ಜೋಕೆ!..ಬಲಿಗಾಗಿ ಕಾದಿದೆ ಗುಂಡಿ ರಸ್ತೆಗಳು..!
– ಗುಂಡಿ ತಪ್ಪಿಸುವ ಹರಸಾಹಸದಲ್ಲಿ ಜನರು
– ತೀರ್ಥಹಳ್ಳಿ ಪಟ್ಟಣದಲ್ಲಿ ಹೊಂಡ ಗುಂಡಿ ಮುಚ್ಚೋರು ಯಾರು?
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಪ್ರಮುಖ ರಸ್ತೆಗಳ ಹೊಂಡ ಗುಂಡಿ ಇದೀಗ ಪ್ರಯಾಣಿಕರ ಜೀವ ತೆಗೆಯುವ ಭೀತಿ ಎದುರಾಗಿದೆ.
ಯಡೇಹಳ್ಳಿ ಕೆರೆ ಬಳಿ, ಸಹ್ಯಾದ್ರಿ ಪಾಲಿಟೆಕ್ನಿಕ್ , ಸಾಗರ ಹೊಸನಗರ ಮುಖ್ಯ ರಸ್ತೆ, ಸೊಪ್ಪುಗುಡ್ಡೆ ರಸ್ತೆ, ಮುಖ್ಯ ರಸ್ತೆ ಸೇರಿ ಹಲವೆಡೆ ರಸ್ತೆಗಳಲ್ಲಿ ಹೊಂಡ ಗುಂಡಿಗಳ ರಸ್ತೆಯೇ ತುಂಬಿಹೋಗಿದ್ದು ವಾಹನ ಸವಾರರು ಓಡಾಡಲು ಪರದಾಟ ನಡೆಸುತ್ತಿದ್ದಾರೆ.
ದಿನ ಕಳೆದಂತೆ ರಸ್ತೆ ಗುಂಡಿಗಳು ಮೃತ್ಯುಸ್ವರೂಪಿಯಾಗಿ ಪರಿಣಮಿಸಿವೆ. ಗುಂಡಿಗೆ ಬಿದ್ದು, ಗುಂಡಿ ತಪ್ಪಿಸಲು ಹೋಗಿ ಪ್ರಾಣ ಕಳೆದುಕೊಳ್ಳುವುದು, ಗಾಯಗಳಾಗುವ ಆತಂಕಕ್ಕೆ ಒಳಗಾಗಿರುವ ಜನರು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಳೆ ಸುರಿದು ರಸ್ತೆ ಗುಂಡಿ ಸಮಸ್ಯೆ ವರ್ಷವಿಡೀ ಜನರನ್ನು ಬಿಡದೆ ಕಾಡುತ್ತಿದೆ. ಇತ್ತೀಚೆಂತೂ ರಸ್ತೆ ಗುಂಡಿಯಿಂದಾಗಿ ಸಾವುನೋವು ಭಯ ಕಾಡತೊಡಗಿದೆ. ಇಷ್ಟಾದರೂ ಅಧಿಕಾರಿಗಳು ರಸ್ತೆ ದುರಸ್ತಿಗೆ ಆದ್ಯತೆ ನೀಡದಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ನಗರದ ರಸ್ತೆಯಲ್ಲಿ ಸಾಮಾನ್ಯ ವೇಗದಲ್ಲಿ ವಾಹನ ಚಾಲನೆ ಮಾಡುತ್ತಿದ್ದರೂ ದಿಢೀರ್ ಗುಂಡಿ ಎದುರಾದಾಗ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ದಿನನಿತ್ಯ ಓಡಾಡುವ ರಸ್ತೆಯಾದ್ದರಿಂದ ಚಾಲಕರು ವಿಚಲಿತಗೊಳ್ಳುತ್ತಾರೆ. ಗುಂಡಿಯೊಳಗೆ ವಾಹನ ಚಕ್ರ ಹರಿಯದಂತೆ ನಿಯಂತ್ರಿಸಲು ಹೋದಾಗ ಅಪಘಾತ ಸಂಭವಿಸುವ ಸಾಧ್ಯತೆಗಳಿರುತ್ತದೆ. ವೇಗದಲ್ಲಿದ್ದರೆ ವಾಹನ ಗುಂಡಿಗೆ ಇಳಿದು ಅಪಘಾತ ಸಂಭವಿಸುವ ಚಾಲಕರು ವೇಗ ನಿಯಂತ್ರಿಸುವಲ್ಲಿ ಯಶಸ್ವಿಯಾದರೂ ವಾಹನ ಗುಂಡಿಗೆ ಇಳಿದಾಗ ಬೆನ್ನು ಹುರಿ, ಸೊಂಟ, ಕುತ್ತಿಗೆಗೆ ಹಾನಿಯಾಗಲು ಕಾರಣವಾಗಬಹುದು. ಇಷ್ಟಾದರೂ ಸ್ಥಳೀಯ ಆಡಳಿತ ಗಮನಿಸಲ್ಲ.
ಈ ಬಗ್ಗೆ ನಮ್ಮೂರ್ ಎಕ್ಸ್ ಪ್ರೆಸ್ ವರದಿ ಮಾಡಿದಾಗ ಕೊಪ್ಪ ಸರ್ಕಲ್ ಮುಖ್ಯ ರಸ್ತೆಯಲ್ಲಿ ರಸ್ತೆ ಸರಿ ಮಾಡಲಾಗಿತ್ತು.