- ರಿಷಭ್ ಪಂತ್ ಶುಭ್ಮನ್ ಗಿಲ್ ಹಾಗೂ ಚೇತೇಶ್ವರ್ ಪೂಜಾರ್ ಬ್ಯಾಟಿಂಗ್ ಆರ್ಭಟಕ್ಕೆ ಕಾಂಗರು ಪಾಳ್ಯ ಧೂಳಿ ಪಟ.
- ಬಾರ್ಡರ್ – ಗವಾಸ್ಕರ್ ಟ್ರೋಫಿಯನ್ನ ತನ್ನಲ್ಲೇ ಉಳಿದಿಕೊಂಡ ಭಾರತ.
ಬ್ರಿಸ್ಬೇನ್ (ಜ. 19): ಗಬ್ಬಾದಲ್ಲಿ ನಡೆದ ಬಾರ್ಡರ್ – ಗವಾಸ್ಕರ್ ಟ್ರೋಫಿಯ ಅಂತಿಮ ನಾಲ್ಕನೇ ರೋಚಕ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ 3 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಸರಣಿ ವಶಪಡಿಸಿಕೊಂಡಿದೆ. ಎರಡನೇ ಇನ್ನಿಂಗ್ಸ್ನಲ್ಲಿ ರಿಷಭ್ ಪಂತ್ ಆಟ ಹಾಗೂ ಶುಭ್ಮನ್ ಗಿಲ್, ಚೇತೇಶ್ವರ್ ಪೂಜಾರ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ರಹಾನೆ ಪಡೆ ಕಾಂಗರೂಗಳ ನಾಡಿನಲ್ಲಿ ಐತಿಹಾಸಿಕ ಜಯ ಸಾಧಿಸಿದೆ. ಈ ಮೂಲಕ ಬಾರ್ಡರ್ – ಗವಾಸ್ಕರ್ ಟ್ರೋಫಿಯನ್ನ ತನ್ನಲ್ಲೇ ಉಳಿದಿಕೊಂಡಿದೆ.
ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1 ಮುನ್ನಡೆ ಸಾಧಿಸುವ ಮೂಲಕ ಕಾಂಗರೂಗಳ ನಾಡಿನಲ್ಲಿ ಟೆಸ್ಟ್ ಸರಣಿ ಗೆದ್ದ ವಿಶೇಷ ಸಾಧನೆ ಮಾಡಿದೆ
ನಿನ್ನೆ ಆಸ್ಟ್ರೇಲಿಯಾವನ್ನು 294 ರನ್ಗೆ ಆಲೌಟ್ ಮಾಡಿ 328 ರನ್ಗಳ ಗುರಿ ಬೆನ್ನಟ್ಟಿದ ಭಾರತ ನಾಲ್ಕನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 4 ರನ್ ಗಳಿಸಿತ್ತು. ಅಂತಿಮ ಸೆಷನ್ನಲ್ಲಿ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ ಕಾರಣ ಬೇಗನೆ ದಿನದಾಟವನ್ನು ಮುಗಿಸಲಾಯಿತು.
ಇಂದು ಬ್ಯಾಟಿಂಗ್ ಮುಂದುವರೆಸಿದ ಭಾರತ ಆರಂಭದಲ್ಲೇ 7 ರನ್ ಗಳಿಸಿದ್ದ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಆದರೆ, 2ನೇ ವಿಕೆಟ್ಗೆ ಜೊತೆಯಾದ ಶುಭ್ಮನ್ ಗಿಲ್ ಹಾಗೂ ಚೇತೇಶ್ವರ್ ಪೂಜಾರ ಕ್ರೀಸ್ ಕಚ್ಚಿ ನಿಂತರು. ಶತಕದ ಜೊತೆಯಾಟ ಆಡಿದ ಈ ಜೋಡಿ ತಂಡದ ಗೆಲುವಿನ ಆಸೆಯನ್ನು ಚುಗುರಿಸಿತು.
ಆದರೆ, ಶತಕದ ಅಂಚಿನಲ್ಲಿ ಎಡವಿದ ಗಿಲ್ 146 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಿಡಿಸಿ 91 ರನ್ಗೆ ಔಟ್ ಆದರು. ನಾಯಕ ಅಜಿಂಕ್ಯಾ ರಹಾನೆ 1 ಸಿಕ್ಸ್, ಬೌಂಡರಿ ಬಾರಿಸಿ 24 ರನ್ಗೆ ಬ್ಯಾಟ್ ಕೆಳಗಿಟ್ಟರು. ಈ ಸಂದರ್ಭ ರಿಷಭ್ ಪಂತ್ ಹಾಗೂ ಪೂಜಾರ ಎಚ್ಚರಿಕೆಯ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿತು.
ಅರ್ಧಶತಕ ಬಾರಿಸಿದ ಬಳಿಕ ಪೂಜಾರ ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. 211 ಎಸೆತಗಳಲ್ಲಿ 56 ರನ್ ಗಳಿಸಿ ಎಲ್ಬಿ ಬಲೆಗೆ ಪೂಜಾರ ಸಿಲುಕಿದರು. ಮಯಾಂಕ್ ಅಗರ್ವಾಲ್ ಮತ್ತೊಮ್ಮೆ ವೈಫಲ್ಯ ಅನುಭವಿಸಿ 9 ರನ್ಗೆ ನಿರ್ಗಮಿಸಿದರು. ಆದರೆ, ಇತ್ತ ರಿಷಭ್ ಪಂತ್ ತಂಡದ ಗೆಲುವಿಗೆ ಹೋರಾಟ ನಡೆಸುತ್ತಲೇ ಇದ್ದರು.
ಅಂತಿಮ ಹಂತದಲ್ಲಿ ವಾಷಿಂಗ್ಟನ್ ಸುಂದರ್ ಜೊತೆಗೂಡಿದ ಪಂತ್ ಆಕರ್ಷಕ ಅರ್ಧಶತಕ ಸಿಡಿಸಿ ಬಿರುಸಿನ ಬ್ಯಾಟಿಂಗ್ ಮಾಡಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು. ಭಾರತ 97 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 329 ರನ್ ಬಾರಿಸಿ 3 ವಿಕೆಟ್ಗಳ ಜಯ ತನ್ನದಾಗಿಸಿತು.
ರಿಷಭ್ ಪಂತ್ 138 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ಸಿಡಿಸಿ ಅಜೇಯ 89 ರನ್ ಬಾರಿಸಿದರು. ಸುಂದರ್ 22 ರನ್ ಗಳಿಸಿದರು. ಆಸೀಸ್ ಪರ ಪ್ಯಾಟ್ ಕಮಿನ್ಸ್ 4 ವಿಕೆಟ್ ಕಿತ್ತರೆ, ನೇಥನ್ ಲ್ಯಾನ್ 2, ಜೋಷ್ ಹ್ಯಾಜ್ಲೆವುಡ್ 1 ವಿಕೆಟ್ ಪಡೆದರು.