ವೀರೇಶ್ ರಾಜ್ಯದ ಬೆಸ್ಟ್ ಟೀಚರ್!
– ಶಿಕ್ಷಕರಾಗಿ, ಮಾರ್ಗದರ್ಶಕರಾಗಿ, ಶಾಲೆ ಕಟ್ಟುವ ಕಟ್ಟಾಳುವಾಗಿ ಸೇವೆ
– ಸಾವಿರಾರು ಮಕ್ಕಳ ಬದುಕಲ್ಲಿ ಬೆಳಕು: ಸೇವೆಗೆ ಸಂದ ಫಲ
– ರಾಜ್ಯ ಮಟ್ಟದಲ್ಲಿ ಮತ್ತೆ ಹೊಸೂರು ಗುಡ್ಡೇಕೇರಿ ಸರ್ಕಾರಿ ಪ್ರೌಢಶಾಲೆ ಸಾಧನೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯ ಶಿಕ್ಷಕ ವೀರೇಶ್ ಅವರಿಗೆ ಈ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದು, ಎಲ್ಲೆಡೆ ಪ್ರಶಂಸೆ, ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ರಾಜ್ಯದಲ್ಲಿ ತನ್ನ ವಿಶೇಷ ಅಭಿವೃದ್ಧಿ, ಸಾಧನೆ ಮೂಲಕವೇ ಗುರುತಿಸಿಕೊಂಡಿರುವ ಹೊಸೂರು ಗುಡ್ಡೇಕೇರಿಯ ಸರ್ಕಾರಿ ಪ್ರೌಢ ಶಾಲೆ ಇದೀಗ ಮತ್ತೊಂದು ಐತಿಹಾಸಿಕ ದಾಖಲೆ ಮಾಡಿದೆ.
ಸರ್ಕಾರಿ ಶಾಲೆಗಳೂ ಹೀಗೆ ಇರಬಹುದು ಎಂದು ತೋರಿಸಿಕೊಟ್ಟ ದೊಡ್ಡ ಸಾಧಕರ ತಂಡವೆ ಇಲ್ಲಿದೆ. ಈಗಾಗಲೇ ಶಾಲೆಯ ಮುಖ್ಯ ಉಪಾಧ್ಯಾಯರಾದ ಮಂಜು ಬಾಬು ಪೂಜಾರ್ ರಾಜ್ಯ ಮಟ್ಟದಲ್ಲಿ ವಯುಕ್ತಿ ಹಾಗೂ ಶಾಲೆಗೆ ಅನೇಕ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ನಡುವೆ ವೀರೇಶ್ ಅವರ ಈ ಸಾಧನೆ ಶಾಲೆಗೆ ಮತ್ತಷ್ಟು ಪ್ರೇರಣೆ ನೀಡಿದೆ.
ಅಪರೂಪದ ಶಿಕ್ಷಕ ವೀರೇಶ್
ವೀರೇಶ್ ಎಂದೂ ಪ್ರಶಸ್ತಿಯ ಬೆನ್ನತ್ತಿ ಹೋದವರಲ್ಲ. ಆದರೆ ಶಾಲಾ ಮಕ್ಕಳಿಗೆ ಆಸರೆಯಾಗಿ, ಬದುಕುವ ಭರವಸೆಯಾದವರು. ಶಾಲೆಯನ್ನೂ ದಾಟಿ ಸಮಾಜದ ಜನರಿಗೆ, ಸ್ಥಳೀಯ ಜನರ ಜೀವನಕ್ಕೆ ಹೆಗಲಾಗಿ, ಅವರ ಹೃದಯದಲ್ಲಿ ನೆಲೆ ನಿಂತು, ಅವರ ಬದುಕಲ್ಲಿ, ಜನರ ನಾಲಿಗೆಯಲ್ಲಿ ನಿಂತವರು. ವೀರೇಶ್ ಸಮಾಜ ವಿಜ್ಞಾನ ಶಿಕ್ಷಕರಾಗಿ ಶಾಲಾ ಮಕ್ಕಳ ಕಲಿಕೆಯಲ್ಲಿ ಅದ್ವಿತೀಯತೆಯನ್ನು, ತಮ್ಮ ಕ್ರೀಢಾ ಹುಚ್ಚಿನಿಂದ ಮಕ್ಕಳ ಕ್ರೀಡಾ ಭವಿಷ್ಯವನ್ನೂ, ಸಮಾಜ ಮುಖಿ ಕೆಲಸದಿಂದ ಅನೇಕ ವ್ಯಕ್ತಿಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಆಯ್ಕೆಗೆ ಮಾರ್ಗದರ್ಶವನ್ನೂ ಮಾಡಿ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿದ್ದಾರೆ.
ಸಮಾಜ ವಿಜ್ಞಾನದಲ್ಲಿ ಶೇ.100 ಫಲಿತಾಂಶ: ಬೆಸ್ಟ್ ಟೀಚರ್
ಕಳೆದ ಹದಿನಾಲ್ಕು ವರ್ಷಗಳಲ್ಲಿ ಬೆರಗಾಗುವಂತೆ ಪ್ರತಿ ವರ್ಷ ಶೇ 100 ಫಲಿತಾಂಶ, ಒಮ್ಮೆ ಮಾತ್ರ ಶೆ 98 ಶಾಲಾ ಫಲಿತಾಂಶವನ್ನು ತಮ್ಮ ವಿಷಯದಲ್ಲಿ ನೀಡಿದ್ದಾರೆ. ಅಕ್ಕ ಪಕ್ಕದ ಶಾಲೆಯ ಮಕ್ಕಳೂ ಇವರ ಬಳಿ ಬಂದು ಕಲಿಕೆಯ ಟಿಪ್ಸ್ ಪಡೆದು ಸಮಾಜ ವಿಜ್ಞಾನ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದಾರೆ.
ರಾಜ್ಯ ಮಟ್ಟದ ಕಲಿಕಾ ವಿಷಯದ ಸ್ಪರ್ಧೆಗಳ ಬಹುಮಾನಗಳು: ಸತತ ಏಳು ವರ್ಷಗಳಿಂದ ಪ್ರಾಚ್ಯ ಪ್ರಜ್ಞೆಯಲ್ಲಿ ಜಿಲ್ಲಾ ಮಟ್ಟದ/ರಾಜ್ಯಮಟ್ಟದ ಬಹುಮಾನ ಗ್ರಾಮೀಣ ಸರ್ಕಾರೀ ಶಾಲಾ ಮಕ್ಕಳಿಗೆ ದೊರೆಯುವಂತೆ ತರಬೇತಿ ಗೊಳಿಸಿದ್ದಾರೆ. ಎಲ್ಲಾ ಖಾಸಗೀ ಪ್ರತಿಷ್ಟಿತ ನಗರ ಶಾಲೆಗಳ ಮಕ್ಕಳೊಟ್ಟಿಗೆ ಸ್ಪರ್ಧಿಸಿ ಎರಡು ಸಲ ಪ್ರಾಚ್ಯಪ್ರಜ್ಞೆ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಬಹುಮಾನ ಬರುವಂತೆ ಕಲಿಸಿದ್ದಾರೆ. ಒಮ್ಮೆ ತೃತೀಯ ಬಹುಮಾನ ಮತ್ತೊಮ್ಮೆ ಪ್ರಥಮ ಬಹುಮಾನ ಬಂದಿರುವುದು ಹೆಮ್ಮೆಯ ವಿಷಯ. ಭರತ್ ಎಂಬ ವಿ್ಯಾರ್ಥಿಯನ್ನು ಅವನ ಹಿನ್ನೆಲೆಯನ್ನು ಗಮನಿಸಿ ಮನೆಯಲ್ಲಿ ಒಂದು ತಿಂಗಳು ಇರಿಸಿಕೊಂಡು ಕಲಿಸಿ ರಾಜ್ಯ ಮಟ್ಟದ ಪ್ರಥಮ ಬಹುಮಾನ ಬರುವಂತೆ ತರಬೇತಿ ಗೊಳಿಸಿದ್ದರು.
ಸಮಾಜ ವಿಜ್ಞಾನ ವಿಷಯದ ಪ್ರಬಂಧ ಸ್ಪರ್ಧೆಯ ವಿಶೇಷವೆಂದರೆ 2021-22ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ಖಾಸಗೀ ಮತ್ತು ಸರ್ಕಾರೀ ಶಾಲೆಗಳೊಟ್ಟಿಗೆ ಸ್ಪರ್ಧಿಸಿ ಎಲ್ಲಾ ಬಹುಮಾನಗಳನ್ನೂ ಎಂದರೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನೂ ಮಲೆನಾಡಿನ ದೂರದ ಕುಗ್ರಾಮ ಸರ್ಕಾರೀ ಪ್ರೌಢಶಾಲೆ, ಗುಡ್ಡೇಕೇರಿಯೇ ಗಳಿಸಲು ವೀರೇಶ್ ಶ್ರಮ ಅಪಾರ. ಕನ್ನಡ ಮಾಧ್ಯಮ ವಿದ್ಯಾರ್ಥಿನಿ ರಾಜ್ಯಮಟ್ಟದ ಆಂಗ್ಲ ಮಾಧ್ಯಮ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದಿದ್ದೂ ವಿಶೇಷ. ರಾಜ್ಯ ಮಟ್ಟದ ಚುನಾವಣಾ ಕ್ವಿಜ್ ಅಲ್ಲಿ ಈ ಶಾಲೆಯ ಮಕ್ಕಳು ಒಮ್ಮೆ ಪ್ರಥಮ ಮತ್ತೊಮ್ಮೆ ದ್ವಿತೀಯ ಬಹುಮಾನ ಗಳಿಸಿದ್ದಾರೆ.
ಶಾಲೆಬಿಟ್ಟ ಮಕ್ಕಳು ಮತ್ತು ನಿರಾಶ್ರಿತರಿಗೆ ಪೋಷಕರಾದ್ರು!
ದೂರದೂರಿನ ನಿರಾಶ್ರಿತ ಮಕ್ಕಳು ದೊರಕಿದಲ್ಲಿ ಇವರ ಮನೆಯೇ ಆಶ್ರಯ. ಈಗ ಆಗುಂಬೆಯ ಹಾಸ್ಟೆಲ್ ಅಲ್ಲಿ ಉಳಿಸುವ ವ್ಯವಸ್ಥೆ ಆಗಿದೆ. ಬಿಜಾಪುರದಿಂದ ಕೋಲಾರದ ತನಕ ಕನಿಷ್ಟ 30 ಜನ ಮಕ್ಕಳು ಗುಡ್ಡೇಕೇರಿ ಶಾಲೆಯಲ್ಲಿ ಓದುತ್ತಿದ್ದಾರೆ. ಹೆಣ್ಣು ಮಕ್ಕಳು, ನಿರಾಶ್ರತರು ಹೀಗೆ ತರಹೇವಾರಿ ಹಿನ್ನೆಲೆಯ ಮಕ್ಕಳಿಗೆ ಪೋಷಕರಾಗಿ, ಶಿಕ್ಷಕರಾಗಿ ವೀರೇಶ್ ಮತ್ತು ಮುಖ್ಯ ಶಿಕ್ಷಕರು ಅವರ ಬೇಕು ಬೇಡಗಳಿಗೆ ಸ್ಪಂದಿಸುತ್ತಾ ಕಲಿಸುತ್ತಿದ್ದಾರೆ.
