ಟಾಪ್ ನ್ಯೂಸ್ ಕರ್ನಾಟಕ
ಹೆಂಡತಿಯಿಂದ ಮಾನಸಿಕ ಕಿರುಕುಳ
– ಕೋರ್ಟ್ ಮೆಟ್ಟಿಲೇರಿದ ದೊಡ್ಮನೆ ಕುಡಿ
– ಮೈಸೂರು: ಅನ್ನದಾನೇಶ್ವರ ಮಠದ ಹಿರಿಯ ಸ್ವಾಮೀಜಿಯ ಬರ್ಬರ ಹತ್ಯೆ!
ಬೆಂಗಳೂರು : ತುರ್ತು ಚಿಕಿತ್ಸೆಗೆ ತೆರಳುತ್ತಿದ್ದ ಆಂಬುಲೆನ್ಸ್ ತಡೆದು ಚಾಲಕನಿಗೆ ಹಲ್ಲೆ
– ಮೂವರು ಕಿಡಿಗೇಡಿಗಳ ಬಂಧನ!
– ಚಿಕ್ಕಮಗಳೂರು : ಫಾಲ್ಸ್ನಲ್ಲಿ ಕಾಲು ಜಾರಿ ಬಿದ್ದ ಪ್ರವಾಸಿಗ ಸಾವು
NAMMUR EXPRESS NEWS
ದೊಡ್ಮನೆಯಲ್ಲಿ ಡಿವೋರ್ಸ್ ಬಿರುಗಾಳಿ ಎದ್ದಿದೆ. ರಾಘವೇಂದ್ರ ರಾಜ್ಕುಮಾರ್ ಪುತ್ರ ಯುವ ರಾಜ್ಕುಮಾರ್ ಅವರು ಪತ್ನಿ ವಿರುದ್ಧ ಮಾನಸಿಕ ಕಿರುಕುಳ ಆಗ್ತಿದೆ ಎಂದು ಕೋರ್ಟ್ ಮೆಟ್ಟಿಲೇರಿದ್ದಾರೆ.
ಹೆಂಡತಿಯಿಂದ ಅಗೌರವ ಮತ್ತು ಮಾನಸಿಕವಾಗಿ ಕ್ರೌರ್ಯ ಎಂದು ಆರೋಪಿಸಿ ಶ್ರೀದೇವಿ ವಿರುದ್ಧ ಫ್ಯಾಮಿಲಿ ಕೋರ್ಟ್ನಲ್ಲಿ ಯುವ ಅರ್ಜಿ ಸಲ್ಲಿಸಿದ್ದಾರೆ. ಪ್ರೀತಿಸಿ ಮದುವೆಯಾಗಿದ್ದ ಯುವ ಮತ್ತು ಶ್ರೀದೇವಿ ಜೋಡಿ ದಾಂಪತ್ಯಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ. ಜೂನ್ 6ರಂದು ಫ್ಯಾಮಿಲಿ ಕೋರ್ಟ್ಗೆ ಅರ್ಜಿ ಸಲ್ಲಿಸಿರುವ ಯುವರಾಜ್ಕುಮಾರ್, ಜುಲೈ 4ರಂದು ವಿಚಾರಣೆಗೆ ನಿಗದಿಯಾಗಿದೆ.
