ಶಿಮೂಲ್ 11.39 ಕೋಟಿ ನಿವ್ವಳ ಲಾಭ
– 2025-26ನೇ ಸಾಲಿನ ಹೊಸ ಯೋಜನೆ ಜಾರಿ: ಏನೇನು?
– ಸರ್ವರಿಗೂ ಶಿಮುಲ್ ಅಧ್ಯಕ್ಷ ಹೆಚ್.ಎನ್.ವಿದ್ಯಾಧರ ಅಭಿನಂದನೆ
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟದ (ಶಿಮುಲ್) ವಾರ್ಷಿಕ ಶಿಮೂಲ್ 11.39 ಕೋಟಿ ನಿವ್ವಳ ಲಾಭ ಗಳಿಸಿದೆ. ಈ ಮೂಲಕ ಶಿಮೂಲ್ ಮತ್ತೊಂದು ಸಾಧನೆ ಮಾಡಿದೆ.
ಶಿಮುಲ್ ಅಧ್ಯಕ್ಷ ಹೆಚ್.ಎನ್.ವಿದ್ಯಾಧರ ನಿವ್ವಳ ಲಾಭದ ಕುರಿತು ಮಾಹಿತಿ ನೀಡಿ, ಶಿಮುಲ್ ₹11.39 ಕೋಟಿ ನಿವ್ವಳ ಲಾಭ ಗಳಿಸಿದೆ. ನಿಯಮಾನುಸಾರ ಸದಸ್ಯ ಸಂಘಗಳಿಗೆ ಬೋನಸ್ ಹಾಗೂ ಡಿವಿಡೆಂಡ್ ಕೊಡಲಾಗುವುದು ಎಂದರು. ಒಕ್ಕೂಟದಲ್ಲಿ ನಿತ್ಯ 8.50 ಲಕ್ಷ ಲೀಟರ್ ಉತ್ತಮ ಗುಣಮಟ್ಟದ ಹಾಲಿನ ಶೇಖರಣೆಗೆ ನೆರವಾಗುತ್ತಿರುವ ಹಾಲು ಉತ್ಪಾದಕ ರೈತರಿಗೆ, ಸಂಘಗಳ ಕಾರ್ಯಕಾರಿ ಮಂಡಳಿ ಸದಸ್ಯರಿಗೆ, ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕರು, ಅಧಿಕಾರಿ, ಸಿಬ್ಬಂದಿ ವರ್ಗಕ್ಕೆ ಅಭಿನಂದನೆ ಸಲ್ಲಿಸಿದರು.
ಈ ವರ್ಷದ ಯೋಜನೆಗಳೇನು?
ಒಕ್ಕೂಟವು 2025-26ನೇ ಸಾಲಿಗೆ ಹಮ್ಮಿಕೊಂಡಿರುವ ಕಾರ್ಯ ಚಟುವಟಿಕೆ ಹಾಗೂ ಯೋಜನೆಯ ವಿವರಗಳನ್ನು ಶಿಮುಲ್ ವ್ಯವಸ್ಥಾಪಕ ನಿರ್ದೇಶಕ ಎಸ್.ಜಿ.ಶೇಖರ್ ಸಭೆಗೆ ಮಂಡಿಸಿದರು.
2025-26ನೇ ಸಾಲಿನಲ್ಲಿ ಒಕ್ಕೂಟದಿಂದ ಸದಸ್ಯ ಸಂಘಗಳಿಗೆ/ ಉತ್ಪಾದಕರಿಗೆ ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪಶು ಆಹಾರ ಮತ್ತು ಮೇವು ಅಭಿವೃದ್ಧಿ ಕಾರ್ಯಕ್ರಮ, ಕೃತಕಾ ಗರ್ಭಧಾರಣಾ ಕಾರ್ಯಕ್ರಮ, ಪಶು ಆರೋಗ್ಯ ಶಿಬಿರ, ತರಬೇತಿ/ ಶಿಬಿರ, ಸಹಕಾರ ಸೇವಾ ಹಾಗೂ ಶುದ್ಧ ಹಾಲು ಉತ್ಪಾದನಾ ಕಾರ್ಯಕ್ರಮ, ಮಾರುಕಟ್ಟೆ ಅಭಿವೃದ್ಧಿಗೆ ಪ್ರೋತ್ಸಾಹ ಧನ ನೀಡಲು ಹಾಗೂ ಪರಿಕರಗಳಿಗೆ ₹4.25 ಕೋಟಿ ಅನುದಾನ ನೀಡಲು ಯೋಜಿಸಲಾಗಿದೆ. ಶೇಖರಿಸುವ ಪ್ರತಿ ಕೆ.ಜಿ ಹಾಲಿಗೆ ₹1.49 ಅನುದಾನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪ್ರಸ್ತಾವಿತ ಹೊಸ ಯೋಜನೆಗಳು
– ತಡಗಣಿ ಶೀತಲೀಕರಣ ಕೇಂದ್ರದಲ್ಲಿ ₹1.99 ಕೋಟಿ ವೆಚ್ಚದಲ್ಲಿ ರೈತರ ಸಭಾಂಗಣ, ಹಾರ್ಡ್ ಪಾರ್ಕ್ ನಿರ್ಮಾಣ
– ಶಿವಮೊಗ್ಗ ಡೇರಿಗೆ ₹70 ಲಕ್ಷ ವೆಚ್ಚದಲ್ಲಿ 100 ಮೆ.ಟನ್ ಸಾಮರ್ಥ್ಯದ ಉಗ್ರಾಣ, ₹70 ಲಕ್ಷ ವೆಚ್ಚದಲ್ಲಿ ತರಬೇತಿ ಸಭಾಂಗಣ.
– ಹೊನ್ನಾಳಿ ಶೀತಲೀಕರಣ ಕೇಂದ್ರದಲ್ಲಿ ₹30 ಲಕ್ಷ ವೆಚ್ಚದಲ್ಲಿ ರೈತರ ಸಭಾಂಗಣ ನಿರ್ಮಾಣ
– ದಾವಣಗೆರೆ ತಾಲ್ಲೂಕು ಎಚ್.ಕಲಪನಹಳ್ಳಿ ಬಳಿ 14 ಎಕರೆಯಲ್ಲಿ ₹280 ಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ನಿತ್ಯ 5 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೇರಿ ನಿರ್ಮಾಣ.
– ₹ 22 ಕೋಟಿ ವೆಚ್ಚದಲ್ಲಿ ಶಿವಮೊಗ್ಗ ಡೇರಿಯಲ್ಲಿ ಪ್ರತ್ಯೇಕವಾಗಿ ಸಿಹಿ ಉತ್ಪನ್ನಗಳ ಉತ್ಪಾದನಾ ಘಟಕ.
– ಚಿತ್ರದುರ್ಗ ಜಿಲ್ಲೆಯಲ್ಲಿ ನಿತ್ಯ 2 ಲಕ್ಷ ಲೀಟರ್ ಸಾಮರ್ಥ್ಯದ ಸುಸಜ್ಜಿತ ಹಾಲು ಶೀಥಲೀಕರಣ ಕೇಂದ್ರ ನಿರ್ಮಾಣ
ಸಂಘಗಳಿಗೆ ಬಹುಮಾನ ವಿತರಣೆ
ಶಿಮುಲ್ ವ್ಯಾಪ್ತಿಯಲ್ಲಿ ಚಾಂಪಿಯನ್ ಸಂಘವಾಗಿ ಹಿರಿಯೂರು ತಾಲ್ಲೂಕಿನ ಧರ್ಮಪುರ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಹಾಗೂ ಅತ್ಯುತ್ತಮ ಮಹಿಳಾ ಚಾಂಪಿಯನ್ ಸಂಘವಾಗಿ ಶಿಕಾರಿಪುರ ತಾಲ್ಲೂಕಿನ ಬೇಗೂರು ಹಾಲು ಉತ್ಪಾದಕರ ಸಂಘವನ್ನು ಹಾಗೂ ಅತ್ಯುತ್ತಮ ಬಿ.ಎಂ.ಸಿ ಆಗಿ ಹಿರಿಯೂರು ತಾಲ್ಲೂಕಿನ ಮರಡಿಹಳ್ಳಿ ಸಂಘಗಳು ಆಯ್ಕೆಯಾಗಿದ್ದು, ಬಹುಮಾನ ವಿತರಿಸಲಾಯಿತು.
ಶಿಮುಲ್ ಉಪಾಧ್ಯಕ್ಷ ಚೇತನ್ ಎಸ್.ನಾಡಿಗರ, ನಿರ್ದೇಶಕರಾದ ಆರ್.ಎಂ.ಮಂಜುನಾಥ ಗೌಡ, ಹೆಚ್.ಬಿ.ದಿನೇಶ್, ಡಿ.ಆನಂದ, ಜಗದೀಶಪ್ಪ ಬಣಕಾರ್, ಟಿ.ಶಿವಶಂಕರಪ್ಪ, ಹೆಚ್.ಕೆ.ಬಸಪ್ಪ, ಬಿ.ಜಿ.ಬಸವರಾಜಪ್ಪ, ಬಿ.ಆರ್.ರವಿಕುಮಾರ್, ಬಿ.ಸಿ.ಸಂಜೀವ ಮೂರ್ತಿ, ಟಿ.ಎಸ್.ದಯಾನಂದ ಗೌಡ್ರು, ಜಿ.ಬಿ.ಶೇಖರಪ್ಪ, ಬಿ.ಸಿ.ಸಂಜೀವಮೂರ್ತಿ, ನಾಮನಿರ್ದೇಶಿತ ನಿರ್ದೇಶಕ ಎಸ್.ಕುಮಾರ್, ವ್ಯವಸ್ಥಾಪಕ ಸುರೇಶ್ ಹುಳ್ಳಿ ಉಪಸ್ಥಿತರಿದ್ದರು.








