ನಮ್ಮೂರ್ ಸಾಧಕರು
ವೈದ್ಯ ಲೋಕದ ಸಾಧಕ ಡಾ ಜಿ.ಕೆ.ವೆಂಕಟೇಶ್
– ರಾಜಧಾನಿ ಬೆಂಗಳೂರಲ್ಲಿ ವಿಶೇಷ ಸೇವೆ
– ಮಲೆನಾಡ ಕೀರ್ತಿ ಎಲ್ಲೆಡೆ ಪಸರಿಸಿದ ಸಾಧಕ
ಹಿರಿಯ ತಜ್ಞ ವೈದ್ಯರಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿ, ಹಲವಾರು ವೈದ್ಯರಿಗೆ ಮಾರ್ಗದರ್ಶಕರಾಗಿರುವ ಡಾ.ಜಿ.ಕೆ. ವೆಂಕಟೇಶ್ ವೈದ್ಯ ಲೋಕದ ಅಸಾಧಾರಣ ಪ್ರತಿಭೆ.
ಡಾ.ಜಿ. ಕೆ. ವೆಂಕಟೇಶ್ ಅವರದು ರಾಜ್ಯದ ವೈದ್ಯಕೀಯ ಸೇವೆಯಲ್ಲಿ , ವೈದ್ಯಕೀಯ ಶಿಕ್ಷಣದಲ್ಲಿ ಬಹುದೊಡ್ಡ ಹೆಸರು. ಮೂಲತಃ ತೀರ್ಥಹಳ್ಳಿಯ ಪ್ರತಿಭೆಯಾಗಿದ್ದು, ತೀರ್ಥಹಳ್ಳಿ ಸಮೀಪದ ತನಿಕಲ್ಲು ಎಂಬ ಗ್ರಾಮದಲ್ಲಿ ಜನಿಸಿದವರು. ವೆಂಕಟೇಶ್ ಅವರು ಶ್ರೀಯುತ ಕೇಶವಯ್ಯ ಗೌಡರ ಪುತ್ರರಾಗಿದ್ದು, ಹಳ್ಳಿಯ ಎಲ್ಲ ಅಸ್ಮಿತೆ ಗಂಧಗಳನ್ನು ಕಟ್ಟಿಕೊಂಡು ಬೆಳೆದವರು. ವೈದ್ಯ ಶಿಕ್ಷಣ ಪದವಿಯ ನಂತರ ಬೆಂಗಳೂರಿನಲ್ಲಿ ಯುರಾಲಜಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಆ ವಿಷಯದಲ್ಲಿ ವಿಶೇಷ ಪರಿಣತಿ ಪಡೆದು, ಬೌರಿಂಗ್ ಹಾಗೂ ವಿಕ್ಟೋರಿಯಾ ಆಸ್ಪತ್ರೆಗಳಲ್ಲಿ, ಸುದೀರ್ಘ ಸೇವೆ ಸಲ್ಲಿಸುತ್ತಾ , ವೈದ್ಯಕೀಯ ಕಾಲೇಜಿನಲ್ಲಿ ಜನಪ್ರಿಯ ಶಿಕ್ಷಕರಾಗಿ, ಸಂಶೋಧನಾ ಕ್ಷೇತ್ರದಲ್ಲಿ ಮಾರ್ಗದರ್ಶಕರಾಗಿ ತೊಡಗಿದವರು.
ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ವಿಶೇಷ ಸಾಧನೆ ಮತ್ತು ಸೇವೆಯನ್ನು ಮಾಡಿದ್ದಾರೆ. ವೆಂಕಟೇಶ್ ಅವರು ಯುರಾಲಜಿ ವಿಭಾಗದಲ್ಲಿ ಒಂದು ಕಳಶವಿದ್ದಂತೆ. ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ, ಉನ್ನತ ಶಿಕ್ಷಣ ಹಾಗೂ ಶುಶ್ರೂಷೆಗೆಂದು “ನೆಫ್ರೋ ಯುರಾಲಜಿ” ಎಂಬ ಸ್ವತಂತ್ರ ಸಂಸ್ಥೆಯನ್ನು ಕಟ್ಟಿ, ಅದರ ಸ್ಥಾಪಕ ನಿರ್ದೇಶಕರಾಗಿದ್ದರು.
