-ಯಾರಿಗೆ ಕೋವ್ಯಾಕ್ಸಿನ್ ಸೂಕ್ತ, ಯಾರು ಲಸಿಕೆ ತೆಗೆದುಕೊಳ್ಳಬಾರದು?
-ಯಾವುದೇ ಅಡ್ಡ ಪರಿಣಾಮ ಬೀರದಂತೆ ಮುನ್ನೆಚ್ಚರಿಕೆ
ನವದೆಹಲಿ: ದೇಶಾದ್ಯಂತ ಕೋವಿಡ್ ವಿರುದ್ಧ ಲಸಿಕೆ ಅಭಿಯಾನ ಆರಂಭಿಸಿದ ಎರಡು ದಿನದ ನಂತರದ ಫ್ಯಾಕ್ಟ್ ಚೆಕ್ ಬಳಿಕ ಭಾರತ್ ಬಯೋಟೆಕ್ ಮುನ್ನೆಚರಿಕೆಯ ಮಾಹಿತಿಯನ್ನು ನೀಡಿದೆ.
ದುರ್ಬಲ ರೋಗ ನಿರೋಧಕ ಶಕ್ತಿ ಹೊಂದಿರುವ ಅಥವಾ ಅನಾರೋಗ್ಯಕ್ಕೆ ಒಳಗಾಗಿದ್ದರೆ ಮತ್ತು ಅಲರ್ಜಿ ಹೊಂದಿರುವ ವ್ಯಕ್ತಿಗಳು ಕೋವ್ಯಾಕ್ಸಿನ್ ಲಸಿಕೆ ತೆಗೆದುಕೊಳ್ಳುವುದು ಬೇಡ ಎಂದು ಲಸಿಕೆ ತಯಾರಿಕಾ ಭಾರತ್ ಬಯೋಟೆಕ್ ಎಚ್ಚರಿಕೆ ನೀಡಿದೆ.
ಈಗಾಗಲೇ ಭಾರತದಲ್ಲಿ ಕೋವಿಡ್ ಲಸಿಕೆ ವಿತರಣೆ ಅಭಿಯಾನ ಆರಂಭಗೊಂಡಿದ್ದು, ಕೇವಲ 580 ಮಂದಿಯಲ್ಲಿ ಅಡ್ಡಪರಿಣಾಮ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಭಾರತ್ ಬಯೋಟೆಕ್ ಪರಿಶೀಲನೆ ನಡೆಸಿದ ನಂತರ ಕೋವಿಡ್ ಲಸಿಕೆಯನ್ನು ಯಾರು ತೆಗೆದುಕೊಳ್ಳಬಹುದು, ಯಾರು ಲಸಿಕೆ ತೆಗೆದುಕೊಳ್ಳಬಾರದು ಎಂಬ ಬಗ್ಗೆ ಮಾಹಿತಿ ನೀಡಿದೆ.
ನೀವು ದೀರ್ಘಕಾಲದಿಂದ ಅನಾರೋಗ್ಯಕ್ಕೆ ಒಳಗಾಗಿದ್ದು ಚಿಕಿತ್ಸೆ ಪಡೆಯುತ್ತಿರುವುದಾದರೆ ಎಷ್ಟು ಸಮಯದಿಂದ ಮತ್ತು ಈಗಿನ ಆರೋಗ್ಯ ಪರಿಸ್ಥಿತಿ ಹೇಗಿದೆ ಎಂಬುದನ್ನು ತಿಳಿಸಬೇಕು. ಮತ್ತು ಕೆಳಗೆ ಹೇಳಿರುವ ಯಾವುದೇ ಲಕ್ಷಣಗಳು ಕಂಡುಬಂದರೂ ಲಸಿಕೆ ಪಡೆಯಬಾರದೆಂದು ತಿಳಿಸಿದೆ.
ಯಾವುದೇ ರೀತಿಯ ಅಲರ್ಜಿ ಸಮಸ್ಯೆ, ಜ್ವರದಿಂದ ಬಳಲುತ್ತಿದ್ದರೆ, ರಕ್ತಸ್ರಾವ ಸಮಸ್ಯೆ ಅಥವಾ ತೆಳು ರಕ್ತ ಹೊಂದಿರುವವರು, ರೋಗ ನಿರೋಧಕ ಶಕ್ತಿ ಹೊಂದಾಣಿಕೆಯಾಗದ ಅಥವಾ ರೋಗ ನಿರೋಧ ಶಕ್ತಿ ಕಡಿಮೆ ಇರುವವರು, ಗರ್ಭಿಣಿಯರು, ಮಗುವಿಗೆ ಸ್ತನಪಾನ ಮಾಡಿಸುವ ಮಹಿಳೆಯರು ಲಸಿಕೆ ಹಾಕಿಸಿಕೊಳ್ಳುವುದು ಬೇಡ. ಹಾಗೂ ಕೋವಿಡ್ 19 ಸೋಂಕಿಗೆ ಬೇರೆ ಲಸಿಕೆ ಹಾಕಿಸಿಕೊಂಡಿದ್ದರೆ ಕೋವ್ಯಾಕ್ಸಿನ್ ಲಸಿಕೆ ಪಡೆಯುವುದು ಬೇಡ.