- ಏನೇನು ಹೊಸ ಯೋಜನೆ..?, ಸಿಎಂ ಹೇಳಿದ್ದೇನು..?
- ಮೋದಿ, ಬೊಮ್ಮಾಯಿ ಅವರಿಂದ ಯುವ ಜನತೆಗೆ ಕರೆ
NAMMUR EXPRESS NEWS
ಬೆಂಗಳೂರು: ದೇಶಾದ್ಯಂತ 75ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿದೆ. ಈ ವೇಳೆ ಸಿಎಂ ಬೊಮ್ಮಾಯಿ ಹೊಸ 5 ಯೋಜನೆ ಘೋಷಣೆ ಮಾಡಿದ್ದಾರೆ.
ರಾಜ್ಯದ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಶೇ100ರಷ್ಟು ಶೌಚಾಲಯ ನಿರ್ಮಾಣಕ್ಕೆ 250 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದಿಂದ ಕುಂಬಾರ, ಕಮ್ಮಾರ, ಬಡಗಿ, ಶಿಲ್ಪಿಗಳು, ಭಜಂತ್ರಿ, ಬುಟ್ಟಿ ಹೆಣೆಯುವವರು, ವಿಶ್ವಕರ್ಮರು, ಮಾದರು ಮತ್ತಿತರ ಕುಶಲಕರ್ಮಿಗಳಿಗೆ ತಲಾ 50 ಸಾವಿರ ರೂ. ವರೆಗೆ ಸಹಾಯ ಧನ ಘೋಷಿಸಿದ್ದಾರೆ.
ರೈತ ವಿದ್ಯಾನಿಧಿ ಯೋಜನೆಯನ್ನು ಭೂ ರಹಿತ ಕೃಷಿ ಕಾರ್ಮಿಕರ ಮಕ್ಕಳಿಗೆ ವಿಸ್ತರಿಸಿದ್ದಾರೆ. ರಾಜ್ಯದಲ್ಲಿ ಹೊಸದಾಗಿ 4,050 ಅಂಗನವಾಡಿ ತೆರೆಯಲು ನಿರ್ಧರಿಸಲಾಗಿದ್ದು, ಇದರಿಂದ 8,100 ಮಹಿಳೆಯರಿಗೆ ಉದ್ಯೋಗ ಸಿಗಲಿದೆ. ರಾಜ್ಯದ ಸೈನಿಕರು ಕರ್ತವ್ಯದಲ್ಲಿದ್ದಾಗ ಮಡಿದರೆ, ಅವರ ಕುಟುಂಬಕ್ಕೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ಘೋಷಣೆ ಮಾಡಲಾಗಿದೆ.
ಸ್ತ್ರೀ ಶಕ್ತಿ ಸಂಘ ಅಭಿವೃದ್ಧಿ ಮಾಡಿದ್ದೇವೆ, ಶಾಲೆಗಳ ಅಭಿವೃದ್ಧಿ ಮಾಡುತ್ತಿದ್ದೇವೆ. ಸ್ಕಿಲ್ ಡೆವೆಲಪ್ಮೆಂಟ್ ಮಾಡುವ ಕೆಲಸ ನಡೆಯುತ್ತಿದೆ. 8 ಸಾವಿರ ಸರ್ಕಾರಿ ಶಾಲಾ ಕೊಠಡಿಗಳನ್ನು ಹೊಸದಾಗಿ ನಿರ್ಮಾಣ ಮಾಡುತ್ತಿದ್ದೇವೆ. ಆರೋಗ್ಯ ಕೇಂದ್ರಗಳನ್ನು ಅಪ್ ಗ್ರೇಡ್ ಮಾಡುತ್ತಿದ್ದೇವೆ. ಯುವಕರಿಗೆ 5 ಲಕ್ಷ ಉದ್ಯೋಗ ನೀಡುವ ವಿವೇಕಾನಂದ ಯೋಜನೆ ಜಾರಿ ಮಾಡಲಾಗಿದೆ, ಕನಕದಾಸ ಹಾಸ್ಟೆಲ್ ನಿರ್ಮಾಣ ಮಾಡುತ್ತಿದ್ದೇವೆ. ಕ್ಷೀರ ಅಭಿವೃದ್ಧಿ ಬ್ಯಾಂಕ್ ಸ್ಥಾಪನೆ ಮಾಡಿದ್ದೇವೆ ಎಂದು ತಿಳಿಸಿದರು.
