ಬಾಗಿಲು ತೆರೆದ ಹಾಸನಾಂಬ ದೇವಿ ದೇವಾಲಯ,ದರ್ಶನ ಆರಂಭ
* ಬೆಳಿಗ್ಗೆ 6 ರಿಂದ ಸಂಜೆ 7 ರವರೆಗೆ ದರ್ಶನಕ್ಕೆ ವ್ಯವಸ್ಥೆ
* ಹೆಲಿಟೂರಿಸಂ,ಫಲಪುಷ್ಪ ಪ್ರದರ್ಶನ,ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ
* ದರ್ಶನಕ್ಕೆ ಬರುವ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿ
NAMMMUR EXPRESS NEWS
ಹಾಸನ : ಪ್ರಸಿದ್ಧ ಹಾಸನಾಂಬೆ ದೇವಿ ದೇವಾಲಯದ ಗರ್ಭಗುಡಿ ಬಾಗಿಲು ನಿನ್ನೆ ತೆರೆದಿದ್ದು, ಇಂದಿನಿಂದ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 7 ಗಂಟೆಯವರೆಗೂ ಸಾರ್ವಜನಿಕರಿಗೆ ದರ್ಶನವಿರುತ್ತದೆ. ಸರದಿ ಸಾಲು ಆರು ಗಂಟೆಗೆ ಮೊದಲೇ ಆರಂಭವಾಗುತ್ತದೆ ಹಾಗೂ ಸಂಜೆ 4 ಗಂಟೆಗೆ ಸರತಿ ಸಾಲಿಗೆ ನಿಲ್ಲುವುದನ್ನು ಬಂದ್ ಮಾಡಿ ಏಳು ಗಂಟೆಯವರೆಗೂ ದರ್ಶನ ಮಾಡಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ ಎಂದು ತಿಳಿಸಲಾಗಿದೆ.
ಗುರುವಾರ ಮಂಗಳ ವಾದ್ಯಗಳೊಂದಿಗೆ ಪೂಜಾ ಸಾಮಗ್ರಿಗಳ ಸಮೇತ ಪ್ರಧಾನ ಅರ್ಚಕ ನಾಗರಾಜ ನೇತ್ರತ್ವದಲ್ಲಿ ಅರ್ಚಕರಿಂದ ಪೂಜೆ ನೆರವೇರಿಸಿದ ಬಳಿಕ ಗರ್ಭಗುಡಿಯ ಬಾಗಿಲು ತೆರೆಯಲಾಯಿತು. ಈ ವೇಳೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡ, ಸಂಸದ ಶ್ರೇಯಸ್ ಪಟೇಲ್, ಹಾಸನ ಡಿಸಿ ಹಾಗೂ ಎಸ್ಪಿ ಇದ್ದರು. ಅಕ್ಟೋಬರ್ 23ರವರೆಗೆ ಹಾಸನಾಂಬೆ ದೇವಿ ಜಾತ್ರೆ ನಡೆಯಲಿದ್ದು,ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.