ಕಳೆದ 6 ತಿಂಗಳಿಂದ ಇಬ್ಬರ ಡಿವೋರ್ಸ್ ಸುದ್ದಿ ಹರಿದಾಡುತ್ತಿತ್ತು. ಕೆಲವು ತಿಂಗಳುಗಳಿಂದ ಜೊತೆಯಾಗಿ ಕೂಡ ವಾಸಿಸುತ್ತಿಲ್ಲ. `ಯುವ’ ಸಿನಿಮಾದ ಪ್ರಚಾರ ಕಾರ್ಯದಲ್ಲಿಯೂ ಕೂಡ ಶ್ರೀದೇವಿ ಭಾಗಿಯಾಗಿಲ್ಲ. ಸದ್ಯ ಯುವ ಪತ್ನಿ ವಿದೇಶದಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ. ಮೈಸೂರು ಮೂಲದ ಶ್ರೀದೇವಿ ಅವರನ್ನು ಯುವ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಗುರುಹಿರಿಯರ ಒಪ್ಪಿಗೆಯ ಮೇರೆಗೆ 2018ರಲ್ಲಿ ಯುವರಾಜ್ಕುಮಾರ್ ನಿಶ್ಚಿತಾರ್ಥ ನಡೆಯಿತು. 2019ರ ಮೇ 26ರಂದು ಅದ್ಧೂರಿಯಾಗಿ ಇಬ್ಬರ ಮದುವೆ ಜರುಗಿತ್ತು. ಈಗ ಇಬ್ಬರೂ ಡಿವೋರ್ಸ್ಗೆ ಮುಂದಾಗಿದ್ದಾರೆ.
– ಮೈಸೂರು: ಅನ್ನದಾನೇಶ್ವರ ಮಠದ ಹಿರಿಯ ಸ್ವಾಮೀಜಿಯ ಬರ್ಬರ ಹತ್ಯೆ!
ಮೈಸೂರು: ಮೈಸೂರಿನಲ್ಲಿ ಅನ್ನದಾನೇಶ್ವರ ಹಿರಿಯ ಮಠದ ಹಿರಿಯ ಸ್ವಾಮೀಜಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಕೊಲೆಯಾದವರನ್ನು ಮೈಸೂರಿನ ಸಿದ್ದಾರ್ಥನಗರದಲ್ಲಿರುವ ಅನ್ನದಾನೇಶ್ವರ ಮಠದ ಶಿವಾನಂದ (90) ಸ್ವಾಮೀಜಿ ಎಂದು ಗುರುತಿಸಲಾಗಿದೆ. ರವಿ (60) ಎಂಬಾತ ಈ ಕೃತ್ಯ ಎಸಗಿದ್ದು, ಮಲಗಿದ್ದಲ್ಲೇ ಸ್ವಾಮೀಜಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಆಸ್ತಿ ವಿಚಾರಕ್ಕೆ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನಜರ್ಬಾದ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು : ತುರ್ತು ಚಿಕಿತ್ಸೆಗೆ ತೆರಳುತ್ತಿದ್ದ ಆಂಬುಲೆನ್ಸ್ ತಡೆದು ಚಾಲಕನಿಗೆ ಹಲ್ಲೆ
– ಮೂವರು ಕಿಡಿಗೇಡಿಗಳ ಬಂಧನ!
ಬೆಂಗಳೂರು: ತುರ್ತು ಚಿಕಿತ್ಸೆಗೆ ಮಗುವೊಂದನ್ನು ಕರೆದೊಯ್ಯುತ್ತಿದ್ದ ಖಾಸಗಿ ಆಂಬುಲೆನ್ಸ್ನ್ನು ಕಿಡಿಗೇಡಿಗಳು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ಮಾಡಿದ ಘಟನೆ ನೆಲಮಂಗಲ ಟೋಲ್ ಬಳಿ ನಡೆದಿದೆ. ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಯಲಚೇನಹಳ್ಳಿ ಮೂಲದ ಯುವರಾಜ್ ಸಿಂಗ್, ಮಂಜುನಾಥ್ ಮತ್ತು ಲತೀಶ್ ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ ಕುಡಿದ ನಶೆಯಲ್ಲಿದ್ದ ನಾಲ್ವರು ದುಷ್ಕರ್ಮಿಗಳು ಕಾರಿನಲ್ಲಿ ಆಂಬುಲೆನ್ಸ್ನ್ನು 5 ಕಿ.