ಅಡಿಕೆ ಸುಲಿಯುವ ಯಂತ್ರಕ್ಕೆ ದಂಡ ಸರಿಯೇ..?
– ಬಡ ರೈತರಿಗೂ 50-60 ಸಾವಿರ ದಂಡ ಹಾಕುತ್ತಿರುವ ಮೆಸ್ಕಾಂ
– ಕೃಷಿ ಚಟುವಟಿಕೆಗೆ ಸರ್ಕಾರದಿಂದಲೇ ಕಿರಿಕಿರಿ
– ಕಾಂಗ್ರೆಸ್ ಕಿಸಾನ್ ಸೆಲ್ ಅಧ್ಯಕ್ಷ ಧರಣೇಶ್ ಆಕ್ರೋಶ
NAMMUR EXPRESS NEWS
ತೀರ್ಥಹಳ್ಳಿ: ಅತೀವೃಷ್ಟಿ, ಅನಾವೃಷ್ಟಿ, ಪ್ರಾಣಿಗಳ ಹಾವಳಿ, ಅಡಿಕೆ ರೋಗಗಳಿಂದ ಮಲೆನಾಡಿನ ಅಡಿಕೆ ಬೆಳೆಗಾರ ರೈತರು ತತ್ತರಿಸಿ ಹೋಗಿದ್ದಾರೆ. ಇಂತಹ ದುಸ್ಥಿತಿಯಲ್ಲಿ ಗಾಯದ ಮೇಲೆ ಬರೆ ಎಳೆಯುವ ರೀತಿಯಲ್ಲಿ ಮೆಸ್ಕಾಂ ಅಡಿಕೆ ಸುಲಿಯುವ ಯಂತ್ರ ಬಳಸುವ ರೈತರ ಮೇಲೆ ಕೇಸು ಹಾಕಿ 50-60 ಸಾವಿರದ ದುಬಾರಿ ದಂಡ ವಿಧಿಸುತ್ತಿದೆ. ಇಲಾಖೆಯ ಈ ಕ್ರಮದ ವಿರುದ್ಧ ಅಡಿಕೆ ಬೆಳೆಗಾರ ರೈತ ಸಮೂಹ ಇದೀಗ ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ. ಮಲೆನಾಡಿನ ಜೀವನಾಡಿಯಾಗಿರುವ ಅಡಿಕೆ ಬೆಳೆ ಬೆಳೆಯುವ ರೈತರನ್ನು ಉಳಿಸಲು ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಮಂತ್ರಿಗಳು ರೈತರ ನೆರವಿಗೆ ಧಾವಿಸಬೇಕೆಂದು ಕಾಂಗ್ರೆಸ್ ಕಿಸಾನ್ ಸೆಲ್ ಅಧ್ಯಕ್ಷ ಧರಣೇಶ್ ಒತ್ತಾಯಿಸಿದ್ದಾರೆ.
ಅಡಿಕೆಗೆ ರೋಗ, ಕಾರ್ಮಿಕರ ದುಬಾರಿ ವೇತನದಿಂದ ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ವರ್ಷದಲ್ಲಿ ಕೇವಲ 1ರಿಂದ 2 ತಿಂಗಳು ಅಡಿಕೆ ಸುಲಿತ ನಡೆಯುತ್ತದೆ. ಕಾರ್ಮಿಕರ ಸಮಸ್ಯೆಯಿಂದ ರೈತರಿಗೆ ಅಡಿಕೆ ಸುಲಿಯುವ ಯಂತ್ರದ ಉಪಯೋಗ ಅನಿವಾರ್ಯವಾಗಿದೆ. ಸರ್ಕಾರ ರೈತರ ಅಡಿಕೆ ಯಂತ್ರಗಳಿಗೆ ರಿಯಾಯಿತಿ ವಿದ್ಯುತ್ ಒದಗಿಸಬೇಕು. ಇಲ್ಲವೇ ತಾತ್ಕಾಲಿಕ ಕಮರ್ಷಿಯಲ್ ಸಂಪರ್ಕಕ್ಕೆ ಅವಕಾಶ ಕಲ್ಪಿಸಬೇಕು. ಆದರೆ ಮೆಸ್ಕಾಂ ಖಾಯಂ ಕಮರ್ಷಿಯಲ್ ಸಂಪರ್ಕ ಪಡೆಯುವಂತೆ ರೈತರ ಮೇಲೆ ಒತ್ತಡ ತರುತ್ತಿದೆ. ಒಂದು-ಎರಡು ತಿಂಗಳು ಮಾತ್ರ ರೈತರ ಅಡಿಕೆ ಯಂತ್ರಕ್ಕೆ ಕರೆಂಟ್ ಬೇಕು. ಖಾಯಂ ಸಂಪರ್ಕ ಪಡೆದರೆ ಬಾಕಿ ಉಳಿದ ತಿಂಗಳುಗಳಿಗೂ ಕನಿಷ್ಟ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಆದ್ದರಿಂದ ಸರ್ಕಾರ ಗೃಹ ಬಳಕೆಯ ವಿದ್ಯುತ್ ಅನ್ನು ಅಡಿಕೆ ಸುಲಿಯಲು ಬಳಸಿಕೊಳ್ಳಲು ಅವಕಾಶ ಕಲ್ಪಿಸಲಿ, ಅದು ಸಾಧ್ಯವೇ ಇಲ್ಲ ಎಂದಾದರೆ ತಾತ್ಕಾಲಿಕ ಕಮರ್ಷಿಯಲ್ ಸಂಪರ್ಕ ಕೊಡಲಿ. ಹೀಗೆ ದುಬಾರಿ ದಂಡ ಹಾಕಿದರೆ ರೈತರು ಒಗ್ಗೂಡಿ ಪ್ರತಿಭಟಿಸುವುದು ಅನಿವಾರ್ಯವಾಗಲಿದೆ ಎಂದು ಧರಣೇಶ್ ಹೇಳಿದ್ದಾರೆ.