ಬೆಳಿಗ್ಗೆ 6 ಗಂಟೆಗೆ ಆರಂಭವಾದರೆ 22ನೇ ತಾರೀಖು ಸಂಜೆ 7 ಗಂಟೆಯವರೆಗೆ ದರ್ಶನ
ಮುಂದುವರೆಯುತ್ತದೆ. ಆದರೆ ನೈವೇದ್ಯ ಮತ್ತು ಅಲಂಕಾರ, ಪೂಜಾ ಕೈಂಕರ್ಯಕ್ಕೆ ಆ ಸಮಯವನ್ನು ಮೀಸಲಿಡಬೇಕಾಗಿರುವುದರಿಂದ, ಪ್ರತಿದಿನ ಮುಂಜಾನೆ 02 ರಿಂದ 05 ವರೆಗೆ ಮತ್ತು ಮಧ್ಯಾಹ್ನ 02 ರಿಂದ 03.30 ಗಂಟೆವರೆಗೆ ದೇವಾಲಯ ತೆರೆದಿದ್ದರೂ ಈ ಸಮಯದಲ್ಲಿ ದರ್ಶನಕ್ಕೆ ಅವಕಾಶವಿರುವುದಿಲ್ಲ. 23ನೇ ತಾರೀಕು ಸಾರ್ವಜನಿಕರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಶಾಸ್ತ್ರೋಕ್ತವಾಗಿ, ವಿಧಿವತ್ತಾಗಿ ಬಾಗಿಲು ತೆರೆದಿರುವ ರೀತಿಯಲ್ಲೇ ಅಂದು ಹಾಸನಾಂಬ ದೇವಿಯ ದೇಗುಲದ ಬಾಗಿಲನ್ನು ಮುಂದಿನ ವರ್ಷದವರೆಗೆ ಮುಚ್ಚಲಾಗುತ್ತದೆ ಎಂದು ಕಂದಾಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.
* ಭಕ್ತರಿಗೆ ದರ್ಶನ ಇನ್ನಷ್ಟು ವಿಶೇಷವಾಗಿಸಲು ಹೆಲಿಟೂರಿಸಂ,ಸಾಂಸ್ಕೃತಿಕ ಕಾರ್ಯಕ್ರಮ
ನಾಡಿನ ಜನತೆ ದೇವಿಯ ದರ್ಶನವನ್ನು ಪಡೆದು ಹೋಗುವಾಗ ಅವರ ಅನುಭವ ಇನ್ನಷ್ಟು ವಿಶೇಷವಾಗಿರಲಿ ಎಂದು ಸಂಜೆ 06 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮುಖಾಂತರ ಈ ಜಾತ್ರಾ ಮಹೋತ್ಸವಕ್ಕೆ ಚಾಲನೆಯನ್ನು ಕೊಡುತ್ತಿದ್ದೇವೆ. ಸಂಜೆ 6.30 ರಿಂದ ರಾತ್ರಿ 10.30 ವರೆಗೂ ಹೇಮಾವತಿ ಪ್ರತಿಮೆಯ ಆವರಣದಲ್ಲಿ ಜಾನಪದ, ಸಂಗೀತ, ಸಾಹಿತ್ಯ, ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿನಿತ್ಯ ಭಜನಾ ಕಾರ್ಯಕ್ರಮ, ಜಾನಪದ, ಸಂಗೀತ, ನೃತ್ಯ ಕಾರ್ಯಕ್ರಮಗಳು ಹಾಗೂ ಶಾಸ್ತ್ರೀಯ ಸಂಗೀತ ಹೀಗೆ ಬರುವ 12 ದಿನಗಳು ನಿರಂತರವಾಗಿ ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಾಸನ ನಗರಾದ್ಯಂತ ಹಮ್ಮಿಕೊಳ್ಳಲಾಗಿದೆ.
ಜೊತೆಗೆ ಈ ವರ್ಷ ಬರುವ ಸಾರ್ವಜನಿಕರಿಗೆ ಹೆಲಿ ಟೂರಿಸಂ ಕೂಡ ಆಯೋಜಿಸಲಾಗಿದೆ. ದೇವಿಯ ದರ್ಶನಕ್ಕೆ ಬರುವ ಜನರಿಗೆ ದರ್ಶನದ ಜೊತೆಗೆ ಹಾಸನದ ನೆನಪು ಶಾಶ್ವತವಾಗಿ ಉಳಿಯುವಂತಹ ಅನುಭವವನ್ನು ಸವಿದು ಹೋಗುವಂತೆ ಪ್ರತಿ ವರ್ಷದಂತೆ ಈ ವರ್ಷವೂ ಫಲಪುಷ್ಪ ಪ್ರದರ್ಶನ, ವಸ್ತು ಪ್ರದರ್ಶನ ಎಲ್ಲವನ್ನು ಆಯೋಜಿಸಲಾಗಿದೆ. ಭಕ್ತಾಧಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಮನವಿ ಮಾಡಿದರು.