3 ಸಾವಿರ ರಾಜ್ಯ ಹೆದ್ದಾರಿ ನಿರ್ಮಾಣ, ರೈಲ್ವೇ ಯೋಜನೆ ನಿರ್ಮಾಣ ಮಾಡುತ್ತಿದ್ದೇವೆ. ವಯಸ್ಸಾದವರಿಗೆ ಕನ್ನಡಕ ಕೊಡುವ ಕೆಲಸ ಮಾಡುತ್ತಿದ್ದೇವೆ. ಆ್ಯಸಿಡ್ ದಾಳಿಗೆ ಒಳಗಾದವರಿಗೆ 10 ಸಾವಿರ ರೂ. ಸಹಾಯ ಧನ ನೀಡುತ್ತಿದ್ದೇವೆ. ಆಶಾ ಕಾರ್ಯಕರ್ತೆಯರಿಗೆ ಸಹಾಯ ಧನ ಹೆಚ್ಚು ಮಾಡಿದ್ದೇವೆ. ಮಳೆಯಿಂದ ಮನೆ ಕಳೆದುಕೊಂಡರೆ 5 ಲಕ್ಷ ರೂ. ಪರಿಹಾರ ಕೊಡಲಾಗುತ್ತಿದೆ ಎಂದರು.
ನೀರಾವರಿ ಯೋಜನೆ ಸಂಪೂರ್ಣ ಮಾಡುವ ನಿಟ್ಟಿನಲ್ಲಿ ಸಂಕಲ್ಪ ಮಾಡಿದ್ದೇವೆ. ಸಾರಿಗೆಯಲ್ಲಿ ಮುಂದಿನ ದಿನಗಳಲ್ಲಿ ಹೊಸ ಕಾರ್ಯಕ್ರಮ ಜಾರಿ ಮಾಡುತ್ತಿದ್ದೇವೆ. ಸಂಶೋಧನಾ ಅಭಿವೃದ್ಧಿ ನೀತಿ, ಉದ್ಯೋಗ ನೀತಿ ಜಾರಿ ಮಾಡಿದ್ದೇವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಅಪ್ ಗ್ರೇಡ್ ಮಾಡಲಾಗುತ್ತಿದೆ. ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲಾಗುತ್ತಿದೆ. 750 ಗ್ರಾಮ ಪಂಚಾಯತಿ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದೇವೆ. ದೇಶದ 5 ಟ್ರಿಲಿಯನ್ ಡಾಲರ್ ಆರ್ಥಿಕ ಕೊಡುಗೆಗೆ 1 ಟ್ರಿಲಿಯನ್ ಕರ್ನಾಟಕದಿಂದ ಕೊಡುಗೆ ನೀಡುವ ಸಂಕಲ್ಪ ಮಾಡಿದ್ದೇವೆ. ನಾವೆಲ್ಲಾ ಒಟ್ಟಾಗಿ ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ಮಾಡೋಣ ಎಂದು ಜನತೆಗೆ ಕರೆ ನೀಡಿದರು.
ದೇಶ ಮೊದಲು, ದೇಶ ಕಟ್ಟಲು ಯುವಕರು ಮುಂದಾಗಬೇಕು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸದೃಢ ಭಾರತ ನಿರ್ಮಾಣ ಆಗಿದೆ. ಸಶಕ್ತ ಭಾರತವಾಗಿ ನಿರ್ಮಾಣ ಆಗುತ್ತಿದೆ. ಕೋವಿಡ್ ಸಮಯದಲ್ಲಿ ಸರ್ಕಾರಿ ನೌಕರರು ಮಾಡಿರುವ ಕೆಲಸ ಶ್ಲಾಘನೀಯ. ರಾಜ್ಯದ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ರಮ ತೆಗೆದುಕೊಳ್ಳುತ್ತೇವೆ.
- ಬಸವರಾಜ ಬೊಮ್ಮಾಯಿ
ಸಿಎಂ, ಕರ್ನಾಟಕ ಡಾ.ಸುಧಾಕರ್ ಭಾಷಣಕ್ಕೆ ಅಡ್ಡಿ.! - ಚನ್ನರಾಯಪಟ್ಟಣ ಸುತ್ತಮುತ್ತಲ ರೈತರಿಂದ ಪ್ರತಿಭಟನೆ
ಅಮೃತಮಹೋತ್ಸವದಲ್ಲಿ ದೇವನಹಳ್ಳಿ ಅನ್ನದಾತನ ಆಕ್ರೋಶ ಹೊರಹಾಕಿದ್ದು, ಭೂ ಸ್ವಾಧೀನ ವಿರೋಧಿಸಿ ಸಚಿವ ಡಾ.ಸುಧಾಕರ್ ಭಾಷಣಕ್ಕೆ ರೈತರು ಅಡ್ಡಿಪಡಿಸಿದ್ದಾರೆ.
