓದಲೇಬೇಕು!
– ಬ್ಯಾಂಕ್ ಖಾತೆಗೆ 4 ಜನ ನಾಮನಿರ್ದೇಶನ ಕಡ್ಡಾಯ
– ಎಲ್ಲಾ ಬ್ಯಾಂಕ್ ಖಾತೆಗೂ ಏಕೀಕೃತ ನಿಯಮ ಜಾರಿ
NAMMUR EXPRESS NEWS
ನ.1ರಿಂದ ಬ್ಯಾಂಕ್ ನಿಯಮ ಬದಲು ಆಗಲಿದೆ. ಇದು ಪ್ರತಿಯೊಬ್ಬರೂ ಓದಲೇಬೇಕಾದ ಸುದ್ದಿ. ಇನ್ನು ಬ್ಯಾಂಕ್ ಖಾತೆಗೆ 4 ಜನ ನಾಮನಿರ್ದೇಶನ ಕಡ್ಡಾಯವಾಗಲಿದೆ.
ಈಗಿರುವ ಖಾತೆ ಸೇರಿ ಎಲ್ಲಾ ಬ್ಯಾಂಕ್ ಖಾತೆಗೂ ಏಕೀಕೃತ ನಿಯಮ ಜಾರಿಯಾಗಲಿದೆ.
ಈ ನಿಯಮ ಜಾರಿಗೆ ಕಾರಣ ಏನು?: ನಿಮ್ಮ ತಂದೆಯೋ, ತಾಯಿಯೋ, ತಾತನೋ, ಅಜ್ಜಿಯೋ ಕುಟುಂಬದವರಿಗೆ ತಿಳಿಸದೆ ಬ್ಯಾಂಕ್ ಖಾತೆ ಆರಂಭಿಸಿರುತ್ತಾರೆ. ಅದಕ್ಕೆ ನಾಮನಿರ್ದೇಶನ ಮಾಡಿರುವುದಿಲ್ಲ. ಕೊನೆಗೆ, ಅವರ ಕಾಲದ ನಂತರ ಆ ಬ್ಯಾಂಕ್ ಖಾತೆಯಲ್ಲಿರುವ ಹಣದ ಬಗ್ಗೆ ಕುಟುಂಬದವರಿಗೆ ಮಾಹಿತಿ ಇರುವುದಿಲ್ಲ. ಆ ಖಾತೆಯಲ್ಲಿನ ಹಣವನ್ನು ಯಾರಿಗೆ ನೀಡಬೇಕು ಎಂದು ಬ್ಯಾಂಕ್ನವರಿಗೂ ಸ್ಪಷ್ಟತೆ ಇರುವುದಿಲ್ಲ. ಹೌದು, 2025ರ ಜೂನ್ವರೆಗೆ ಲಭ್ಯವಿರುವ ಅಂಕಿ– ಅಂಶದ ಪ್ರಕಾರ ಹೀಗೆ, ವಾರಸುದಾರರಿಲ್ಲದ ಸುಮಾರು ₹67 ಸಾವಿರ ಕೋಟಿಯಷ್ಟು ಮೊತ್ತವು ಬ್ಯಾಂಕ್ಗಳಲ್ಲಿ ಇದೆ. ಈ ಪೈಕಿ ₹58,330.26 ಕೋಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳಲ್ಲಿ ಇದ್ದರೆ, ಇನ್ನುಳಿದ ಸುಮಾರು ₹8,773.72 ಕೋಟಿ ಖಾಸಗಿ ಬ್ಯಾಂಕ್ಗಳಲ್ಲಿದೆ. ಇಂತಹ ಸಮಸ್ಯೆಗಳನ್ನು ಸರಿಪಡಿಸುವುದೂ ಸೇರಿದಂತೆ, ಬ್ಯಾಂಕಿಂಗ್ ವಲಯದಲ್ಲಿ ಗ್ರಾಹಕ ಸ್ನೇಹಿ ನಿಯಮಗಳನ್ನು ಜಾರಿಗೆ ತರಲು ಹಣಕಾಸು ಸಚಿವಾಲಯ ತೀರ್ಮಾನಿಸಿದೆ.