ಕ್ರೀಡೆಯಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆ
ವೀರೇಶ್ ಅವರಿಗೆ ಆಟೋಟ ಎಂಬುದೊಂದು ಪ್ಯಾಶನ್/ಹುಚ್ಚು. ದಾನಿಗಳನ್ನು ಹಿಡಿದು ಪ್ರತಿ ವರ್ಷ ಒಂದುವರೆ ಲಕ್ಷದ ಮೊತ್ತದಲ್ಲಿ 30 ರಿಂದ 40 ಮಕ್ಕಳಿಗೆ ಹೊಸ ಟ್ರ್ಯಾಕ್ ಸೂಟ್ ಕೊಡಿಸುತ್ತಾರೆ. ಗ್ರಾಮೀಣ ಶಾಲಾ ಮಕ್ಕಳು ಬಟ್ಟೆಗಳಿಂದ ಕೀಳಿರಿಮೆ ಅನುಭವಿಸಬಾರದು ಎಂಬುದೇ ಇವರು ಮತ್ತು ಮುಖ್ಯ ಶಿಕ್ಷಕ ಮಂಜುಬಾಬು ಅವರ ಇಚ್ಛೆ. ಚೆನ್ನಾಗಿ ಆಡುವ ಮಕ್ಕಳನ್ನು ಮನೆಯಲ್ಲಿಟ್ಟುಕೊಂಡು ತರಬೇತಿ ನೀಡುವ ಆಸಕ್ತಿಯುಂಟು. ಆಟೋಟಕ್ಕಾಗಿ ಬೆಳಗ್ಗೆ ಐದರಿಂದ ಸಂಜೆ ಏಳರ ನಕ ಶಾಲಾ ಸಮಯ ಮೀಸಿರಿಸುತ್ತಾರೆ.
ದೀಕ್ಷಿತ್ ಮತ್ತು ಸಾನಿಕ ರಾಷ್ಟ್ರ ಮಟ್ಟದ ಕ್ರೀಡೆಯಲ್ಲಿ ಸ್ಪರ್ಧಿಸುವಂತೆ ತರಬೇತಿ ನೀಡಿದ್ದಾರೆ. ಪ್ರತಿ ದಿನ 100 ಕಿಮೀ ದೂರದ ಶಿವಮೊಗ್ಗಕ್ಕೆ ರಜೆಯಲ್ಲಿ ಮಕ್ಕಳನ್ನು ಕರೆದೊಯ್ದು ಸಿಂತೆಟಿಕ್ ಟ್ರ್ಯಾಕ್ ಅಭ್ಯಾಸ ಮಾಡಿಸುತ್ತಾರೆ. ಇದಕ್ಕಾಗಿ ತಮ್ಮ ಮನೆಯ ಸಮಯ, ಹಗಲು ರಾತ್ರಿ ವಿನಿಯೋಗಿಸುತ್ತಾರೆ. ಇದರ ಪರಿಣಾಮ ಶಾಲೆ ಕಳೆದ ಐದು ವರ್ಷದಿಂದ ತಾಲ್ಲೂಕು ಸಮಗ್ರ ಪ್ರಶಸ್ತಿಯನ್ನು ಆಟೋಟದಲ್ಲಿ ಗಳಿಸುತ್ತಿದೆ. ವಾಲಿಬಾಲ್ ಮತ್ತು ಖೋ ಖೋ ಅಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುತ್ತಿರುತ್ತದೆ. ಅತ್ಯುತ್ತಮ ಕ್ರೀಡಾಂಗಣ : 150 ಲೋಡ್ ಮಣ್ಣು, ದರಗು ಮತ್ತು ಮರಳನ್ನು ಹಾಕಿಸಿ ಅತ್ಯುತ್ತಮ ಕ್ರೀಡಾಂಗಣವನ್ನು ಸ್ಪೆಸಿಫಿಕೇಶನ್ ರೀತ್ಯ ತಯಾರಿಸಿದ್ದಾರೆ.