ಇವೆಲ್ಲಕ್ಕಿಂತ ಮಿಗಿಲಾಗಿ ಶ್ರೀಯುತರು ರೋಗಿಗಳ ವಿಚಾರದಲ್ಲಿ ಅಪಾರ ಕಾಳಜಿ, ಕಕ್ಕುಲತೆ, ಅನುಕಂಪ, ಪ್ರೀತಿ, ಮಾನವೀಯತೆ ತುಂಬಿಕೊಂಡ ಹೃದಯವಂತ ವೈದ್ಯರು. ತಮ್ಮ ಸಂಪರ್ಕಕ್ಕೆ ಬಂದವರಿಗೆ, ಯಾವುದೇ ವ್ಯಕ್ತಿಗಳಾಗಲಿ ಪ್ರತಿಫಲವನ್ನು ನಿರೀಕ್ಷಿಸದೆ, ನೆರವು ನೀಡುವಲ್ಲಿ ಮತ್ತು ಮಾರ್ಗದರ್ಶನ ಮಾಡುವಲ್ಲಿ ಸದಾ ಮುಂಚೂಣಿಯಲ್ಲಿರುತ್ತಾರೆ.
ಮಲೆನಾಡಿನ ಭಾಗದಲ್ಲಿ ಅಸಂಖ್ಯಾತ ಜನರು, ಅವರ ಸೇವೆ ಮತ್ತು ಮಾರ್ಗದರ್ಶನ ಪಡೆದವರಿದ್ದಾರೆ.
ಡಾ.ವೆಂಕಟೇಶ್ ಅವರದು ಬಹುಮುಖ ಪ್ರತಿಭೆ
ಡಾ.ವೆಂಕಟೇಶ್ ಅವರದು ಬಹುಮುಖ ಪ್ರತಿಭೆ ಮತ್ತು ವೈವಿಧ್ಯ ಆಸಕ್ತಿಗಳನ್ನೊಳಗೊಂಡ ವ್ಯಕ್ತಿತ್ವ. ಸಾಹಿತ್ಯ, ಕಲೆ, ಸಂಗೀತ ಅಧ್ಯಯನ, ಸಮಕಾಲೀನ ವಿಚಾರಗಳ ಜ್ಞಾನ, ವಿಶ್ಲೇಷಣೆ, ಜನಸಂಪರ್ಕ, ಸ್ನೇಹಪರತೆ, ಹಳ್ಳಿಯ ಜನ್ಮ ಸ್ಥಳದ ನಂಟು, ಪ್ರವಾಸ , ಹೀಗೆ ಹಲವಾರು ವಿಷಯಗಳಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ತಮ್ಮ ನಡೆ ನುಡಿ, ರೀತಿನೀತಿಗಳಲ್ಲಿ ಯಾವುದೇ ವಿವಾದಗಳಿಗೆ ಒಳಪಡದೆ, ಬೆಂಗಳೂರು ಹಾಗೂ ಮಲೆನಾಡಿನಲ್ಲಿ ಅಪಾರ ಜನಾನುರಾಗಿ ವ್ಯಕ್ತಿಯಾಗಿ ಬೆಳೆದು ನಿಂತವರು. ಇವರು ತಮ್ಮ ಮಡದಿ, ಇಬ್ಬರು ಪುತ್ರಿಯರು ಹಾಗೂ ಅಳಿಯಂದಿರೊಡನೆ ಇಂದಿಗೂ ಸೇವೆಯನ್ನು ಮುಂದುವರಿಸಿಕೊಂಡು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಶ್ರೀಯುತರು ಮಲೆನಾಡಿನ, ಸಮಾಜದ ಆಸ್ತಿ ಎಂದರೆ ಅತಿಶಯೋಕ್ತಿಯಲ್ಲ. ಶ್ರೀಯುತರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನೊಳಗೊಂಡಂತೆ, ತಮ್ಮ ವೈದ್ಯಕೀಯ ಕ್ಷೇತ್ರದಲ್ಲಿನ ಸೇವೆ ಮತ್ತು ಸಾಧನೆಗಾಗಿ ಹಲವಾರು ಗೌರವ ಸನ್ಮಾನಗಳಿಗೆ ಭಾಜನರಾಗಿದ್ದಾರೆ.