ನವೆಂಬರ್ 1ರಿಂದ ಬ್ಯಾಂಕಿಂಗ್ ನಿಯಮಗಳಲ್ಲಿ ಈ ಬದಲಾವಣೆಗಳು ಜಾರಿಗೆ ಬರುತ್ತಿವೆ. ಗ್ರಾಹಕರ ಬ್ಯಾಂಕ್ ಖಾತೆಗಳು, ಲಾಕರ್ಗಳು ಹಾಗೂ ಠೇವಣಿ ಸೇವೆಗಳನ್ನು ನಿರ್ವಹಿಸುವ ವಿಧಾನದಲ್ಲಿ ಸುಧಾರಣೆಗಳನ್ನು ತರಲಾಗುತ್ತಿದೆ. ಹಣದ ಹಕ್ಕು ಹಸ್ತಾಂತರ ಪ್ರಕ್ರಿಯೆಯನ್ನು ಸರಳಗೊಳಿಸುವುದು, ವಾದ-ವಿವಾದಗಳನ್ನು ತಗ್ಗಿಸುವುದು ಮತ್ತು ದಾವೆ ಪರಿಹಾರವನ್ನು ವೇಗವಾಗಿ ಮತ್ತು ಪಾರದರ್ಶಕವಾಗಿ ಮಾಡುವುದು ಇದರ ಉದ್ದೇಶ. ಬ್ಯಾಂಕಿಂಗ್ ಕಾನೂನು (ತಿದ್ದುಪಡಿ) ಕಾಯ್ದೆ-2025ರ ಅಡಿಯಲ್ಲಿ ಹಾಗೂ ಹಣಕಾಸು ಸಚಿವಾಲಯವು ಅಧಿಸೂಚನೆಯನ್ನು ಪ್ರಕಟಿಸುವುದರೊಂದಿಗೆ, ಈ ಬದಲಾವಣೆಗಳು ಅನುಷ್ಠಾನಗೊಳ್ಳಲಿವೆ.
ಏನಿದು ಹೊಸ ನಿಯಮ?:
ಕೇಂದ್ರ ಸರ್ಕಾರ ಬ್ಯಾಂಕಿಂಗ್ ಕಾನೂನು (ತಿದ್ದುಪಡಿ) ಕಾಯ್ದೆ-2025ರ 10, 11, 12 ಮತ್ತು 13ನೇ ಸೆಕ್ಷನ್ನುಗಳನ್ನು ಜಾರಿಗೆ ತಂದಿದೆ. ಈ ಸೆಕ್ಷನ್ನುಗಳು ಎಲ್ಲಾ ಬ್ಯಾಂಕ್ಗಳಿಗೆ ಅನ್ವಯವಾಗುವಂತೆ ನಾಮನಿರ್ದೇಶನ, ದಾವೆ ನಿವಾರಣೆ, ಭದ್ರತಾ ಮೊತ್ತ ಸಂಗ್ರಹ ಮತ್ತು ಲಾಕರ್ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಹೊಸ ನಿಯಮಗಳನ್ನು ಒಳಗೊಂಡಿವೆ.
ಹೊಸ ನಿಯಮಗಳ ಮುಖ್ಯ ಅಂಶಗಳು
* ಪ್ರತಿ ಖಾತೆಗೆ ಗರಿಷ್ಠ ನಾಲ್ಕು ನಾಮನಿರ್ದೇಶನ: ಗ್ರಾಹಕರು ತಮ್ಮ ಉಳಿತಾಯ ಖಾತೆ, ನಿಶ್ಚಿತ ಠೇವಣಿ, ಲಾಕರ್ ಸೇರಿದಂತೆ ಎಲ್ಲಾ ಠೇವಣಿ ಸೇವೆಗಳಿಗೆ ನಾಲ್ಕು ಜನರನ್ನು ನಾಮನಿರ್ದೇಶನ (ನಾಮಿನಿ) ಮಾಡಬಹುದು. ನಾಮನಿರ್ದೇಶಿತರಿಗೆ ಹಂಚಿಕೆಯನ್ನು ಶೇಕಡಾವಾರು (ಉದಾ: ಪತ್ನಿಗೆ ಶೇ 50, ಮಗನಿಗೆ ಶೇ 30, ಸಹೋದರನಿಗೆ ಶೇ 20) ಆಧಾರದಲ್ಲಿ ಮಾಡಬಹುದು. ಅಥವಾ ಆನುವಂಶಿಕ ಕ್ರಮದಲ್ಲಿ ಕೂಡ ನೀಡಬಹುದು. ಅಂದರೆ ಮೊದಲ ನಾಮನಿರ್ದೇಶಿತ ಲಭ್ಯವಿಲ್ಲದಿದ್ದರೆ ಮುಂದಿನವರಿಗೆ ಹಕ್ಕು ಬರುತ್ತದೆ. ಈ ಬದಲಾವಣೆ ವಿವಾದಗಳನ್ನು ತಪ್ಪಿಸಲು ಮತ್ತು ಆಸ್ತಿ ವರ್ಗಾವಣೆ ವೇಗವಾಗಿ ನಡೆಯಲು ಸಹಕಾರಿಯಾಗುತ್ತದೆ.