ಉದ್ಯೋಗ, ವ್ಯಕ್ತಿತ್ವ ವಿಕಸನಕ್ಕೆ ಸಹಾಯ
ಸ್ಪರ್ಧಾತ್ಮಕ ಪರೀಕ್ಷೆಗಳಿಂದ ಯುವಕರ ಭವಿಷ್ಯ ನಿರ್ಮಾತೃ : ಸ್ವತಹ 9 ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗಿ ಪ್ರೀತಿಯ ಶಿಕ್ಷಕ ವೃತ್ತಿ ಆಯ್ಕೆ ಮಾಡಿಕೊಂಡು ಗ್ರಾಮೀಣ ಯುವಕರನ್ನು ಗುರುತಿಸಿ, ಅವರ ಪ್ರಗತಿ ಟ್ರ್ಯಾಕ್ ಮಾಡಿ 30 ಮಕ್ಕಳನ್ನು ದೆಹಲಿ, ಬೆಂಗಳೂರು ಇಲ್ಲಿಗೆ ಯು.ಪಿ.ಎಸ್.ಸಿ & ಕೆ.ಪಿ.ಎಸ್.ಸಿ ಕೋಚಿಂಗ್ ಕಳಿಸಿದ್ದಾರೆ. ಶರತ್, ಸುಮಂತ್ ಅಂತಹಾ ಮಕ್ಕಳನ್ನು ಮನೆಯಲ್ಲಿರಿಸಿಕೊಂಡು ಕೋಚಿಂಗ್ ನೀಡಿ ಉದ್ಯೋಗ ಹೊಂದುವಂತೆ ತರಬೇತಿ ನೀಡಿದ್ದಾರೆ. 09 ಜನರು ಇವರ ಮೂಸೆಯಲ್ಲಿ ತರಬೇತಿ ಪಡೆದು ಸರ್ಕಾರಿ ನೌಕರರಾಗಿ ಸೇವೆಯಲ್ಲಿದ್ದಾರೆ. ಇವರೂ, ಮಂಜುಬಾಬು ಮತ್ತು ಸುಬ್ರಮಣ್ಯ ಸೇರಿ ಊರಿಗೆ ಪ್ರೇರಣಾದಾಯಕ ವ್ಕ್ತಿಗಳನ್ನು ಕರೆಸಿ ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್ ಕೊಡಿಸಿದ್ದಾರೆ.
ಶಾಲೆಯ ಅಭಿವೃದ್ಧಿಗೆ ಬೆನ್ನೆಲುಬು!
ಶಾಲಾ ಧ್ವಜ ಸ್ತಂಭ : ಸಾರನಾಥದ ರೆಪ್ಲಿಕಾ ಮಾದರಿಯಲ್ಲಿ ಅತ್ಯುತ್ತಮ ಧ್ವಜ ಸ್ತಂಭದ ಪ್ರೇರಕ ಶಕ್ತಿ ಮತ್ತು ನಿರ್ಮಾತೃ ಶ್ರೀ ವೀರೇಶ್. ನೋಡಿದರೆ ಜಿಲ್ಲೆಯಲ್ಲಿ ಎಲ್ಲಿಯೂ ಇಲ್ಲದ ಸ್ತಂಭವು ಕಣ್ಮನ ಸೆಳೆಯುವುದಲ್ಲದೇ ರಾಷ್ಟ್ರ ಲಾಂಛನದ ಬಗ್ಗೆ ಸ್ವ ಗೌರವ ಮತ್ತು ಹೆಮ್ಮೆಯನ್ನು ಮೂಡಿಸುವಂತಿದೆ. ಇದಕ್ಕೆ ಮುಖ್ಯ ಶಿಕ್ಷಕ ಮಂಜುಬಾಬು