- ದೇಶದ ಇತಿಹಾಸದಲ್ಲೇ ಅತೀ ಕಡಿಮೆ ದಾಖಲು
ಮುಂಬೈ: 2020ನೇ ಆರ್ಥಿಕ ವರ್ಷದ ಜುಲೈ-ಸೆಪ್ಟೆಂಬರ್ ಅವಧಿಯ ಜಿಡಿಪಿ ಶೇ.7.5ರಷ್ಟು ಕುಸಿತ ಕಂಡಿದೆ. ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಆರ್ಥಿಕತೆ ಚೇತರಿಕೆ ಕಂಡಿದೆ.
ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿ (ಎನ್ಎಸ್ಒ), ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ನ.27ರಂದು 2020-21 ನೇ ಸಾಲಿನ ಎರಡನೇ ತ್ರೈಮಾಸಿಕ (ಜುಲೈ-ಸೆಪ್ಟೆಂಬರ್) ಅವಧಿಯ ಜಿಡಿಪಿಯನ್ನು ಸ್ಥಿರ (2011-12) ಮತ್ತು ಪ್ರಸ್ತುತ ಬೆಲೆಗಳ ಲೆಕ್ಕದಲ್ಲಿ ಪ್ರಕಟಿಸಿದ್ದು, ಎರಡನೇ ತ್ರೈಮಾಸಿಕದಲ್ಲಿ ಸ್ಥಿರ ಬೆಲೆಯಲ್ಲಿ ಜಿಡಿಪಿ 33.14 ಲಕ್ಷ ಕೋಟಿಯಷ್ಟಿದೆ. 2019-20 ರ ಎರಡನೇ ತ್ರೈಮಾಸಿಕದಲ್ಲಿ ಇದು 35.84 ಲಕ್ಷ ಕೋಟಿಯಷ್ಟಿತ್ತು. ಕಳೆದ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಶೇ.4.4 ರಷ್ಟು ಬೆಳವಣಿಗೆಯಲ್ಲಿದ್ದದ್ದು ಈ ಬಾರಿ ಶೇ.7.5 ರಷ್ಟು ಕುಸಿತ ಕಂಡಿದೆ ಎಂದು ಹೇಳಿದೆ.
32.78 ಲಕ್ಷ ಕೋಟಿಯಷ್ಟಿದ್ದ 2019-20 ರ ಎರಡನೇ ತ್ರೈಮಾಸಿಕದ ಒಟ್ಟು ಮೌಲ್ಯವರ್ಧನೆ(ಜಿವಿಎ) 2020-21 ರಲ್ಲಿ 30.49 ಲಕ್ಷ ಕೋಟಿಗೆ ಕುಸಿದಿದ್ದು ಶೇ.7.0 ರಷ್ಟು ಇಳಿಕೆಯಾಗಿದೆ. ಸ್ಥಿರ ಬೆಲೆ ಲೆಕ್ಕದಲ್ಲಿ 2020-21 ರ ಎರಡನೇ ತ್ರೈಮಾಸಿಕದ ಜಿಡಿಪಿ 47.22 ಲಕ್ಷ ಕೋಟಿಯಷ್ಟಿದ್ದು, 2019-20 ರಲ್ಲಿ 49.21 ಲಕ್ಷ ಕೋಟಿಯಷ್ಟಿತ್ತು. ಈ ಲೆಕ್ಕದಲ್ಲಿ ಕಳೆದ ಬಾರಿ ಬೆಳವಣಿಗೆ ಶೇ.5.9 ರಷ್ಟಿದ್ದದ್ದು ಈ ಬಾರಿ ಶೇ.4.0ರಷ್ಟಕ್ಕೆ ಕುಸಿದಿದೆ.
ದೇಶದ ಇತಿಹಾಸದಲ್ಲೇ ಕಡಿಮೆ!: ದೇಶದ ಜಿಡಿಪಿ ಸ್ವಾತಂತ್ರ್ಯದ ಇತಿಹಾಸದಲ್ಲೇ ಅತ್ಯಂತ ಕಡಿಮೆ ದಾಖಲಾಗಲಿದೆ ಎಂದು ಇನ್ಫೋಸಿಸ್ ಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಹೇಳಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ಜಿಡಿಪಿ ಕಡಿಮೆಯಾಗಿದೆ. ಜಾಗತಿಕ ವ್ಯಾಪಾರ ವಹಿವಾಟುಗಳೂ ಸಹ ಕುಸಿದಿದೆ. ದಿನವೊಂದಕ್ಕೆ 10 ಮಿಲಿಯನ್ ಜನರಿಗೆ ಲಸಿಕೆ ಹಾಕಿದರೂ ಸಹ ಎಲ್ಲಾ ಭಾರತೀಯರಿಗೂ ಲಸಿಕೆ ಹಾಕುವುದಕ್ಕೆ 140 ದಿನಗಳಾಗುತ್ತವೆ. ಇದು ಕೊರೋನಾ ತಡೆಗೆ ದೀರ್ಘಾವಧಿಯಾಗುತ್ತದೆ ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ.