ಭಾರತದ ಅತಿ ಎತ್ತರದ ಜಲಪಾತ
ಕುಂಚಿಕಲ್ ಫಾಲ್ಸ್!
– ವಾರಾಹಿ ನದಿಯಿಂದ ಸೃಷ್ಟಿಗೊಂಡಿರುವ ಜಲಪಾತ
– ಸರಕಾರ ಪ್ರವಾಸೋದ್ಯಮ ತಾಣ ಮಾಡಲು ಪಟ್ಟು
ವಿಶೇಷ ವರದಿ: ರಚನಾ ಕಾಮತ್
ಶಿವಮೊಗ್ಗ ಜಿಲ್ಲೆಯ ಹೊಸ ನಗರ ತಾಲ್ಲೂಕಿನಲ್ಲಿರುವ ಕುಂಚಿಕಲ್ ಜಲಪಾತವು ಇತ್ತೀಚೆಗೆ ಬಹಳ ಸದ್ದು ಮಾಡುತ್ತಿದೆ. ಇದುವರೆಗೆ ಜೋಗ ಜಲಪಾತವನ್ನು ಭಾರತದ ಅತಿ ಎತ್ತರದ ಜಲಪಾತ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಕುಂಚಿಕಲ್ ಜಲಪಾತವು ಅತಿ ಎತ್ತರದ ಜಲಪಾತ ಎಂದು ಹೇಳಲಾಗುತ್ತಿದೆ. ಏಕೆಂದರೆ ಈ ಜಲಪಾತ ಸುಮಾರು 455 ಮೀಟರ್ ನಷ್ಟು ಉದ್ದವಾಗಿದ್ದು, 1493 ಅಡಿಗಳಷ್ಟು ಎತ್ತರದಿಂದ ಧುಮುಕುತ್ತದೆ.
ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಯ ಗಡಿಭಾಗದಲ್ಲಿರುವ ಕುಂಚಿಕಲ್ ಜಲಪಾತವು ಮಾಸ್ತಿಕಟ್ಟೆ ಮತ್ತು ಹುಲಿಕಲ್ ಬಳಿ ಇದೆ. ವಾರಾಹಿ ನದಿಯಿಂದ ಸೃಷ್ಟಿಗೊಂಡಿರುವ ಈ ಜಲಪಾತವನ್ನು ನೋಡಲು ಮಳೆಗಾಲ ಮಾತ್ರ ಸೂಕ್ತ ಸಮಯ. ಉಳಿದ ಕಾಲಗಳಲ್ಲಿ ಇದರ ನೀರಿನ ಪ್ರಮಾಣ ಕಡಿಮೆ ಇರುತ್ತದೆ. ಸುತ್ತಮುತ್ತಲು ಮಲೆನಾಡಿನ ಗಿರಿ ಪ್ರದೇಶ ಮತ್ತು ಪಶ್ಚಿಮ ಘಟ್ಟಗಳ ದಟ್ಟ ಅರಣ್ಯದಿಂದ ಆವೃತವಾಗಿರುವ ಈ ಜಲಪಾತವು ನಿಸರ್ಗ ಪ್ರಿಯರ ಕಣ್ಮನ ಸೆಳೆಯುತ್ತದೆ. ಆದರೆ ಜಲಪಾತವು ದಟ್ಟಾರಣ್ಯದ ನಡುವೆ ಇರುವುದರಿಂದ, ಸರ್ಕಾರವು ಅದನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಿರುವ ಹಿನ್ನೆಲೆಯಲ್ಲಿ, ಜಲಪಾತವನ್ನು ನೋಡಲು ಬಯಸುವವರು ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ ಅಂದರೆ ಕೆಪಿಸಿಎಲ್ ನಿಂದ ಅನುಮತಿ ಮತ್ತು ಗೇಟ್ ಪಾಸ್ ಅನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಕುಂಚಿಕಲ್ ಜಲಪಾತವು ಮಾಣಿ ಅಣೆಕಟ್ಟೆಯಿಂದ ಮೂರು ಕಿಲೋ ಮೀಟರ್ ದೂರದಲ್ಲಿದೆ. ಈ ತಾಣ ಈಗಾಗಲೇ ಶಿವಮೊಗ್ಗ ಜಿಲ್ಲೆಯ ಪರಿಸರ ಪಟ್ಟಿಯಲ್ಲಿದೆ.
ಇಡೀ ನಾಡಿಗೆ ಬೆಳಕು ನೀಡಿದ ಹೊಸನಗರ ಭಾಗದ ಪ್ರವಾಸೋದ್ಯಮಕ್ಕೆ ಈ ಜಲಪಾತ ಹೊಸ ಆಯಾಮ ನೀಡಲಿದ್ದು ಸರ್ಕಾರ ಈ ಬಗ್ಗೆ ಗಮನ ವಹಿಸಬೇಕಿದೆ.