ದೇವನಹಳ್ಳಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ನಡೆದಿದ್ದು ರೈತರು ತ್ರಿವರ್ಣ ಧ್ವಜ ಹಿಡಿದು ಮೈದಾನದ ಒಳಗೆ ನುಗ್ಗಲು ಯತ್ನಿಸಿದ್ದಾರೆ. KIADBಗೆ ಭೂಮಿ ನೀಡಲ್ಲ ಎಂದು ಪಟ್ಟು ಹಿಡಿದು ರೈತರ ಪ್ರೊಟೆಸ್ಟ್ ನಡೆಸಿದ್ದಾರೆ. ಚನ್ನರಾಯಪಟ್ಟಣ ಸುತ್ತಮುತ್ತಲ ರೈತರಿಂದ ಪ್ರತಿಭಟನೆ ನಡೆಸಿದ್ದಾರೆ. ಒಳ ನುಗ್ಗಲು ಯತ್ನಿಸಿದ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಚಿವರ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ರೈತರು ಯತ್ನಿಸಿದ್ದಾರೆ. ಈ ವೇಳೆ ತಡೆದ ಪೊಲೀಸರನ್ನು ತಳ್ಳಿ ಒಳ ನುಗ್ಗಲು ಯತ್ನ ನಡೆಸಿದ್ದು, ಪ್ರತಿಭಟನಾ ನಿರತ ರೈತರ ಮೇಲೆ ಪೊಲೀಸರಿಂದ ಲಘು ಲಾಠಿ ಪ್ರಹಾರ ಮಾಡಿದ್ದಾರೆ.
ಸ್ವಾತಂತ್ರ್ಯ ಬಂದರೂ ಸಮಾನತೆ, ಸಹೋದರತೆ ಮಾಯ
ನಮ್ಮದು ವೈವಿಧ್ಯತೆಯ ದೇಶ. ಇಲ್ಲಿ ಎಲ್ಲರಿಗೂ ಸಾಮಾಜಿಕವಾಗಿ ಒಂದೇ ಮೌಲ್ಯ ಸಿಗಬೇಕು. ಆರ್ಥಿಕ, ಸಾಮಾಜಿಕ ಪ್ರಭುತ್ವ ಸಿಗಬೇಕು. ಯಾರು ಅಸಮಾನತೆ ಇದೆ ಅವರು ತಿರುಗಿ ಬೀಳ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಮಾಜದಲ್ಲಿ ಯಾವಾಗಲೂ ಸಮಾನತೆ ಮುಖ್ಯ. ಅದಕ್ಕಾಗಿಯೇ ಸಂವಿಧಾನದಲ್ಲಿ ಎಲ್ಲವನ್ನೂ ಹೇಳಲಾಗಿದೆ. ಎಲ್ಲರಿಗೂ ಸಮಾನತೆ ಸಹೋದರತೆ ಸಿಗಬೇಕು. ಆದರೆ ಇಂದು ಧರ್ಮಾಧಾರಿತವಾಗುತ್ತಿದೆ. ಕೋಮುವಾದಿ ತನದಿಂದ ಪ್ರಜಾಪ್ರಭುತ್ವ ನಾಶವಾಗುತ್ತಿದ್ದು, ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆ ಬರುತ್ತಿದೆ. ಅದಕ್ಕಾಗಿ ನಾವು ಮತ್ತೆ ಹೋರಾಟ ಮಾಡಬೇಕಿದೆ ಕರೆ ನೀಡಿದ್ದಾರೆ.
ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಭಾನುವಾರ ನೀವೆಲ್ಲ ಜಾಹಿರಾತು ನೊಡಿದ್ದೀರಲ್ಲಿ ನೆಹರು ಅವರ ಭಾವಚಿತ್ರ ತೆಗೆದು ಹಾಕಿದ್ದಾರೆ. ಅಂಬೇಡ್ಕರ್ ಅವರನ್ನ ಕೊನೆಯಲ್ಲಿ ಹಾಕಿದ್ದಾರೆ, ಸಾವರ್ಕರ್ ಮೊದಲಿಗೆ ಹಾಕಿದ್ದಾರೆ. ಇದರಿಂದ ಆರ್ಎಸ್ಎಸ್ ಕಪಿಮುಷ್ಠಿಯಲ್ಲಿ ಈ ಸರ್ಕಾರವಿದೆ ಎಂಬುದು ತಿಳಿಯುತ್ತದೆ. ಆರ್ಎಸ್ಎಸ್ ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿಲ್ಲ. ಇದೇ ಸಾರ್ವಕರ್ ಬ್ರಿಟಿಷರಿಗೆ ನಾವು ಸಹಕರಿಸುತ್ತೇವೆಂದು ಮುಚ್ಚಳಿಕೆ ಬರೆದುಕೊಟ್ಟಿದ್ದರು. ಇವತ್ತು ಸಂದಿಗ್ಧತೆ ದೇಶದಲ್ಲಿದ್ದು, ಮತ್ತೊಮ್ಮೆ ಹೋರಾಟ ಅನಿವಾರ್ಯವಾಗಿದೆ. ಆ ದಿಕ್ಕಿನಲ್ಲಿ ನಾವೆಲ್ಲರೂ ಹೆಜ್ಜೆ ಇಡಬೇಕಿದೆ ಎಂದು ಸಲಹೆ ನೀಡಿದ್ದಾರೆ.