ಡಾ.ವೆಂಕಟೇಶ್ ಮಾತನಾಡುತ್ತಾ “ನಾನು ಎಲ್ಲೆಡೆ ಸಾಮಾನ್ಯವಾಗಿ ವೈದ್ಯ ಎಂದು ಗುರುತಿಸಲ್ಪಡುವೆ, ಆದರೆ ನಾನು ಶಿಕ್ಷಕ ಎಂದು ಗುರುತಿಸಲ್ಪಡುವುದು ಹೆಚ್ಚು ಸಂತಸದಾಯಕ ” ಎಂದು ಹೇಳಿವುದರಲ್ಲೇ ಶಿಕ್ಷಣ ಸೇವೆಯ ಪಾವಿತ್ರ್ಯತೆ ಮತ್ತು ಮಹತ್ವವನ್ನು ಸಾರುತ್ತದೆ. ವಿಶ್ವವಿದ್ಯಾನಿಲಯವು ಶ್ರೀಯುತರನ್ನು ಗೌರವಿಸಿ ಅಭಿನಂದಿಸುವುದು ಸ್ತುತ್ಯಾರ್ಹ ಅರ್ಥಪೂರ್ಣ ಕಾರ್ಯವಾಗಿದೆ.
ರಾಜ್ಯದ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದಿಂದ ಗೌರವ
ರಾಜ್ಯದ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯವು, ಈ ವರ್ಷದ ಶಿಕ್ಷಕರ ದಿನಾಚರಣೆಯನ್ನು, ಬೆಂಗಳೂರಿನಲ್ಲಿ ಇಂದು ಆಚರಿಸುತ್ತಿದೆ. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವೈದ್ಯಕೀಯ ಶಿಕ್ಷಣ ಮಂತ್ರಿಗಳಾದ ಡಾ.ಶರಣ ಪ್ರಕಾಶ ಪಾಟೀಲ್, ಅಧ್ಯಕ್ಷರಾಗಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಭಗವಾನ್, ಹಾಗೂ” ಗೆಸ್ಟ್ ಆಫ್ ಹಾನರ್” ಅಭಿನಂದನಾ ಅತಿಥಿಯಾಗಿ ಡಾ. ಜಿ.ಕೆ.ವೆಂಕಟೇಶ್ ಅವರು ಆಗಮಿಸುತ್ತಿದ್ದಾರೆ. ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದ ವೇದಿಕೆಯಲ್ಲಿ ಅವರಿಗೆ ಸನ್ಮಾನದ ಮೂಲಕ ಗೌರವವನ್ನು ಸಲ್ಲಿಸಲಾಗುತ್ತಿದೆ. ಹಾಗೆಯೇ ವೈದ್ಯಕೀಯ ಶಿಕ್ಷಣದ ವಿವಿಧ ಪ್ರಕಾರಗಳಲ್ಲಿ ಗುರುತರ ಸಾಧನೆ ಮಾಡಿ, ಸೇವೆ ಸಲ್ಲಿಸಿದ ತಜ್ಞ ವೈದ್ಯರನ್ನು ಸನ್ಮಾನಿಸಲಾಗುತ್ತಿದೆ.
( ಮಾಹಿತಿ: ನಾಗರಾಜ್ ಬಿದರಗೋಡು )








