- ಗಡಿ ನುಸುಳಲು ಯತ್ನಿಸುತ್ತಿದ್ದ ವೇಳೆ ಘಟನೆ
- ಮತ್ತೆ ಗಡಿಯಲ್ಲಿ ಚೀನಾ ತಂಟೆ ಶುರು?
ನವ ದೆಹಲಿ: ಪದೇ ಪದೇ ಗಡಿಯಲ್ಲಿ ಖ್ಯಾತೆ ತೆಗೆಯುವ ಚೀನಾದ ವಿರುದ್ಧ ಭಾರತ ಸಿಡಿದೆದ್ದಿರುವ ಬೆನ್ನಲ್ಲೇ ಲಡಾಕ್ನಲ್ಲಿ ಭಾರತದ ಗಡಿಯೊಳಗೆ ನುಸುಳಲು ಪ್ರಯತ್ನಿಸುತ್ತಿದ್ದ ಚೀನಾದ ಯೋಧನೊಬ್ಬನನ್ನು ಸೇನೆಯು ವಶಕ್ಕೆ ಪಡೆದುಕೊಂಡಿದೆ.
ಚೀನಾದ ಯೋಧನ ಬಗ್ಗೆ ಎಲ್ಲಾ ರೀತಿಯ ಮಾಹಿತಿ ಪಡೆದು, ಶಿಷ್ಟಾಚಾರ ಪೂರೈಸಿದ ಬಳಿಕ ಮರಳಿ ಕಳುಹಿಸಲಾಗುವುದು ಎಂದು ವರದಿಗಳು ತಿಳಿಸಿವೆ.
ಇತ್ತೀಚಿನ ಕೆಲವು ತಿಂಗಳಿಂದ ಗಡಿಯಲ್ಲಿ ಭಾರತ ಹಾಗೂ ಚೀನಾ ಮಧ್ಯೆ ಸಂಘರ್ಷವು ನಡೆಯುತ್ತಿದೆ.ಲಡಾಖ್ನ ಡೆಮ್ಚೊಕ್ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆ ಚೀನಾದ ಪಿಎಲ್ಎ ಸೇನೆಯ ಸೈನಿಕನೊಬ್ಬನನ್ನು ಭಾರತೀಯ ಸೇನೆ ಬಂಧಿಸಿದೆ. ಆತ ಪ್ರಸ್ತುತ ಸೇನೆಯ ವಶದಲ್ಲಿದ್ದಾನೆ. ಚೀನೀ ಸೈನಿಕ ಭಾರತದಲ್ಲಿ ಬೇಹುಗಾರಿಕೆ ನಡೆಸುತ್ತಿದ್ದ ಎಂಬ ಗುಮಾನಿಯೊಂದಿಗೆ ತನಿಖೆ ನಡೆಸಲಾಗುತ್ತಿದೆ.
ಶಾಂಗ್ಸಿ ಪ್ರದೇಶದವನಾದ ಸೈನಿಕನ ಬಳಿ ಚೀನಾದ ನಾಗರಿಕ ಮತ್ತು ಸೇನಾ ದಾಖಲೆಗಳಿದ್ದವು. ಶಸ್ತ್ರಸಜ್ಜಿತ ಸೈನಿಕ ಕಾಪೆರ್Çರಲ್ ಶ್ರೇಣಿಯವನಾಗಿದ್ದು, ಆತನ ಹೆಸರು ವಾಂಗ್ ಯಾ ಲಾಂಗ್ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಡೆಮ್ಚೊಕ್ ಪ್ರದೇಶದಲ್ಲಿ ಓಡಾಡುತ್ತಿದ್ದಾಗ ಆತನನ್ನು ಸೇನೆ ಸೆರೆಹಿಡಿದಿದೆ. ಆತನ ಬಳಿ ಪತ್ತೆಯಾದ ನಾಗರಿಕ ಹಾಗೂ ಸೇನಾ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಚೀನಾದ ಸೈನಿಕನನ್ನು ಭದ್ರತಾ ಪಡೆಗಳು ಲಡಾಖ್ನ ಚುಮಾರ್- ಡೆಮ್ಚೊಕ್ ಪ್ರದೇಶದ ಬಳಿ ಬಂಧಿಸಿವೆ. ಆತ ಪ್ರಮಾದವಶಾತ್ ಭಾರತದ ಗಡಿಯೊಳಗೆ ಬಂದಿರಬಹುದು. ಉಭಯ ದೇಶಗಳ ನಡುವಿನ ಶಿಷ್ಟಾಚಾರ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಆತನನ್ನು ಚೀನಾದ ಪಡೆಗಳಿಗೆ ವಾಪಸ್ ಒಪ್ಪಿಸಲಾಗುವುದು ಎಂದು ಸೇನೆಯ ಮೂಲಗಳು ತಿಳಿಸಿವೆ.