ಅಂಗನವಾಡಿಯಲ್ಲೂ ಎಲ್ಕೆಜಿ, ಯುಕೆಜಿ ಶುರು..!!
– ಅ. 19ರಿಂದ ರಾಜ್ಯಾದ್ಯಂತ ಆರಂಭಿಸುವ ಯೋಜನೆ
– ಸ್ಮಾರ್ಟ್ ಕ್ಲಾಸ್, ಆಧುನಿಕ ಕಲಿಕಾ ಸಾಮಗ್ರಿ, ಪದವೀಧರ ಶಿಕ್ಷಕರಿಂದ ಶಿಕ್ಷಣ
NAMMUR EXPRESS NEWS
ಬೆಂಗಳೂರು : ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಇಂಗ್ಲಿಷ್ ಮಾಧ್ಯಮದ ಗೀಳು ಹೆಚ್ಚಾಗಿದ್ದು, ಪೋಷಕರು ತಮ್ಮ ಮಕ್ಕಳನ್ನು ಕಾನ್ವೆಂಟ್ಗಳಲ್ಲಿಯೇ ಕಲಿಯಬೇಕೆಂದು ಬಯಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಪೋಷಕರನ್ನು ಸರ್ಕಾರಿ ಅಂಗನವಾಡಿಗಳತ್ತ ಸೆಳೆಯಲು ಸರ್ಕಾರಿ ಅಂಗನವಾಡಿಗಳಲ್ಲೂ ಮಾಂಟೇಸರಿ ಮಾದರಿಯಲ್ಲಿ ಎಲ್ಕೆಜಿ, ಯುಕೆಜಿ ತರಗತಿ ಶುರು ಮಾಡುತ್ತಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ವರ್ ಅವರ ಜಂಟಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ನಿರ್ಧಾರವಾಗಿದೆ. ಕರ್ನಾಟಕದಲ್ಲಿ ಅಂಗನವಾಡಿಗಳ ಸ್ಥಾಪನೆಯ 50ನೇ ವಾರ್ಷಿಕೋತ್ಸವದ ಅಂಗವಾಗಿ ಅ. 19ರಂದು ಈ ಯೋಜನೆ ಜಾರಿಗೆ ತರಲು ಸರ್ಕಾರ ತೀರ್ಮಾನಿಸಿದೆ.
10000 ಕೇಂದ್ರಗಳಲ್ಲಿ: ಮೊದಲ ಹಂತದಲ್ಲಿ ರಾಜ್ಯದ ಹತ್ತು ಸಾವಿರ ಅಂಗನವಾಡಿಗಳಲ್ಲಿ ಎಲ್ ಕೆಜಿ ಮತ್ತು ಯುಕೆಜಿ ಪ್ರಾರಂಭಿಸಲಾಗುವುದು. ನಂತರ, ಈ ಕಾರ್ಯಕ್ರಮ ಉಳಿದ ಕೇಂದ್ರಗಳಿಗೆ ವಿಸ್ತರಿಸಲಾಗುವುದು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಪಠ್ಯಕ್ರಮವನ್ನು ವಿನ್ಯಾಸ ಗೊಳಿಸಿದ್ದು, ಪಠ್ಯ ಪುಸ್ತಕ, ಸಮವಸ್ತ್ರ, ಶೂ. ಸಾಕ್ಸ್ ಮತ್ತು ಬ್ಯಾಗ್ ಒದಗಿಸುವ ಯೋಜನೆ ಇದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಈ ತರಗತಿಗಳ ದೈನಂದಿನ ನಿರ್ವಹಣೆ ನೋಡಿಕೊಳ್ಳಲಿದೆ. ನಾಲ್ಕರಿಂದ ಐದು ವರ್ಷದ ಮಕ್ಕಳು ಎಲ್ಕೆಜಿಗೆ 5ರಿಂದ 6 ವರ್ಷದವರಿಗೆ ಯುಕೆಜಿಗೆ ದಾಖಲಾಗುತ್ತಾರೆ. ಮೂರರಿಂದ ನಾಲ್ಕು ವರ್ಷದ ಮಕ್ಕಳು ಈಗಾಗಲೇ ಇರುವ ಅಂಗನವಾಡಿ ವ್ಯವಸ್ಥೆಯಲ್ಲಿಯೇ ಮುಂದುವರಿಯುತ್ತಾರೆ. ಕರ್ನಾಟಕದಲ್ಲಿ ಪ್ರಸ್ತುತ 69,892 ಅಂಗನವಾಡಿಗಳಿವೆ. ಮೊದಲಿಗೆ, 5,000 ಕೇಂದ್ರಗಳಲ್ಲಿ ಮಾಂಟೆಸರಿ ಮಾದರಿಯಲ್ಲಿ ಎಲ್ ಕೆಜಿ, ಯುಕೆಜಿ ಪ್ರಾರಂಭಿಸಲು ಯೋಜಿಸಲಾಗಿತ್ತು. ಆದರೆ, ಹೆಚ್ಚುತ್ತಿರುವ ಬೇಡಿಕೆಯೊಂದಿಗೆ ಈ ಸಂಖ್ಯೆಯನ್ನು ಹತ್ತು ಸಾವಿರಕ್ಕೆ ಹೆಚ್ಚಿಸಲಾಗಿದೆ.