ಮೀ ಚೇಸ್ ಮಾಡಿ ಅಡ್ಡಗಟ್ಟಿದ್ದಾರೆ. ಬಳಿಕ ನಾಲ್ವರು ಸೇರಿ ಚಾಲಕನನ್ನು ಹೊರಗೆಳೆದು, ಅತಿ ವೇಗವಾಗಿ ಚಾಲನೆ ಮಾಡುತ್ತಿರುವುದಾಗಿ ಗಲಾಟೆ ಆರಂಭಿಸಿದ್ದಾರೆ. ಈ ವೇಳೆ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆಂಬುಲೆನ್ಸ್ ಚಾಲಕ ಜಾನ್ ಆರೋಪಿಸಿದ್ದಾರೆ. ತುಮಕೂರಿನ ಖಾಸಗಿ ಆಸ್ಪತ್ರೆಯಿಂದ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ಖಾಸಗಿ ಆಂಬುಲೆನ್ಸ್ ಬರುತ್ತಿತ್ತು. ಆಂಬುಲೆನ್ಸ್ನಲ್ಲಿ ಐದು ತಿಂಗಳ ಮಗುವಿಗೆ ತುರ್ತು ಚಿಕಿತ್ಸೆಗೆ ಆಕ್ಸಿಜನ್ ಮೂಲಕ ಕರೆ ತರಲಾಗುತ್ತಿತ್ತು. ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ಮಗುವಿನ ಪೋಷಕರು ಕೈ ಮುಗಿದರೂ ಕಾರಿನಲ್ಲಿದ್ದ ಯುವಕರು, ಕೀ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಲಾಟೆ ತಿಳಿಗೊಳಿಸಿ ಆಂಬುಲೆನ್ಸ್ನ್ನು ಆಸ್ಪತ್ರೆಗೆ ಕಳಿಸಿದ್ದರು.
ಈ ವಿಚಾರವಾಗಿ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಬಳಿ ಖಾಸಗಿ ಆಂಬುಲೆನ್ಸ್ ಚಾಲಕರು ಪ್ರತಿಭಟನೆ ನಡೆಸಿದ್ದಾರೆ. ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ
– ಚಿಕ್ಕಮಗಳೂರು : ಫಾಲ್ಸ್ನಲ್ಲಿ ಕಾಲು ಜಾರಿ ಬಿದ್ದ ಪ್ರವಾಸಿಗ ಸಾವು
ಚಿಕ್ಕಮಗಳೂರು: ಸೆಲ್ಫಿ ಕ್ರೇಜ್ಗೆ ಯುವಕನೊಬ್ಬ ಬಲಿಯಾಗಿದ್ದಾನೆ. ಫಾಲ್ಸ್ನಲ್ಲಿ ಕಾಲು ಜಾರಿ ಬಿದ್ದು ಪ್ರವಾಸಿಗ ಮೃತಪಟ್ಟಿದ್ದಾನೆ. ಹೈದರಾಬಾದ್ ಮೂಲದ ಶ್ರವಣ್ (25) ಮೃತ ದುರ್ದೈವಿ. ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ಹೆಬ್ಬೆ ಫಾಲ್ಸ್ನಲ್ಲಿ ಘಟನೆ ನಡೆದಿದೆ. ಶ್ರವಣ್ ತನ್ನ ಸ್ನೇಹಿತನೊಂದಿಗೆ ಹೈದರಾಬಾದ್ನಿಂದ ಚಿಕ್ಕಮಗಳೂರು ಪ್ರವಾಸ ಕೈಗೊಂಡಿದ್ದ. ಸೋಮವಾರ ಬೆಳಗ್ಗೆ ಬೈಕ್ನಲ್ಲಿ ಹೆಬ್ಬೆ ಫಾಲ್ಸ್ಗೆ ತೆರಳಿದ್ದ. ಹೆಬ್ಬೆ ಫಾಲ್ಸ್ನಲ್ಲಿ ಸೆಲ್ಫಿ ತೆಗೆಯುವ ವೇಳೆ ಕಾಲು ಜಾರಿ ಬಿದ್ದಿದ್ದಾನೆ. ಬಿದ್ದ ರಭಸಕ್ಕೆ ತಲೆಗೆ ತೀವ್ರ ಪೆಟ್ಟಾಗಿದ್ದು, ಕೂಡಲೇ ಆಸ್ಪತ್ರೆಗೆ ಕರೆತರಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.