ಟಾಪ್ 5 ನ್ಯೂಸ್ ಕರ್ನಾಟಕ
– ಚಾಮರಾಜನಗರ : ಹೃದಯಾಘಾತದಿಂದ 3ನೇ ತರಗತಿ ವಿದ್ಯಾರ್ಥಿನಿ ಸಾವು
– ಬೆಂಗಳೂರು : ಎರಡು ಅಂತಸ್ತಿನ ಕಟ್ಟಡದಲ್ಲಿ ಸಿಲಿಂಡರ್ ಸ್ಫೋಟ
– ಬೆಳಗಾವಿ : ಖಾಸಗಿ ಫೈನಾನ್ಸ್ ಕಂಪನಿಯವರು ಅಮಾನವೀಯವಾಗಿ ವರ್ತನೆ
– ಬೆಂಗಳೂರು : ಇಬ್ಬರ ಮಕ್ಕಳ ಕೊಂದು ಸಾವಿಗೆ ಶರಣಾದ ದಂಪತಿ
– ಬಳ್ಳಾರಿ: ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾದ ಯುವಕ
NAMMUR EXPRESS NEWS
ಚಾಮರಾಜನಗರ: ಚಾಮರಾಜನಗರದಲ್ಲಿ ದಾರುಣ ಘಟನೆ ನಡೆದಿದ್ದು, ಏಕಾಏಕಿ ಕುಸಿದುಬಿದ್ದು ಮೂರನೇ ತರಗತಿ ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ನಡೆದಿದೆ. ಚಾಮರಾಜನಗರದ ಸೇಂಟ್ ಫ್ರಾನ್ಸಿಸ್ ಶಾಲೆಯಲ್ಲಿ ಶಿಕ್ಷಕಿಗೆ ನೋಟ್ಸ್ ತೋರಿಸುವಾಗ ಬದನಗುಪ್ಪೆ ಗ್ರಾಮದ ನಿವಾಸಿ ಲಿಂಗರಾಜು, ಶ್ರುತಿ ದಂಪತಿಯ ಏಕೈಕ ಪುತ್ರಿ ತೇಜಸ್ವಿನಿ ಏಕಾಏಕಿ ಕುಸಿದುಬಿದ್ದಿದ್ದಳು. ಕೂಡಲೇ ತೇಜಸ್ವಿನಿಯನ್ನು ಶಾಲಾ ಸಿಬ್ಬಂದಿ ಜೆಎಸ್ಎಸ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ದುರದೃಷ್ಟವಶಾತ್ ಅದಾಗಲೇ ತೇಜಸ್ವಿನಿ ಮೃತಪಟ್ಟಿದ್ದಳು. ಇನ್ನು ತೇಜಸ್ವಿನಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೆ ವಯಸ್ಕರು ಬಲಿಯಾಗುತ್ತಿದ್ದರು. ಆದರೆ ಇದೀಗ ಹೃದಯಾಘಾತಕ್ಕೆ ಚಿಕ್ಕ ಮಕ್ಕಳು ಬಲಿಯಾಗುತ್ತಿರುವುದು ಆತಂಕದ ವಿಷಯವಾಗಿದೆ. ಇದ್ದ ಒಬ್ಬಳೆ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
– ಬೆಂಗಳೂರು : ಎರಡು ಅಂತಸ್ತಿನ ಕಟ್ಟಡದಲ್ಲಿ ಸಿಲಿಂಡರ್ ಸ್ಫೋಟ
ಬೆಂಗಳೂರು: ಆನೇಕಲ್ ತಾಲೂಕಿನ ಕಿತ್ತಗಾನಹಳ್ಳಿಯಲ್ಲಿ ಎರಡು ಅಂತಸ್ತಿನ ಕಟ್ಟಡದಲ್ಲಿ ಸಿಲಿಂಡರ್ ಸ್ಫೋಟವಾಗಿದೆ. ಇಬ್ಬರು ಯುವಕರು ಗಾಯಗೊಂಡಿರುವ ಘಟನೆ ನಡೆದಿದೆ. ಕೇರಳ ಮೂಲದ ಸುನೀಲ್ ಜೋಸೆಫ್, ವಿಷ್ಣು ಜಯರಾಜ್ ಎಂಬವರು ಗಾಯಗೊಂಡಿದ್ದು, ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಫೋಟದ ತೀವ್ರತೆಗೆ ಮನೆ ಗೋಡೆಗಳು, ಕಿಟಕಿ, ಬಾಗಿಲು ಛಿದ್ರವಾಗಿವೆ. ಅಕ್ಕಪಕ್ಕದ ನಾಲ್ಕೈದು ಮನೆಗಳು, ಕೆಲವು ವಾಹನಗಳಿಗೂ ಹಾನಿಯಾಗಿದೆ. ಸ್ಫೋಟಕ್ಕೆ ಕಾರಣ ಏನು ಅನ್ನೋದು ಇನ್ನು ತಿಳಿದು ಬಂದಿಲ್ಲ. ಸೂರ್ಯಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
– ಬೆಳಗಾವಿ : ಖಾಸಗಿ ಫೈನಾನ್ಸ್ ಕಂಪನಿಯವರು ಅಮಾನವೀಯವಾಗಿ ವರ್ತನೆ
ಬೆಳಗಾವಿ : ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರು ಗ್ರಾಮದಲ್ಲಿ ಖಾಸಗಿ ಫೈನಾನ್ಸ್ ಸಿಬ್ಬಂದಿ ಅಮಾನವೀಯವಾಗಿ ವರ್ತಿಸಿದ್ದಾರೆ. ಮೂರು ಮಕ್ಕಳ ಸಮೇತ 7 ಜನರನ್ನು ಮನೆಯಿಂದ ಹೊರಹಾಕಿದ್ದು, ಚಳಿಯಲ್ಲಿ ಹಸಿಗೂಸಿನ ಜೊತೆ ಬಾಣಂತಿ ಹೊರ ಮಲಗಿದ್ದಾರೆ. ಸಾಲ ಮರುಪಾವತಿ ಮಾಡಿಲ್ಲವೆಂದು ಮನೆ ಸೀಜ್ ಮಾಡಲಾಗಿದೆ. ಸೈದಪ್ಪ ಅವರು ಚಿಕ್ಕೋಡಿಯ ಇಕ್ವಿಟಾಸ್ ಫೈನಾನ್ಸ್ ನಲ್ಲಿ ಸಾಲ ಪಡೆದುಕೊಂಡಿದ್ದರು. ಅವರು ಎರಡೂವರೆ ವರ್ಷದ ಹಿಂದೆ ಹೈನುಗಾರಿಕೆಗಾಗಿ 5 ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ಪಡೆದು ಖರೀದಿಸಿದ್ದ ಎರಡು ಎಮ್ಮೆ ಸಾವು ಕಂಡಿದ್ದವು. ಹೀಗಿದ್ದರೂ ಮಾಸಿಕ 14397 ರೂ.ನಂತೆ 27 ಕಂತುಗಳನ್ನು ಪಾವತಿಸಿದ್ದರು. ಮಗಳ ಹೆರಿಗೆಗೆ 85,000 ರೂ. ಖರ್ಚು ಮಾಡಿದ ಹಿನ್ನೆಲೆಯಲ್ಲಿ ಮೂರು ತಿಂಗಳಿನಿಂದ ರೈತ ಸೈದಪ್ಪ ಕಂತು ಕಟ್ಟಿರಲಿಲ್ಲ. ಆದರೆ ಇದುವರೆಗೂ ಕಟ್ಟಿದ್ದ ಹಣ ಕಂಪನಿಗೆ ಮುಟ್ಟಿಲ್ಲ. 5 ಲಕ್ಷ ರೂ. ಸಾಲ ಕಟ್ಟುವಂತೆ ವಕೀಲರ ಮೂಲಕ ನೋಟಿಸ್ ನೀಡಿ ಮನೆ ಸೀಜ್ ಮಾಡಲಾಗಿದೆ. ಮೂಡಲಗಿ ಠಾಣೆ ಪೊಲೀಸರ ಮೂಲಕ ಮನೆ ಸೀಜ್ ಮಾಡಿದ್ದು, ಹಣ ಕಟ್ಟಲು ಸಮಯ ಕೇಳಿದರೂ ಅಮಾನವೀಯವಾಗಿ ವರ್ತಿಸಲಾಗಿದೆ. ಖಾಸಗಿ ಫೈನಾನ್ಸ್ ಕಂಪನಿಯವರು ಅಮಾನವೀಯವಾಗಿ ವರ್ತಿಸಿ ಹಸುಗೂಸು ಸೇರಿ ಬಾಣಂತಿ ಮಕ್ಕಳು, ಮನೆಯವರನ್ನು ಫೈನಾನ್ಸ್ ಸಿಬ್ಬಂದಿ ಮತ್ತು ಪೊಲೀಸರು ಹೊರಗೆ ಹಾಕಿದ್ದಾರೆ.
