ಎಲ್ಲೆಡೆ ಅದ್ಧೂರಿ ವೈಕುಂಠ ಏಕಾದಶಿ..!
– ರಥ ಬೀದಿ ವೆಂಕಟರಮಣ, ಅರುಣಗಿರಿ ಸೇರಿ ಅನೇಕ ಕಡೆ ವಿಶೇಷ ಪೂಜೆ
– ಸಂಭ್ರಮಿಸಿದ ಭಕ್ತ ಜನ ಸಾಗರ: ದೇಗುಲದಲ್ಲಿ ಕ್ಯೂ
NAMMUR EXPRESS NEWS
ತೀರ್ಥಹಳ್ಳಿ: ವೈಕುಂಠ ಏಕಾದಶಿಯನ್ನು ನಾಡಿನಾದ್ಯಂತ ಶ್ರದ್ಧೆ, ಭಕ್ತಿ ಮತ್ತು ಸಂಭ್ರಮದಿಂದ ಅದ್ಧೂರಿಯಾಗಿ ಆಚರಿಸಲಾಯಿತು. ದೇಶದ ಎಲ್ಲಾ ವೆಂಕಟರಮಣನ ದೇವಸ್ಥಾನಗಳೂ ಏಕಾದಶಿಯ ದೇವರ ದರ್ಶನಕ್ಕಾಗಿ ತುಂಬಿ ತುಳುಕುತ್ತಿದ್ದವು. ಏಕಾದಶಿಯ ಅಂಗವಾಗಿ ಉತ್ತರಾಯಣ ಪುಣ್ಯಕಾಲದ ಮೊದಲನೇ ದಿನವಾದ ಇಂದು ದೇವಸ್ಥಾನದ ಉತ್ತರದ ಬಾಗಿಲಿಂದ ಭಕ್ತರು ದೇವಸ್ಥಾನವನ್ನು ಪ್ರವೇಶಿಸಿ ದೇವರ ದರ್ಶನ ಪಡೆದು ಪುನೀತರಾದರು. ಇಂದು ಬೆಳಗ್ಗೆಯಿಂದಲೇ ಪೂಜಾ ಕಾರ್ಯಕ್ರಮಗಳು ನೆರವೇರಿದ್ದು, ಭಕ್ತಾದಿಗಳ ದಂಡೇ ದೇವಸ್ಥಾನದತ್ತ ಹರಿದು ಬರುತ್ತಿದ್ದು, ಭಕ್ತರು ಸ್ವಾಮಿಗೆ ಸೇವೆಯನ್ನು ಸಲ್ಲಿಸಿ ತೀರ್ಥ ಪ್ರಸಾದ ವಿನಿಯೋಗ ಮಾಡಿದರು. ಹಾಗೇಯೆ ದೇವಸ್ಥಾನ ವತಿಯಿಂದ ಭಕ್ತರಿಗೆ ಲಾಡನ್ನು ಹಂಚಲಾಯಿತು. ಈ ದಿನ ಸಂಜೆಯೂ ಕೂಡ ತಿರುಮಲ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದಲ್ಲಿ ಪೂಜಾ ವಿಧಿ ವಿಧಾನಗಳು ನಡೆದಿದೆ. ತೀರ್ಥಹಳ್ಳಿಯ ರಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೈವೇದ್ಯಗಳು ನೆರವೇರಿದ್ದು ಅಪಾರ ಭಕ್ತರು ದೇವರ ದರ್ಶನ ಪಡೆದರು.
ಅರುಣಗಿರಿಯಲ್ಲಿ ಸಂಭ್ರಮವೋ ಸಂಭ್ರಮ!
ಅರುಣಗಿರಿಯ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ಅದ್ಧೂರಿ ಪೂಜೆ ನಡೆಯಿತು. ನಿಸರ್ಗದ ತಪ್ಪಲಿನಲ್ಲಿ ನೆಲೆಯಾಗಿ ನಿಂತು ಭಕ್ತರನ್ನು ಪೊರೆಯುತ್ತಿರುವ ಶ್ರೀ ಲಕ್ಷ್ಮೀ ವೆಂಕಟರಮಣ ದೇವರ ಸಾನಿಧ್ಯದಲ್ಲಿ ಬೆಳಗ್ಗೆ 4:00 ರಿಂದಲೇ ಸ್ವಾಮಿಗೆ ವಿಶೇಷವಾದ ಪೂಜೆ ನಡೆದಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ದೇವರ ದರ್ಶನ ಪಡೆದು ಪುನೀತರಾದರು.