* ನಾಮನಿರ್ದೇಶಿತರ ಸಂಪರ್ಕ ವಿವರ ಕಡ್ಡಾಯ: ಪ್ರತಿ ನಾಮನಿರ್ದೇಶಿತರ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐ.ಡಿ ಈಗ ಬ್ಯಾಂಕ್ ದಾಖಲೆಗಳಲ್ಲಿ ಕಡ್ಡಾಯವಾಗಲಿದೆ. ಇದು ಖಾತೆದಾರರ ನಿಧನದ ನಂತರ ವೇಗವಾದ ಪರಿಶೀಲನೆ ಮತ್ತು ಸಂಪರ್ಕಕ್ಕೆ ನೆರವಾಗುತ್ತದೆ.
* ಎಲ್ಲಾ ಬ್ಯಾಂಕ್ಗಳಿಗೆ ಏಕೀಕೃತ ನಿಯಮ: ಈ ನಿಯಮಗಳು ಸರ್ಕಾರಿ, ಖಾಸಗಿ, ಸಹಕಾರ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳಿಗೂ ಅನ್ವಯಿಸುತ್ತವೆ. ಆರ್ಬಿಐ ಈಗ ಎಲ್ಲಾ ಬ್ಯಾಂಕ್ಗಳಲ್ಲಿ ಏಕರೂಪದ ದಾವೆ ಪ್ರಕ್ರಿಯೆಯನ್ನು ಜಾರಿಗೆ ತರುತ್ತಿದೆ.
* ಸರಳೀಕೃತ ದಾವೆ ಪರಿಹಾರ ಪ್ರಕ್ರಿಯೆ: ನಾಮನಿರ್ದೇಶಿತರು ಅಥವಾ ಕಾನೂನಾತ್ಮಕ ವಾರಸುದಾರರು ನಿಧನದ ನಂತರ ಖಾತೆಯ ಮೊತ್ತ ಅಥವಾ ಲಾಕರ್ನ ವಸ್ತುಗಳನ್ನು ವೇಗವಾಗಿ ಪಡೆಯಬಹುದು. ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲೇ ಬ್ಯಾಂಕಿಂಗ್ ಕಂಪನಿಗಳ (ನಾಮನಿರ್ದೇಶನ) ನಿಯಮಗಳು-2025ರ ಅಡಿಯಲ್ಲಿ ಪ್ರಕ್ರಿಯೆಯ ಮಾದರಿ ಪ್ರಕಟಿಸಲಿದೆ. ಹೊಸ ನಿಯಮವು ಠೇವಣಿ, ಲಾಕರ್ಗಳಿಗೆ ಅನ್ವಯವಾಗಲಿದ್ದು, ಎಲ್ಲದಕ್ಕೂ ಏಕರೂಪದ ಪ್ರಕ್ರಿಯೆ ಜಾರಿಗೆ ಬರಲಿದೆ.
ಏಕೆ ಈ ಬದಲಾವಣೆ ಮುಖ್ಯ?: ಈ ಬದಲಾವಣೆಯಿಂದ ಲಕ್ಷಾಂತರ ಭಾರತೀಯ ಕುಟುಂಬಗಳಿಗೆ ಹಣಕಾಸಿನ ಭದ್ರತೆ ಮತ್ತು ಮನಃಶಾಂತಿ ದೊರೆಯಲಿದೆ. ನಿಧನದ ನಂತರ ಬ್ಯಾಂಕ್ನಲ್ಲಿರುವ ಠೇವಣಿಗಳು ಕಾನೂನು ಪ್ರಕ್ರಿಯೆಯಲ್ಲಿ ಸಿಕ್ಕಿಹಾಕಿಕೊಳ್ಳುವ ಅಪಾಯ ಕಡಿಮೆಯಾಗುತ್ತದೆ. ಸಣ್ಣದಾಗಿ ಕಾಣುವ ಈ ಬದಲಾವಣೆ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪಾರದರ್ಶಕತೆ, ವಿಶ್ವಾಸ ಮತ್ತು ಸುಗಮ ಸೇವೆಗೆ ದೊಡ್ಡ ಹೆಜ್ಜೆಯಾಗಿದೆ.







