ತೀರ್ಥಹಳ್ಳಿ ತಾಲೂಕಲ್ಲಿ ಸೆ. 29ಕ್ಕೆ ಎಲ್ಲೆಲ್ಲಿ ಏನೇನು?
- ನಿಮ್ಮೂರಲ್ಲಿ ಏನೇನು..? ಇಲ್ಲಿದೆ ಪ್ರತಿ ದಿನದ ಅಪ್ಡೇಟ್
- ಸಾಹಿತಿ ಎಸ್ ಎಲ್ ಭೈರಪ್ಪನವರಿಗೆ ನುಡಿ ನಮನ
ತೀರ್ಥಹಳ್ಳಿ: ಸೆಪ್ಟೆಂಬರ್ 24 ರಂದು ನಿಧನರಾದ ನಾಡಿನ ಹೆಸರಾಂತ ಸಾಹಿತಿ ಎಸ್ ಎಲ್ ಭೈರಪ್ಪನವರಿಗೆ ಶಾಸಕರಾದ ಆರಗ ಜ್ಞಾನೇಂದ್ರ ರವರ ಅಧ್ಯಕ್ಷತೆಯಲ್ಲಿ ತೀರ್ಥಹಳ್ಳಿ ತಾಲ್ಲೂಕು ಆಡಳಿತ ವತಿಯಿಂದ ನುಡಿನಮನ ಕಾರ್ಯಕ್ರಮ ಆಯೋಜಿಸಲಾಗಿದೆ.
ಸೆಪ್ಟೆಂಬರ್ 29 ರ ಸೋಮವಾರ ಮಧ್ಯಾಹ್ನ 3 ಘಂಟೆಗೆ ತೀರ್ಥಹಳ್ಳಿ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯುವ ಈ ನುಡಿ ನಮನ ಕಾರ್ಯಕ್ರಮಕ್ಕೆ ಸಾರ್ವಜನಿಕರು ಸಾಹಿತ್ಯಾಸಕ್ತರು, ಸರ್ಕಾರಿ ನೌಕರರು,ವಿವಿಧ ಸಂಘ ಸಂಸ್ಥೆಗಳ ಹಾಗು ರಾಜಕಿಯ ಪಕ್ಷಗಳ ಅಧ್ಯಕ್ಷರು ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರದ್ಧಾಂಜಲಿ ಸಲ್ಲಿಸಬೇಕಾಗಿ ಶಾಸಕರಾದ ಆರಗ ಜ್ಞಾನೇಂದ್ರರವರು, ತಹಶೀಲ್ದಾರ್ ರಂಜಿತ್ ರವರು ಎಲ್ಲರಲ್ಲೂ ವಿನಂತಿಸಿದ್ದಾರೆ.
ಶ್ವಾನಗಳಿಗೆ ಉಚಿತ ರೇಬಿಸ್ ಲಸಿಕಾ
29/9/2025 ರಂದು (ಸೋಮವಾರ) ಪಶು ಆಸ್ಪತ್ರೆ,ತೀರ್ಥಹಳ್ಳಿಯಲ್ಲಿ ಶ್ವಾನಗಳಿಗೆ ಉಚಿತ ರೇಬಿಸ್ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶ್ವಾನ ಮಾಲೀಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಶ್ವಾನಗಳನ್ನು ತಂದು ರೇಬಿಸ್ ಲಸಿಕೆಯನ್ನು ಹಾಕಿಸಿಕೊಳ್ಳಬೇಕಾಗಿ ಇಲಾಖೆ ಮನವಿ ಮಾಡಿದೆ.
