ಅಡಿಕೆ ಬೆಳೆಗಾರರ ಬದುಕಿಗೆ ಸಹ್ಯಾದ್ರಿ ಸಂಸ್ಥೆ ಸಂಜೀವಿನಿ!
– ರೈತ ಸೇವೆ ಮೂಲಕ ದಾಖಲೆ ಬರೆದ ಸಹ್ಯಾದ್ರಿ ಸಂಸ್ಥೆ
– ಸೆ. 17ರಂದು ತೀರ್ಥಹಳ್ಳಿಯಲ್ಲಿ ಸರ್ವ ಸದಸ್ಯರ ಸಭೆ
– ಈ ವರ್ಷ 28 ಸಾವಿರ ಚೀಲ ಅಡಿಕೆ ದಾಖಲೆಯ ವ್ಯವಹಾರ
NAMMUR EXPRESS NEWS
ತೀರ್ಥಹಳ್ಳಿ: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವ್ಯವಹಾರ ನಡೆಸುವ ಮೂಲಕ ಸಹಕಾರಿ ಕ್ಷೇತ್ರದ ಜೀವನಾಡಿಯಾಗಿ ಹೊರಹೊಮ್ಮಿರುವ ತೀರ್ಥಹಳ್ಳಿ ಮೂಲದ ಸಹ್ಯಾದ್ರಿ ವಿವಿದೋದ್ದೇಶ ಅಡಿಕೆ ಬೆಳೆಗಾರರ ಮಾರಾಟ ಸಹಕಾರ ಸಂಘ ಈ ವರ್ಷ 10 ಕೋಟಿಗೂ ಮಿಕ್ಕಿ ಲಾಭ ಗಳಿಸಿದ್ದು, ತನ್ನ ಸಹಸ್ರಾರು ಷೇರುದಾರರಿಗೆ ಶೇ. 10 ರ ಲಾಭಾಂಶ ಹಂಚಿಕೆ ಮಾಡಿ ದಾಖಲೆ ಬರೆದಿದೆ.
ತೀರ್ಥಹಳ್ಳಿ ಸಹ್ಯಾದ್ರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಬಸವಾನಿ ವಿಜಯದೇವ್ ಅವರು ವಿವಿಧ ಬಾಬತ್ತುಗಳಿಗೆ ಲಾಭಾಂಶ ತೆಗೆದಿರಿಸಿ ನಿವ್ವಳ 2 ಕೋಟಿ 75 ಲಕ್ಷ ರೂ. ಲಾಭವನ್ನು ತನ್ನ ಷೇರುದಾರರಿಗೆ ವರ್ಗಾಯಿಸುವ ದಿಟ್ಟ ನಿರ್ಧಾರ ಕೈಗೊಂ ಸಹ್ಯಾದ್ರಿ ಸಂಸ್ಥೆ ಸಹಕಾರ ರಂಗದ ಸಂಜೀವಿನಿಯಾಗಿ ಮೂಡಿದೆ ಎಂದರು.
2003ರಲ್ಲಿ ಶುರುವಾದ ಸಂಸ್ಥೆ
2003ರಲ್ಲಿ ಹಿರಿಯ ಸಹಕಾರಿ, ಸಹಕಾರಿ ರತ್ನ ಬಸವಾನಿ ವಿಜಯದೇವ್ ಮುಂದಾಳತ್ವದಲ್ಲಿ ಕೇವಲ 570 ಷೇರುದಾರರಿಂದ ಆರಂಭವಾಗಿರುವ ಸಹ್ಯಾದ್ರಿ ಸಂಸ್ಥೆ ಇಂದು ಹತ್ತು ಸಾವಿರಕ್ಕೂ ಅಧಿಕ ಷೇರುದಾರರನ್ನು ಹೊಂದಿ ನಿರೀಕ್ಷೆ ಮೀರಿ ಬೆಳೆದಿದೆ. ರಾಜ್ಯದ 29 ಜಿಲ್ಲೆಗಳಲ್ಲಿ ತನ್ನ ಕಾರ್ಯ ಬಾಹುವನ್ನು ಚಾಚಿಕೊಂಡಿದೆ. 14 ಕೋಟಿ 9 ಲಕ್ಷ ಷೇರು ಬಂಡವಾಳ, 63 ಕೋಟಿ 52 ಲಕ್ಷ ರೂ. ಸ್ಥಿರಾಸ್ತಿ ಹೊಂದಿ ಷೇರುದಾರರ ನಂಬಿಕೆಗೆ ಭದ್ರತೆಯಾಗಿ ನಿಂತಿರುವ ಸಹ್ಯಾದ್ರಿ ಸಂಸ್ಥೆ ಈ ವರ್ಷ 1,337 ಕೋಟಿ 64 ಲಕ್ಷ ರೂಪಾಯಿಗಳ ಭರ್ಜರಿ ವ್ಯವಹಾರ ಮಾಡಿ ಷೇರುದಾರರ ಮುಖದಲ್ಲಿ ಮಂದಹಾಸ ಮೂಡಿಸಿ ಸಂಸ್ಥೆಯ ಬುಡವನ್ನು ಇನ್ನಷ್ಟು ಗಟ್ಟಿ ಮಾಡಿದೆ ಎಂದು ಮಾಹಿತಿ ನೀಡಿದರು.