– ಬೆಂಗಳೂರು : ಇಬ್ಬರ ಮಕ್ಕಳ ಕೊಂದು ಸಾವಿಗೆ ಶರಣಾದ ದಂಪತಿ
ಬೆಂಗಳೂರು : ಇಬ್ಬರ ಮಕ್ಕಳ ಕೊಂದು ದಂಪತಿಗಳು ನೇಣಿಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ. ಪತಿ ಅನೂಪ್ ಕುಮಾರ್, ಪತ್ನಿ ರಾಖಿ ಆತ್ಮಹತ್ಯೆ ಮಾಡಿಕೊಂಡವರು. ಸ್ಥಳಕ್ಕೆ ಸದಾಶಿವನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಆರ್ಥಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಮೃತರು ಉತ್ತರ ಪ್ರದೇಶದ ಮೂಲದವರಾಗಿದ್ದು, ಸದಾಶಿವನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
– ಬಳ್ಳಾರಿ: ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾದ ಯುವಕ
ಬಳ್ಳಾರಿ: ಪ್ರೀತಿಸಿದ ಯುವತಿ ಹಾಗೂ ಆಕೆಯ ಮನೆಯವರ ಮೇಲೆ ಹಲ್ಲೆ ನಡೆಸಿದ ಭಗ್ನ ಪ್ರೇಮಿಯೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ಚರ್ಚ್ ಶಾಲೆ ರಸ್ತೆ ಬಳಿ ನಡೆದಿದೆ. ಪಿ.ಕೆ.ಹಳ್ಳಿ ಮೂಲದ ನವೀನ್ ಕುಮಾರ್ ಆತ್ಮಹತ್ಯೆಗೆ ಶರಣಾಗಿರುವ ಯುವಕ. ನವೀನ್ ಕುಮಾರ್ ತಾನು ಪ್ರೀತಿಸುತ್ತಿದ್ದ ಯುವತಿ ಹಾಗೂ ಆಕೆಯ ಕುಟುಂಬದವರ ಮೇಲೆ ಹಲ್ಲೆ ನಡೆಸಿದ್ದಾನೆ. ಯುವತಿಯ ಅಣ್ಣ ಗಂಭೀರವಾಗಿ ಗಾಯಗೊಂಡಿದ್ದರೆ, ಯುವತಿ ಹಾಗೂ ಆಕೆಯ ತಾಯಿ ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತೋರಣಗಲ್ ಜಿಂದಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಬಳಿಕ ಯುವಕ ನವೀನ್ ಕುಮಾರ್ ಯಶವಂತನಗರ ಬಳಿ ತನ್ನ ಕಾರನ್ನು ಬಿಟ್ಟು ಹೋಗಿದ್ದಾನೆ. ಹಲ್ಲೆ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಯಶವಂತನಗರ ಬಳಿಯ ರೈಲ್ವೆ ಹಳಿ ಮೇಲೆ ಯುವಕನ ಶವ ಪತ್ತೆಯಾಗಿದೆ. ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.