“ಯುವ ದಸರಾ”ದ “ಯುವ ಸೌರಭ” ಸಾಂಸ್ಕೃತಿಕ ಕಾರ್ಯಕ್ರಮ
ಸೆ. 29ರ ಸೋಮವಾರ ಕುಶಾವತಿಯ ನೆಹರು ಪಾರ್ಕಿನಲ್ಲಿ ನಿರ್ಮಾಣವಾದ ಬೃಹತ್ ವೇದಿಕೆಯಲ್ಲಿ “ಯುವ ದಸರಾ” ದ “ಯುವ ಸೌರಭ” ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.ಶಿವಮೊಗ್ಗ ಜಿಲ್ಲೆಯ ಅನೇಕ ಯುವ ಪ್ರತಿಭೆಗಳು ಈ ವೇದಿಕೆಯಲ್ಲಿ ತಮ್ಮ ಕಾರ್ಯಕ್ರಮ ನೀಡಲಿದ್ದಾರೆ. ಮೊಟ್ಟ ಮೊದಲಬಾರಿಗೆ ಈ ಬಾರಿ ದಸರಾ ಉತ್ಸವಕ್ಕೆ ವಿಶೇಷ ಮೆರಗು ನೀಡುವ ಚಿತ್ರಕಲಾ ಮತ್ತು ಛಾಯಾಚಿತ್ರ ಪ್ರದರ್ಶನಗಳ “ಕಲಾ ದಸರಾ” ಕುಶಾವತಿ ನೆಹರು ಪಾರ್ಕಿನಲ್ಲಿ ಆಯೋಜನೆಗೊಂಡಿದ್ದು ತೀರ್ಥಹಳ್ಳಿಯ ಅನೇಕ ಕಲಾವಿದರ ಕಲಾಕೃತಿಗಳ ಪ್ರದರ್ಶನ ಆಯೋಜಿಸಲಾಗಿದೆ. ದಿ:-29-09-2025 ರಿಂದ ನಾಲ್ಕು ದಿನಗಳ ಕಾಲ ನಡೆಯುವ ಈ ಕಲಾ ಪ್ರದರ್ಶನವನ್ನು ಬೆಂಗಳೂರಿನ ಖ್ಯಾತ ಪಿಡಿಲಿಟಿಸ್ ಮಾಲೀಕ ಅಚ್ಚುತ್ ಗೌಡ ರವರು ಉದ್ಘಾಟಿಸಲಿದ್ದಾರೆ.
ತೀರ್ಥಹಳ್ಳಿಯಲ್ಲಿ ಉಚಿತ ಕಿವಿಯ ಶ್ರವಣ ತಪಾಸಣೆ
ತೀರ್ಥಹಳ್ಳಿ: 29.09.2025 ಸೋಮವಾರ ಬೆಳಗ್ಗೆ 10:00 ರಿಂದ 5:00 ರವರೆಗೆ ಲಯನ್ಸ್ ಭವನ ತುಂಗಾ ತೀರ ಮಾಧವ ಮಂದಿರ ಪಕ್ಕ ತೀರ್ಥಹಳ್ಳಿಯಲ್ಲಿ ಕೂಡ ಉಚಿತ ಕಿವಿಯ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ಕಾರ್ಯಕ್ರಮ ಹಾಗೂ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪತ್ರಕರ್ತರ ಸಂಘ ಮತ್ತು ಲಯನ್ಸ್ ಕ್ಲಬ್ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ.
ಅನೇಕ ಸಾಮಾಜಿಕ ಕಾರ್ಯವನ್ನು ಮುಂದುವರಿಸಿಕೊಂಡು ಬರುತ್ತಿರುವ ಟೀಮ್ ಈಶ್ವರ್ ಮಲ್ಪೆಯವರು ಶ್ರವಣದ ಸಮಸ್ಯೆಯಿಂದ (ಕೇಳಿಸಿಕೊಳ್ಳುವ ಸಮಸ್ಯೆ) ಬಳಲುತ್ತಿರುವ ರೋಗಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಉಚಿತ ಶಿಬಿರವನ್ನು ಮಾಡುತ್ತಿದ್ದು, ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಟೀಮ್ ಈಶ್ವರ್ ಮಲ್ಪೆಯವರು ಶ್ರವಣದ ಯಂತ್ರಕ್ಕೆ ತಗಲುವ ವೆಚ್ಚದ ಶೇಕಡಾ 40% ಮೊತ್ತವನ್ನು ಭರಿಸಲಾಗುತ್ತಿದ್ದು, ಸಮಸ್ಯೆಯಿರುವವರು ಈ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ಟೀಮ್ ಈಶ್ವರ್ ಮಲ್ಪೆ ಮತ್ತು ತೀರ್ಥಹಳ್ಳಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ತೀರ್ಥಹಳ್ಳಿ ತಾಲೂಕು ಘಟಕ ಇವರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 8951804399, 99010 62533