ಅವರ ಪ್ರೇರಣೆ ಮತ್ತು ಬೆಂಬಲವೂ ಇದೆ. ದಾನಿಗಳನ್ನು ಹಿಡಿದು ಎಲ್ಲಾ ತರಗತಿ ಕೊಠಡಿಗಳೂ ಸ್ಮಾರ್ಟ್ ಕ್ಲಾಸ್ ಆಗಿವೆ. ಒಂದು ಕೊಠಡಿ ಸ್ವಕಲಿಕಾ ರೀತಿಯಿದ್ದು ಅಲ್ಲಿ ದುಂಡು ಟೇಬಲ್ ಹಾಕಿಸಿ ಕಲಿಕಾ ಕೇಂದ್ರಿತ ಮಾದರಿಯಲ್ಲಿ ಅಟ್ಟದಲ್ಲಿ ರೂಪಿಸಿದ್ದು ಬಹಳ ಅಪ್ಯಾಯದಾಯಕ. ಶಾಲೆಗೆ ಒಂದುವರೆ ಕೋಟಿ ದೇಣಿಗೆ ಜನರಿಂದ, ಒಂದು ಕೋಟಿ ಸರ್ಕಾರದ ಅನುದಾನ, ಹೀಗೆ ಎರಡುವರೆ ಕೋಟಿ ವಿನಿಯೋಗಿಸಿದೆ. ಇದರಲ್ಲಿ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರೆಲ್ಲರ ತಂಡದ ವಿನಿಯೋಗವಿದೆ. ಅಂಟಿಗೆ ಪಿಂಟಿಗೆ ಉಪಕ್ರಮ ರೂಪಿಸಿ ಸ್ವತಃ ಶಿಕ್ಷಕರು ಪ್ರತಿ ಮನೆಯನ್ನು ಇಡೀ ರಾತ್ರಿ ಸಂಪರ್ಕಿಸುವ ಕಾರ್ಯ ಮತ್ತು ದಾನ ಸಂಗ್ರಹದ ಕೆಲಸ ಮಾಡುತ್ತಾರೆ. ಈ ಶಾಲೆ ಒಂದು ಮ್ಯುಸಿಯಂ. ಇಡೀ ಶಾಲೆ ಒಂದು ಕ್ರೀಡಾಂಗಣ. ಇಡೀ ಶಾಲೆ ಒಂದು ಹೃದಯಾಪ್ತ ಕೇಂದ್ರ. ಮಕ್ಕಳ ಮಾನಸಿಕ ಸುರಕ್ಷಿತ ತಾಣವಾಗಿದೆ. ಒಳ ಮತ್ತು ಹೊರ ಕ್ರೀಡಾಂಗಣ, ಊಟದ ಹಾಲ್, ಚೆಂದದಾ ಲೈಬ್ರರಿ, ಊರಿನ ಆಪ್ತ ಸಲಹಾ ಕೇಂದ್ರ ಹೀಗೆ ಶಾಲೆ ಹಲವು ಮಜಲುಗಳಲ್ಲಿ ತಂಡವಾಗಿ ಬದಲಾಗಿದೆ. ಆಕರ್ಷಕ ತೆರೆದ ಗ್ರಂಥಾಲಯ ಕೊಠಡಿಯನ್ನು ರೂಪಿಸಿದ್ದು ಮಕ್ಕಳು ತಮಗೆ ಆಸಕ್ತಿಯಿರುವ ಪುಸ್ತಕವನ್ನು ಆಯ್ದುಕೊಳ್ಳಬಹುದಾಗಿದೆ. ಮಾದರಿ ಶಾಲೆಯಾಗಿ ಮಾಡುವಲ್ಲಿ ಶಿಕ್ಷಕರು, ಸಮುದಾಯ ಪ್ರಯತ್ನಿಸುತ್ತಿದೆ.
ವಿದ್ಯಾಭ್ಯಾಸ ಎಲ್ಲೆಲ್ಲಿ?