ದೇವಿಯ ದರ್ಶನಕ್ಕೆ ಶ್ರೀಸಾಮಾನ್ಯರಿಗೆ ಮೊದಲ ಆದ್ಯತೆ ಸಿಗಬೇಕು ಎಂದು ಜಿಲ್ಲಾಡಳಿತ, ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಈ ವರ್ಷ ಒಗ್ಗಟ್ಟಿನಿಂದ ತೀರ್ಮಾನ ಮಾಡಿದ್ದೇವೆ. ಈ ಕಾರಣ 20ರಿಂದ 25 ಲಕ್ಷ ಜನ ಶ್ರೀಸಾಮಾನ್ಯರು ಬರುವಾಗ ಅವರಿಗೆ ಸುಗಮವಾಗಿ ದರ್ಶನ ಆಗಬೇಕು. ಭೇಟಿಗೆ ಬರುವ ಗಣ್ಯರಿಗೆ ಸಮಯವನ್ನು 10.30 ರಿಂದ 12.30 ವರೆಗೆ ನಿಗದಿ ಮಾಡಲಾಗಿದೆ. ಅವರಿಗೆ ನೇರವಾಗಿ ದರ್ಶನವನ್ನು ಮಾಡಿಸುವ ಜವಾಬ್ದಾರಿಯನ್ನು ಜಿಲ್ಲಾಡಳಿತ ತೆಗೆದುಕೊಂಡಿದೆ. ನನ್ನ ಕ್ಷೇತ್ರದ ಜನರಿಗೆ ದರ್ಶನಕ್ಕಾಗಿ 5 ಲಕ್ಷ ರೂ.ಗಳನ್ನು ನೀಡಿ ಪಾಸ್ಗಳನ್ನು ಖರೀದಿಸಿದ್ದೇನೆ. ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕರ ಹಿತವನ್ನು ಮರೆಯಬಾರದು. ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.
* ದರ್ಶನಕ್ಕೆ ಬರುವ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿ
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಸೆಕ್ಷನ್ 58 ರಂತೆ ಹಾಸನ ಜಿಲ್ಲೆ ಹಾಸನ ಟೌನ್ ಶ್ರೀ ಹಾಸನಾಂಬ ದೇವಾಲಯದ ಗರ್ಭಗುಡಿ, ಒಳಾಂಗಣ ಮತ್ತು ಹೊರಾಂಗಣದಲ್ಲಿ ಕೆಲಸ ನಿರ್ವಹಿಸುತ್ತಿರುವ ದೇವಾಲಯದ ನೌಕರರು ಮತ್ತು ನಿಯೋಜನ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳು ದೇವಾಲಯದ ಗರ್ಭಗುಡಿಗೆ ಪ್ರವೇಶಿಸಲು ಪುರುಷರು ಪಂಚೆ, ದೋತಿಯಂತಹ ಅಥವಾ ಪೈಜಾಮದಂತಹ ಹಾಗೂ ಮಹಿಳೆಯರು ಸೀರೆ ಮತ್ತು ಚೂಡಿದಾರದಂತಹ ಸಾಂಪ್ರದಾಯಿಕ ಉಡುಗೆಗಳಲ್ಲಿ ಮಾತ್ರ ಅವಕಾಶ ಕಲ್ಪಿಸುವುದು. ಯಾವುದೇ ರೀತಿಯ ಕರ್ತವ್ಯ ನಿರತ ಸಿಬ್ಬಂದಿಗಳು ಸಮವಸ್ತ್ರ, ಸಹಿತವಾಗಿ ಗರ್ಭಗುಡಿ ಪ್ರವೇಶಿಸಲು ಅವಕಾಶವಿರುವುದಿಲ್ಲ ಎಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಸೂಚಿಸಿದ್ದಾರೆ.