28 ಸಾವಿರ ಚೀಲ ಅಡಿಕೆ: ದಾಖಲೆಯ ವ್ಯವಹಾರ
ಎರಡು ದಶಕ ಪೂರೈಸಿರುವ ಸಹ್ಯಾದ್ರಿ ಸಂಸ್ಥೆ ಈಗ ‘ಎ’ ಗ್ರೇಡ್ ಆಡಿಟ್ ವರ್ಗೀಕರಣಕ್ಕೆ ಅರ್ಹವಾಗಿದ್ದು, ಸುಮಾರು 85 ಕೋಟಿ ಠೇವಣಿ ಸಂಗ್ರಹಿಸಿ, 135 ಕೋಟಿ ಸಾಲ ವಿತರಣೆ ಮಾಡಿ ಸೈ ಎನಿಸಿಕೊಂಡಿದೆ. ಮಲೆನಾಡು ಭಾಗದ ಅಡಿಕೆಬೆಳೆಗಾರರಿಗೆ ಅತ್ಯುತ್ತಮ ಮಾರುಕಟ್ಟೆ ಒದಗಿಸಿರುವ ಸಹ್ಯಾದ್ರಿ ಸೊಸೈಟಿ ಪೈಪೋಟಿಯ ವ್ಯವಹಾರದ ಮೂಲಕ ಹೆಚ್ಚು ಧಾರಣೆ ಒದಗಿಸಿ ಸದಾ ರೈತ ಸ್ನೇಹಿಯಾಗಿ ನಡೆದುಕೊಂಡು ಬಂದಿದೆ. ಈ ವರ್ಷ ರೈತರಿಂದ 28 ಸಾವಿರ ಚೀಲ ಅಡಿಕೆ ಬಂದಿದ್ದು,ದಾಖಲೆ ಪ್ರಮಾಣದ ವ್ಯಾಪಾರದಲ್ಲಿ ವ್ಯವಹಾರ ನಡೆದಿದೆ ಎಂಬ ಮಾಹಿತಿಯನ್ನು ನೀಡಿದರು.
ನೂರಾರು ಮಂದಿಗೆ ಉದ್ಯೋಗ
ಸಹ್ಯಾದ್ರಿ ಸಂಸ್ಥೆ ಇಂದು ಮಲೆನಾಡಿನ ಹೆಮ್ಮೆ ಸಹಕಾರ ಂಸ್ಥೆಯಾಗಿ ತಲೆ ಎತ್ತಿದ್ದು, ನೂರಾರು ನಿರುದ್ಯೋಗಿ ಯುವಕ, ಯುವತಿಯರಿಗೆ ನೌಕರಿ ನೀಡಿ ಅವರ ಕುಟುಂಬದ ಬೆಳವಣಿಗೆಯಲ್ಲಿ ಪಾಲುದಾರನಾಗಿರುವ ಸಾರ್ಥಕ ಭಾವವನ್ನು ಮೈತುಂಬಿಕೊಂಡಿದೆ.
ಹಲವು ವಿಶೇಷತೆಗಳ ಸಹ್ಯಾದ್ರಿ ಸಂಸ್ಥೆ ಇದೇ ಸೆಪ್ಟೆಂಬರ್ 17 ರಂದು ತನ್ನ ವಾರ್ಷಿಕ ಮಹಾಸಭೆಯನ್ನು ಗೋಪಾಲಗೌಡ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಬಸವಾನಿ ವಿಜಯದೇವ್, ಅರುಣ್ ಕುಮಾರ್, ಹಾಗೂ ಕಾವ್ಯ ಉಪಸ್ಥಿತರಿದ್ದರು.