ಪ್ರಾಥಮಿಕ ಶಿಕ್ಷಣ ಮಲ್ಲಾಪುರ ಗೊಲ್ಲರ್ಟಿ, ಪ್ರೌಢ ಶಿಕ್ಷಣ ವಿದ್ಯಾಭಾರತಿ ್ಞಾನ ಮಂದಿರ ಪ್ರೌಢಶಾಲೆ ಚಿತ್ರದುರ್ಗ, ಪದವಿ ಎಸ್ ಜೆ ಎಂ ಪದವಿ ಕಾಲೇಜು ಚಿತ್ರದುರ್ಗ ಪ್ರಥಮ (ಪ್ರಥಮ ಸ್ಥಾನ), ಬಿ ಇ ಡಿ – ಸರ್ಕಾರಿ ಸಹ ಶಿಕ್ಷಕರ ತರಬೇತಿ ಸಂಸ್ಥೆ ಚಿತ್ರದುರ್ಗ, ಎಂ.ಎ ದಾವಣಗೆರೆ ವಿಶ್ವವಿದ್ಯಾನಿಲಯ, ಕೆಸೆಟ್ ಸಮಾಜ ವಿಜ್ಞಾನ ಮಾಡಿದ್ದಾರೆ.
ಪ್ರೌಢ ಶಾಲೆ ವೇಳೆ ಗಣಿತ ಶಿಕ್ಷಕ ನಿರಂಜನ್ ಅವರು ವೀರೇಶರವರ ಪ್ರತಿಭೆಯನ್ನು ಗುರುತಿಸಿ ಅವರ ಮನೆಯಲ್ಲಿ ಇಟ್ಟುಕೊಂಡು ಮಾರ್ಗದರ್ಶನ ನೀಡಿ ಬೆಂಬಲವಾಗಿ ನಿಂತು ಓದುವುದಕ್ಕೆ ಸಹಾಯ ಮಾಡಿದರು. ಹಾಗೆಯೇ ಚಾಣಕ್ಯ
ಕರಿಯರ್ ಬಿಜಾಪುರ ನಿರ್ದೇಶಕರಾದ ಎನ್.ಎಮ್. ಬಿರಾದರ್ ಇವರ ಪ್ರಭಾವವು ಹೆಚ್ಚು ಹೆಚ್ಚು ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗಿ ಕಾರಣವಾಯಿತು ಎನ್ನುತ್ತಾರೆ ವೀರೇಶ್.
ತಂದೆ ಪುಟ್ಟಣ್ಣ, ತಾಯಿ ಈರಮ್ಮ, ಪತ್ನಿ ಸಿಂಧು ಕೆ ಇವರ ಸಾಧನೆಗೆ ಕಾರಣರಾಗಿದ್ದಾರೆ. ಅರುಶ್ ಚಾಣಕ್ಯ, ತನಿಷ್ಕ ವೀರ್ ತಂದೆಯ ಹಾದಿಯಲ್ಲೇ ಬೆಳೆಯುತ್ತಿದ್ದಾರೆ.
ಶುಭಾಶಯಗಳ ಮಹಾಪೂರ
ರಾಜ್ಯದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ವೀರೇಶ್ ಅವರಿಗೆ ಗುಡ್ಡೆಕೇರಿ ಶಾಲೆಯ ಮುಖ್ಯ ಉಪಧ್ಯಾಯರು, ಶಿಕ್ಷಕರು, ಸಿಬ್ಬಂದಿ, ಶಾಲಾ ಅಭಿವೃದ್ಧಿ ಸಮಿತಿ, ಲಲಿತಮ್ಮ ಚಾರಿಟಬಲ್ ಟ್ರಸ್ಟ್, ಬಾಲಾಜಿ ಸ್ಪೋರ್ಟ್ಸ್ ಕ್ಲಬ್, ಸ್ಥಳೀಯರು, ವಿದ್ಯಾರ್ಥಿಗಳು, ಪೋಷಕರು, ಹಳೆ ವಿದ್ಯಾರ್ಥಿಗಳು ಶುಭಾಶಯ ಕೋರಿದ್ದಾರೆ.